ಅಪಹರಣಕಾರನೆಂಬ ಶಂಕೆಯಲ್ಲಿ ಯುವಕನನ್ನು ಥಳಿಸಿ ಕೊಂದರು

Update: 2018-02-22 14:49 GMT

ಜೈಪುರ, ಫೆ.22: ಅಪಹರಣಕಾರ ಎಂದು ತಪ್ಪಾಗಿ ತಿಳಿದು ಉತ್ತರ ಪ್ರದೇಶದ 25ರ ಹರೆಯದ ವಲಸೆ ಕಾರ್ಮಿಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಪರಿಣಾಮ ಆತ ಮೃತಪಟ್ಟ ಘಟನೆ ಜೈಪುರದಲ್ಲಿ ನಡೆದಿದೆ.

ಮುಹಮ್ಮದ್ ಫೈಝಲ್ ಎಂಬಾತ ಮೃತಪಟ್ಟ ಯುವಕ. ಈತ ಫೆಬ್ರವರಿ 3ರಂದು ತನ್ನ ಮನೆ ಸಮೀಪದ ಎರಡು ವರ್ಷ ಪ್ರಾಯದ ಹೆಣ್ಣು ಮಗುವನ್ನು ಮಾರುಕಟ್ಟೆಗೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಅಲ್ಲಿದ್ದ ಜನರು ಫೈಝಲ್ ಮಕ್ಕಳ ಅಪಹರಣಕಾರ ಎಂದು ಭಾವಿಸಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ಸುಮಾರು 50 ಜನರಿದ್ದ ಗುಂಪು ಫೈಝಲ್‌ನನ್ನು ಕಂಬವೊಂದಕ್ಕೆ ಕಟ್ಟಿ ಹಾಕಿ ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ. ಈ ಘಟನೆಯ ವಿಡಿಯೊ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಫೈಝಲ್‌ನ ಕುತ್ತಿಗೆ ಸೀಳುವಂತೆ ಸೂಚಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದವರಲ್ಲಿ ಕೆಲವು ಮಹಿಳೆಯರೂ ಇದ್ದು, ಫೈಝಲ್ ಒಂದು ಮಗುವಿಗೆ ಕಿರುಕುಳ ನೀಡಿದ್ದಾನೆ ಮತ್ತು ಇಬ್ಬರು ಮಕ್ಕಳನ್ನು ಅಪಹರಿಸಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಫೈಝಲ್‌ನನ್ನು ಹುಡುಕಿಕೊಂಡು ಘಟನಾಸ್ಥಳಕ್ಕೆ ಆಗಮಿಸಿದ ಅಸ್ಲಂ ಅನ್ಸಾರಿ ಎಂಬವರು ಸ್ಥಳೀಯರ ಗುಂಪು ಫೈಝಲ್‌ನಿಗೆ ಥಳಿಸುತ್ತಿರುವುದನ್ನು ಕಂಡು ದಂಗಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಅವರು ಫೈಝಲ್‌ನನ್ನು ಅಲ್ಲಿಂದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೈಝಲ್ ಬುಧವಾರದಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಫೈಝಲ್ ಮಾನಸಿಕ ಅಸ್ವಸ್ಥನಾಗಿದ್ದು ಮಕ್ಕಳ ಮೇಲೆ ದೌರ್ಜನ್ಯ ನಡೆಸುವಂಥ ವ್ಯಕ್ತಿಯಲ್ಲ ಎಂದು ಅಸ್ಲಂ ಪೊಲೀಸರಿಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News