'ಸೂಪರ್ ಹಿಟ್' ಹಾಡು ಬರೆದ ಸಾಹಿತಿಯ ದುಡಿಮೆ 'ಸೂಪರ್ ಮಾರ್ಕೆಟ್'ನಲ್ಲಿ !
"ಮಾಣಿಕ್ಯ ಮಲರಾಯ ಪೂವಿ...
ಮಹದಿಯಾಮ್ ಖದೀಜ ಬೀವಿ...
ಮಕ್ಕ ಎನ್ನ ಪುಣ್ಯ ನಾಟಿಲ್...
ವಿಲಸಿಡುಮ್ ನಾರೀ... ವಿಲಸಿಡುಮ್ ನಾರೀ..."
ಈ ಒಂದು ಮಲೆಯಾಳಂ ಹಾಡು ಇಂದು ಕೋಟ್ಯಾಂತರ ಯುವ ಹೃದಯಗಳ 'ಸೆನ್ಸೇಷನಲ್ ಸಾಂಗ್' ಆಗಿ ಪರಿವರ್ತನೆಗೊಂಡಿದೆ. ಪ್ರವಾದಿ ಮಹಮ್ಮದ್ (ಸ.ಅ.) ರವರ ಪತ್ನಿ ಖದೀಜಾ ಬೀವಿಯವರ ಕುರಿತಾಗಿ ರಚನೆಗೊಂಡ ಈ ಹಾಡಿನ ಇತಿಹಾಸ ನಿಮಗೆ ಗೊತ್ತೇ?
'ಒರು ಅಡಾರ್ ಲವ್' ಮಲೆಯಾಳಂ ಚಲನಚಿತ್ರ ಇನ್ನೂ ತೆರೆ ಕಂಡಿಲ್ಲ. ಅದಾಗಲೇ ಅದರ ಟ್ರೈಲರ್ ಅಂತಾರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಚಿತ್ರದ ನಟಿ ಪ್ರಿಯಾ ವಾರಿಯರ್ ರಾತ್ರಿ ಬೆಳಗಾಗುವುದರಲ್ಲಿ ಸ್ಟಾರ್ ನಟಿಯಾಗಿ ಕಂಗೊಳಿಸಿದ್ದಾಳೆ. ಚಿತ್ರದಲ್ಲಿ 'ಮಾಣಿಕ್ಯ ಮಲರಾಯ ಪೂವಿ...' ಹಾಡು ಅಳವಡಿಸಿರುವುದು ಪ್ರಸಿದ್ಧಿ ಪಡೆದಷ್ಟೇ ವಿವಾದಕ್ಕೂ ಕಾರಣವಾಗಿದೆ. ಒಟ್ಟಿನಲ್ಲಿ ಯುವ ಹೃದಯಗಳ ತಲ್ಲಣದ ಈ ಹಾಡಿನ ಹಿನ್ನೆಲೆ ಏನು? ಎಂಬುವುದು ನೋಡಿಕೊಂಡು ಬರೋಣ.
'ಮಾಣಿಕ್ಯ ಮಲರಾಯ ಪೂವಿ...' ಹಾಡಿಗೆ 40 ವರ್ಷಗಳ ಇತಿಹಾಸವಿದೆ. ಇದನ್ನು ರಚಿಸಿದವರು ಕೇರಳದ ತೃಶೂರಿನ ಪಿ.ಎಂ.ಎ. ಜಬ್ಬಾರ್. ಅವರೀಗ 60ರ ಹರೆಯ.
ತನ್ನ 16ರ ಹರೆಯದಲ್ಲಿ ಹಾಡು ಬರೆಯಲು ಪ್ರಾರಂಭಿಸಿದ ಜಬ್ಬಾರ್ ಒಟ್ಟು 500 ಕ್ಕೂ ಅಧಿಕ ಹಾಡುಗಳನ್ನು ರಚಿಸಿದ್ದಾರೆ. ತನ್ನ 20ರ ಹರೆಯದಲ್ಲಿ 'ಮಾಣಿಕ್ಯ ಮಲರಾಯ ಪೂವಿ...' ಯನ್ನು ಜಬ್ಬಾರ್ ಬರೆದಿದ್ದರು. 29 ವರ್ಷಗಳ ಹಿಂದೆ ಈದ್ ದಿನದಂದು ದೂರದರ್ಶನದಲ್ಲಿ ಈ ಹಾಡು ಪ್ರಕಟಗೊಂಡಿತ್ತು.
