ಮೇವು ಹಗರಣ: ಲಾಲೂಗೆ ಮತ್ತೆ ಸಂಕಷ್ಟ

Update: 2018-02-23 17:29 GMT

ರಾಂಚಿ, ಫೆ.23: ಮೇವು ಹಗರಣಕ್ಕೆ ಸಂಬಂಧಿಸಿ ಸದ್ಯ ಜೈಲು ಪಾಲಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್‌ನ ಉಚ್ಚ ನ್ಯಾಯಾಲಯವು ತಳ್ಳಿಹಾಕಿದೆ. ದಿಯೋಗಡ್ ಖಜಾನೆಯಿಂದ 89.27 ಲಕ್ಷ ರೂ.ವನ್ನು ಮೋಸದಿಂದ ಪಡೆದುಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶ ಅಪರೇಶ್ ಕುಮಾರ್ ಸಿಂಗ್, ಹಗರಣ ನಡೆದ ಸಮಯದಲ್ಲಿ ಲಾಲೂ ಪ್ರಸಾದ್ ಮುಖ್ಯಮಂತ್ರಿ ಮತ್ತು ವಿತ್ತ ಸಚಿವರಾಗಿದ್ದರು ಎಂಬ ನೆಲೆಯಲ್ಲಿ ಜಾಮೀನು ಅರ್ಜಿಯನ್ನು ತಳ್ಳಿಹಾಕಿದ್ದಾರೆ.

ಲಾಲೂ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಎಲ್ಲ ಹಗರಣಗಳೂ ಅವರ ತಿಳುವಳಿಕೆಯಲ್ಲೇ ನಡೆದಿವೆ. ಹಾಗಾಗಿ ನ್ಯಾಯಾಲಯವು ಲಾಲೂ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲು ಇಚ್ಛೆ ಹೊಂದಿಲ್ಲ ಎಂದು ತಿಳಿಸಿದೆ. ಕಳೆದ ವರ್ಷ ಡಿಸೆಂಬರ್ 23ರಂದು ಸಿಬಿಐ ವಿಶೇಷ ನ್ಯಾಯಾಲಯ ಮೇವು ಹಗರಣದಲ್ಲಿ ಲಾಲು ಪ್ರಸಾದ್ ದೋಷಿ ಎಂದು ತೀರ್ಪಿತ್ತು ಅವರಿಗೆ ಮೂರು ವರ್ಷ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಅಂದಿನಿಂದ ಆರ್‌ಜೆಡಿ ಮುಖ್ಯಸ್ಥ ರಾಂಚಿಯ ಬಿರ್ಸಾ ಮುಂಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈವರೆಗೆ ಮೂರು ಪ್ರಕರಣಗಳಲ್ಲಿ ಲಾಲೂ ತಪ್ಪಿತಸ್ಥ ಎಂದು ಸಾಬೀತಾಗಿದೆ. 900 ಕೋಟಿ ರೂ. ನ ಮೇವು ಹಗರಣವು 90ರ ದಶಕದಲ್ಲಿ ಲಾಲೂ ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದ್ದಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ದುಮ್ಕಾ ಖಜಾನೆಯಿಂದ 3.97 ಕೋಟಿ ಹಾಗೂ ದೊರಂಡ ಖಜಾನೆಯಿಂದ 184 ಕೋಟಿ ರೂ. ಅಕ್ರಮವಾಗಿ ಪಡೆದ ಪ್ರಕರಣಗಳ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ. ಈ ಪ್ರಕರಣಗಳಲ್ಲೂ ಲಾಲೂ ಪ್ರಸಾದ್ ಪ್ರಮುಖ ಆರೋಪಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News