ಗೌರಿ ಹತ್ಯೆ ಪ್ರಕರಣ: ಹಿಂಜಾವೇ ಮುಖಂಡನ ಬಂಧನ, ಮಂಗಳೂರಿನಲ್ಲಿ ಮೂವರು ವಶಕ್ಕೆ?

Update: 2018-02-24 10:05 GMT
ಬಂಧಿತ ನವೀನ್

ಬೆಂಗಳೂರು, ಫೆ.24: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ(ಎಸ್‌ಐಟಿ)ವು ನಗರದ ಮೆಜೆಸ್ಟಿಕ್‌ನಲ್ಲಿ ಹಿಂದೂ ಜಾಗರಣಾ ವೇದಿಕೆಯ ಓರ್ವಮುಖಂಡನನ್ನು ಬಂಧಿಸಿದೆ. ಮಂಗಳೂರಿನಲ್ಲಿ ಮೂವರು ಯುವಕರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಕೆ.ಟಿ.ನವೀನ್ ಅಲಿಯಾಸ್ ಹೊಟ್ಟೆ ಮಂಜ ಬಂಧಿತ ಆರೋಪಿ. ಕದಲೂರು ಗ್ರಾಮದ ನವೀನ್ ಫೆ.18ರಂದು ಸಂಜೆ 6 ಗಂಟೆ ಸುಮಾರಿಗೆ ಪಿಸ್ತೂಲ್ನೊಂದಿಗೆ ಮೆಜೆಸ್ಟಿಕ್ಗೆ ಬಂದಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿಯನ್ವಯ ದಾಳಿ ನಡೆಸಿದ ಸಿಸಿಬಿ ಇನ್ಸ್ಪೆಕ್ಟರ್ ಬಿ.ರಾಜು ನೇತೃತ್ವದ ತಂಡ, ಆತನನ್ನು ಬಂಧಿಸಿದೆ. ಆತನಿಂದ ನಾಡಪಿಸ್ತೂಲ್ ಹಾಗೂ ‘ಪಾಯಿಂಟ್  32’ ರಿವಾಲ್ವರ್‌ನ ಐದು ಸಜೀವ ಗುಂಡುಗಳನ್ನು ಜಫ್ತಿ ಮಾಡಿದೆ. ಈ ಬಗ್ಗೆ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೀನ್ ಬಳಿ ಪಿಸ್ತೂಲ್ ಸಿಕ್ಕಿದ್ದರಿಂದ ಅನುಮಾನಗೊಂಡಿರುವ ಎಸ್‌ಐಟಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಆತ ನೀಡಿದ ಮಾಹಿತಿ ಆಧಾರದಲ್ಲಿ ಗುರುವಾರ ರಾತ್ರಿ ಮಂಗಳೂರಿನ ಮೂವರು ಯುವಕರನ್ನು ವಶಕ್ಕೆ ನಗರಕ್ಕೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ.

‘‘ನವೀನ್‌ನನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಿ, ನ್ಯಾಯಾಲಯದ ಅನುಮತಿ ಮೇರೆಗೆ 9 ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದೇವೆ. ಆತ ಯಾವ ಉದ್ದೇಶಕ್ಕಾಗಿ ನಗರಕ್ಕೆ ಬಂದಿದ್ದ ಹಾಗೂ ಆತನಿಗೆ ಶಸ್ತ್ರಾಸ್ತ್ರ ನೀಡಿದವರು ಯಾರು ಎಂಬ ವಿಚಾರವಾಗಿ ವಿಚಾರಣೆ ಮುಂದುವರಿದಿದೆ’’ ಎಂದು ಎಸ್ಐಟಿ ಮುಖ್ಯಸ್ಥ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ನವೀನ್‌ಗೆ ಗೌರಿ ಹಂತಕರ ಬಗ್ಗೆ ಸಂಪೂರ್ಣ ಮಾಹಿತಿಯಿದೆ ಎನ್ನಲಾಗುತ್ತಿದ್ದು, ಆದರೆ ಆತ ಕೃತ್ಯದಲ್ಲಿ ನೇರ ಭಾಗಿಯಾಗಿಲ್ಲ. ಕೊಲೆಗಾರರಿಗೆ ಬೆಂಗಳೂರಿಗೆ ಬರಲು ಹಾಗೂ ಬಳಿಕ ಯಶಸ್ವಿಯಾಗಿ ತಪ್ಪಿಸಿಕೊಳ್ಳಲು ನೆರವಾಗಿದ್ದನೆನ್ನಲಾಗಿದೆ. ಈ ನಿಟ್ಟಿನಲ್ಲಿ ಎಸ್.ಐ.ಟಿ. ತನಿಖೆಯನ್ನು ತೀವ್ರಗೊಳಿಸಿದೆ.

ಮಾಹಿತಿ ಇಲ್ಲ ಎಂದ ಮಂಗಳೂರು ನಗರ ಪೊಲೀಸ್ ಆಯುಕ್ತರು
ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಮೂವರು ಯುವಕರನ್ನು ಎಸ್.ಐ.ಟಿ. ವಶಕ್ಕೆ ಪಡೆದುಕೊಂಡ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಹೇಳಿದ್ದಾರೆ.
‘‘ಎಸ್.ಐ.ಟಿ.ಯವರು ಮಂಗಳೂರಿನಲ್ಲಿ ಯಾರನ್ನು ವಶಕ್ಕೆ ತೆಗೆದುಕೊಂಡ ಬಗ್ಗೆ ತನಗೆ ಮಾಹಿತಿ ನೀಡಿಲ್ಲ’’ ಎಂದು ಅವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News