ರೊಟೊಮ್ಯಾಕ್ ಮಾಲಕ ವಿಕ್ರಮ್ ಕೊಠಾರಿ, ಪುತ್ರನನ್ನು ಬಂಧಿಸಿದ ಸಿಬಿಐ

Update: 2018-02-22 15:37 GMT

ಹೊಸದಿಲ್ಲಿ, ಫೆ.22: ಏಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ 3,695 ಕೋಟಿ ರೂ. ವಂಚಿಸಿದ ಆರೋಪದಲ್ಲಿ ರೊಟೊಮ್ಯಾಕ್ ಪೆನ್ಸ್ ಸಂಸ್ಥೆಯ ಮಾಲಕ ವಿಕ್ರಮ್ ಕೊಠಾರಿ ಮತ್ತು ಅವರ ಪುತ್ರ ರಾಹುಲ್‌ನನ್ನು ಸಿಬಿಐ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ಬುಧವಾರದಂದು ಮೂರನೇ ಬಾರಿ ವಿಕ್ರಮ್ ಕೊಠಾರಿ ಮತ್ತು ರಾಹುಲ್‌ನನ್ನು ಸಿಬಿಐ ಅಧಿಕಾರಿಗಳು ಹೊಸದಿಲ್ಲಿಯ ಮುಖ್ಯ ಕಚೇರಿಯಲ್ಲಿ ವಿಚಾರಣೆಗೊಳಪಡಿಸಿದ್ದರು.

ಕಳೆದ ವಾರ ಸಿಬಿಐ ಅಧಿಕಾರಿಗಳು ಕೊಠಾರಿಯ ಕಾನ್ಪುರದ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದ್ದರು. ರೊಟೊಮ್ಯಾಕ್ ಗ್ಲೋಬಲ್ ಪ್ರೈ., ಲಿ. ನ ನಿರ್ದೇಶಕರಾಗಿರುವ ಕೊಠಾರಿ, ಅವರ ಪತ್ನಿ ಸಾಧನಾ ಮತ್ತು ಪುತ್ರ ರಾಹುಲ್ ಇತರ ಉದ್ದೇಶಗಳಿಗಾಗಿ ಬ್ಯಾಂಕ್ ಸಾಲವನ್ನು ಪಡೆದು ವಂಚಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಸಿಬಿಐ ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನಿಂದ ವಿಕ್ರಮ್ ಕೊಠಾರಿ ಕ್ರಮವಾಗಿ 754.77 ಕೋಟಿ ರೂ., 456.63 ಕೋಟಿ ರೂ., 771.07 ಕೋಟಿ ರೂ., 458.95 ಕೋಟಿ ರೂ., 330.68 ಕೋಟಿ ರೂ., 49.82 ಕೋಟಿ ರೂ. ಹಾಗೂ 97.47 ಕೋಟಿ ರೂ. ಸಾಲವನ್ನು ಪಡೆದು ವಂಚಿಸಿದ್ದಾರೆ.

ಜಾರಿ ನಿರ್ದೇಶನಾಲಯ ಕೂಡಾ ಕೊಠಾರಿ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಹಣ ವಂಚನಾ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ. ಕೊಠಾರಿ ಕುಟುಂಬಸ್ಥರು ದೇಶ ಬಿಟ್ಟು ತೆರಳದಂತೆ ತಡೆಯಲು ಬುಧವಾರದಂದು ಜಾರಿ ನಿರ್ದೇಶನಾಲಯವು ದೇಶದಿಂದ ಹೊರ ಹೋಗುವ ಎಲ್ಲಾ ಮಾರ್ಗಗಳಿಗೆ ಸೂಚನೆ ನೀಡಿತ್ತು ಎಂದು ಪತ್ರಿಕೆ ವರದಿ ತಿಳಿಸಿದೆ.

ವಿಕ್ರಮ್ ಕೊಠಾರಿ ವಿದೇಶದಿಂದ ಗೋಧಿಯನ್ನು ಆಮದು ಮಾಡುವ ಸಲುವಾಗಿ ಬ್ಯಾಂಕ್‌ಗಳಿಂದ ಸಾಲವನ್ನು ಪಡೆದಿದ್ದರು. ಆದರೆ ಆ ಹಣದಿಂದ ಗೋಧಿಯನ್ನು ಖರೀದಿಸದೆ ಇತರ ನಕಲಿ ಕಂಪೆನಿಗಳ ಮೂಲಕ ರೊಟೊಮ್ಯಾಕ್ ಪೆನ್ಸ್‌ಗೆ ಆ ಹಣವನ್ನು ವರ್ಗಾಯಿಸಿದ್ದರು ಎಂದು ಸಿಬಿಐ ತನ್ನ ದೂರಿನಲ್ಲಿ ತಿಳಿಸಿದೆ.

ವಿಚಾರಣೆಯ ವೇಳೆ ಕೊಠಾರಿ, ತಾನು ಯಾವ ತಪ್ಪನ್ನೂ ಮಾಡಿಲ್ಲ. ತಾನು ಬ್ಯಾಂಕ್‌ಗಳಿಂದ ಸಾಲವನ್ನು ಪಡೆದಿರುವುದು ನಿಜ. ಆದರೆ ಈ ಸಾಲವನ್ನು ನಾನು ಪಾವತಿಸುತ್ತೇನೆ ಎಂದು ವಾದಿಸಿರುವುದಾಗಿ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News