1992ರಲ್ಲಿ ಬಿಡುಗಡೆಗೊಂಡ 'ಏಝಾಂ ಬಹರ್' ಎಂಬ ಹೆಸರಿನ ಆಡಿಯೊ ಕ್ಯಾಸೆಟ್ ನಲ್ಲಿ ಈ ಹಾಡು ಹಾಕಲಾಗಿತ್ತು. ಅಂದು ಈ ಮಾಪಿಳ ಹಾಡು ಸೂಪರ್ ಹಿಟ್ ಆಗಿತ್ತು. ರಫೀಕ್ ತಲಶ್ಶೇರಿ ಸಂಗೀತ ನೀಡಿ ಪ್ರಥಮ ಬಾರಿಗೆ ಅಂದು ಹಾಡಿದ್ದರು. ನಂತರದ ದಿನಗಳಲ್ಲಿ ಬಹುತೇಕ ಗಾಯಕರು ಇದೇ ಹಾಡನ್ನು ವಿವಿಧ ವೇದಿಕೆಗಳಲ್ಲಿ ಹಾಡಲು ಆರಂಭಿಸಿದರು. ಆದರೂ ಅದು ಕೇರಳ ಹಾಗೂ ಮಲೆಯಾಳಿಗರಿಗೆ ಸೀಮಿತವಾಗಿತ್ತು.
ಇಂದು ಮತ್ತೆ ಈ ಹಾಡು ಮೈದೆಳೆದು ಸೆಟೆದು ನಿಂತಿದೆ. 'ಒರು ಅಡಾರ್ ಲವ್' ನಲ್ಲಿ ರೀಮಿಕ್ಸ್ ಸಂಗೀತದ ಮೂಲಕ ಪ್ರಣಯ ಹಾಡಾಗಿ ಪರಿವರ್ತನೆ ಗೊಂಡು ಜಾಗತಿಕ ಮಟ್ಟದ ಸುದ್ದಿಯಾಗಿದೆ. ಈ ಹಾಡಿನ ಮಧ್ಯೆ ಪ್ರಿಯಾ ವಾರಿಯರ್ ಅವರ ಕಣ್ಸನ್ನೆ ಯುವ ಸಮೂಹವನ್ನು ಬೌಲ್ಡ್ ಮಾಡಿದೆ. ಪ್ರವಾದಿ ಮುಹಮ್ಮದ್ (ಸ.ಅ.) ಹಾಗೂ ಅವರ ಪತ್ನಿ ಖದೀಜ ಬೀವಿಯವರನ್ನು ಹೊಗಳಿ ಬರೆದ ಹಾಡು ಇದಾಗಿರುವುದರಿಂದ ಸಹಜವಾಗಿಯೇ ಮುಸ್ಲಿಮರಲ್ಲಿ ಆಕ್ರೋಶ ಹುಟ್ಟಿಸಿದೆ. ಈ ಹಾಡು ಹಿಂತೆಗೆಯಬೇಕೆಂಬ ಧ್ವನಿಯೂ ಮೊಳಗಿದೆ. ಆದರೆ ಈ ಹಾಡು ರಚಿಸಿದ ಜಬ್ಬಾರ್ ಗೆ ಈ ವಿಷಯದಲ್ಲಿ ತಕರಾರಿಲ್ಲ. ಸಿನಿಮಾದಲ್ಲಿ ಹಾಡು ಅಳವಡಿಸಿದರೆ ಅಭ್ಯಂತರ ಇಲ್ಲವೆನ್ನುತ್ತಾರೆ.
ಹಾಡು ಅಳವಡಿಸಿದ ಸಿನಿಮಾ ಹಾಗೂ ಅದರ ನಟರು ಹಿಟ್ ಆಗಿರಬಹುದು. ಆದರೆ ಹಾಡು ರಚಿಸಿದ ಪಿ.ಎಂ.ಎ. ಜಬ್ಬಾರ್ ಈ ಇಳಿ ವಯಸ್ಸಲ್ಲೂ ಮರಳುನಾಡಲ್ಲಿ ಜೀವನದ ಜಟಕಾ ಬಂಡಿ ಸಾಗಿಸುತ್ತಿದ್ದಾರೆ. ಸುಮಾರು 10 ವರ್ಷ ಖತಾರ್ ನಲ್ಲಿ ಕೆಲಸ ಮಾಡಿ ಇದೀಗ ಕಳೆದ 5 ವರ್ಷಗಳಿಂದ ಸೌದಿ ಅರೇಬಿಯಾದ ರಿಯಾದ್ ಸಮೀಪದ ಅಲ್-ಮಲಝ್ ಎಂಬಲ್ಲಿ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಹಾಡು ಸೂಪರ್ ಹಿಟ್ ಆದರೂ ಅದರ ಕರ್ತೃ ಜಬ್ಬಾರ್ ಸೂಪರ್ ಮಾರ್ಕೆಟ್ ನಲ್ಲಿ ದಿನದೂಡುತ್ತಿದ್ದಾರೆ.
ಸೌದಿಯ ಸೂಪರ್ ಮಾರ್ಕೆಟ್ ನಲ್ಲಿ ಪಿ.ಎಂ.ಎ. ಜಬ್ಬಾರ್