ಇರಾಕ್: ಭಾರತೀಯ ದೂತಾವಾಸದ ರಕ್ಷಣೆಗೆ ಅರೆಸೇನಾಪಡೆ ನಿಯೋಜನೆ ಸಾಧ್ಯತೆ

Update: 2018-02-22 17:28 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಫೆ.22: ಇರಾಕ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಾಗೂ ರಾಜತಾಂತ್ರಿಕ ಸಿಬ್ಬಂದಿಗಳಿಗೆ ಐಸಿಸ್ ಉಗ್ರರಿಂದ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ರಾಯಭಾರಿ ಕಚೇರಿಯ ಕಾವಲಿಗೆ ಅರೆ ಸೇನಾಪಡೆಯ ಕಮಾಂಡೋಗಳನ್ನು ಶೀಘ್ರ ನಿಯೋಜಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿ ಇರಾಕ್‌ನ ರಾಜಧಾನಿ ಬಾಗ್ದಾದ್‌ನಲ್ಲಿರುವ ಭಾರತೀಯ ರಾಯಭಾರಿ ಸಂಕೀರ್ಣದ ಸುತ್ತ ಸಶಸ್ತ್ರ ಪಡೆಗಳ ನಿಯೋಜನೆಗೆ ಇರಾಕ್ ಸರಕಾರದಿಂದ ಗೃಹ ಮತ್ತು ವಿದೇಶ ವ್ಯವಹಾರ ಸಚಿವಾಲಯ ಒಪ್ಪಿಗೆ ಪಡೆದಿದೆ . ಅತ್ಯುತ್ತಮ ಕಮಾಂಡೊಗಳನ್ನು ಒದಗಿಸುವಂತೆ ಸಿಆರ್‌ಪಿಎಫ್‌ಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಯಭಾರಿ ಕಚೇರಿ, ಅದರಲ್ಲಿರುವ ರಾಜತಾಂತ್ರಿಕ ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರ ರಕ್ಷಣೆಯ ಹೊಣೆಯನ್ನು ಇವರಿಗೆ ವಹಿಸಲಾಗುತ್ತದೆ . ಅಲ್ಲದೆ ಅವರು ಕರ್ತವ್ಯ ನಿಮಿತ್ತ ರಾಯಭಾರಿ ಕಚೇರಿಯಿಂದ ಹೊರ ತೆರಳುವ ಸಂದರ್ಭ ಅವರಿಗೆ ರಕ್ಷಣೆ ಒದಗಿಸುವ ಈ ಕಮಾಂಡೋಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಅನುಭವ ಪಡೆದವರು. ನಕ್ಸಲ್ ನಿಗ್ರಹ ಪಡೆಯ ಅರಣ್ಯ ಕಾರ್ಯಪಡೆಯ ವಿಶಿಷ್ಟ ತಂಡವಾಗಿರುವ ‘ಕೋಬ್ರಾ’ದ ಸದಸ್ಯರಾಗಿ ಕಾರ್ಯ ನಿರ್ವಹಿಸಿದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಸುಧಾರಿತ ಸ್ಫೋಟಕ ಸಾಧನಗಳ ನಿರ್ವಹಣೆ ಹಾಗೂ ಅಪಹೃತರ ರಕ್ಷಣಾ ಕಾರ್ಯಾಚರಣೆಯಲ್ಲಿ ಪಳಗಿದ ಕಮಾಂಡೋಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ. ಸಿಆರ್‌ಪಿಎಫ್ ಪಡೆಯು ದೇಶದ ಬೃಹತ್ ಅರೆಸೇನಾ ಪಡೆಯಾಗಿದೆ. ಈ ಕುರಿತು ಕೇಂದ್ರ ಸರಕಾರದ ಅಂತಿಮ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಗ್ದಾದ್‌ನಲ್ಲಿ ಭಾರತೀಯ ದೂತಾವಾಸದವರನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಲಾಗುತ್ತಿದೆ. ಅಲ್ಲದೆ ಐಸಿಸ್ ಉಗ್ರರಿಂದ ಆತ್ಮಹತ್ಯಾ ದಾಳಿ ಹಾಗೂ ಬಾಂಬ್ ದಾಳಿಗಳಿಂದ ಇರಾಕ್‌ನ ರಾಜಧಾನಿ ನಲುಗಿ ಹೋಗಿದೆ.

ಅಪಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ರಕ್ಷಣಾ ಕಾರ್ಯವನ್ನು ಇಂಡೊ-ಟಿಬೆಟಿಯನ್ ಗಡಿ ರಕ್ಷಣಾ ಪಡೆ ನಿರ್ವಹಿಸುತ್ತಿದ್ದರೆ, ನೇಪಾಳ ಹಾಗೂ ಶ್ರೀಲಂಕಾದ ಕೊಲಂಬೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ರಕ್ಷಣೆಯನ್ನು ಕ್ರಮವಾಗಿ ‘ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್’ ಹಾಗೂ ಗಡಿಭದ್ರತಾ ಪಡೆ ನಿರ್ವಹಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News