ಸರಣಿ ಹಂತಕ ಮೋಹನ್‌ಗೆ 5ನೇ ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ

Update: 2018-02-24 11:09 GMT

ಮಂಗಳೂರು, ಫೆ.24: ಯುವತಿಯರ ಸರಣಿ ಹಂತಕ ಸಯನೈಡ್ ಮೋಹನ್ ಕುಮಾರ್‌ಗೆ ಅತ್ಯಾಚಾರ ಹಾಗೂ ಕೊಲೆಯ ಐದನೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೆಳ್ತಂಗಡಿಯ ಮೇಗಿನ ಮಾಲಾಡಿ ನಿವಾಸಿ ಯಶೋದಾ(28) ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಮಂಗಳೂರಿನ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೋಹನ್ ಕುಮಾರ್‌ನನ್ನು ಅಪರಾಧಿ ಎಂದು ಫೆ.23(ಶುಕ್ರವಾರ) ಘೋಷಿಸಿತ್ತು. ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸುವುದಾಗಿ ನ್ಯಾಯಾಧೀಶ ಡಿ.ಜೆ.ಪುಟ್ಟರಂಗ ಸ್ವಾಮಿ ತಿಳಿಸಿದ್ದರು. ಅದರಂತೆ ಇಂದು ಪೂರ್ವಾಹ್ನ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

ಇದರೊಂದಿಗೆ ಮೋಹನ್ ಕುಮಾರ್ ತನ್ನ ವಿರುದ್ಧ 20 ಅತ್ಯಾಚಾರ-ಹತ್ಯೆ ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡ ಐದು ಪ್ರಕರಣಗಳಲ್ಲಿ ನಾಲ್ಕರಲ್ಲಿ ಜೀವಾವಧಿ ಹಾಗೂ ಒಂದರಲ್ಲಿ ಮರಣ ಶಿಕ್ಷೆಗೊಳಗಾಗಿದ್ದಾನೆ. ಇನ್ನೂ 15 ಪ್ರಕರಣಗಳ ವಿಚಾರಣೆ ಬಾಕಿಯಿದೆ. ಪಬ್ಲಿಕ್ ಪ್ರಾಸಿಕ್ಯೂಷನ್ ಪರವಾಗಿ ಜುಡಿತ್ ಕ್ರಾಸ್ತಾ ವಾದಿಸಿದ್ದರು

ಏನಿದು ಪ್ರಕರಣ?

ಮೋಹನ್ ಕುಮಾರ್ ಬೆಳ್ತಂಗಡಿಯ ಮೇಗಿನ ಮಾಲಾಡಿ ನಿವಾಸಿ ಯಶೋದಾ(28)ಎಂಬಾಕೆ ಯೊಂದಿಗೆ ಸಲುಗೆ ಬೆಳೆಸಿ ಕೊಂಡಿದ್ದ. ಈ ಸಂದರ್ಭ ತನ್ನ ಹೆಸರನ್ನು ಶಶಿಧರ ಪೂಜಾರಿ ಎಂದು ಪರಿಚಯಿಸಿದ್ದ. ವಿವಾಹ ಆಗುವುದಾಗಿ ಹೇಳಿ ಚಿನ್ನಾಭರಣದೊಂದಿಗೆ ಬರು ವಂತೆ ಆಕೆಗೆ ತಿಳಿಸಿದ್ದ. ಅದರಂತೆ 2009ರ ಸೆ.24ರಂದು ಮನೆಯಲ್ಲಿ ಹೇಳದೆ ಬಂದ ಯಶೋದಾರನ್ನು ಹಾಸನಕ್ಕೆ ಕರೆದೊಯ್ದು ಅಲ್ಲಿ ಲಾಡ್ಜ್‌ವೊಂದರಲ್ಲಿ ಅತ್ಯಾಚಾರ ಎಸಗಿದ್ದನು. ಮರುದಿನ ಬೆಳಗ್ಗೆ ಆಕೆಯನ್ನು ಹಾಸನ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದ. ಗರ್ಭ ಧರಿಸಿದರೆ ತೊಂದರೆಯಾಗುತ್ತದೆ ಎಂದು ಹೇಳಿ ಆಕೆಗೆ ಗರ್ಭ ನಿರೋಧಕ ಮಾತ್ರೆ ಎಂದು ಸಯನೈಡ್‌ನ್ನು ನೀಡಿದ್ದ. ಅದನ್ನು ಶೌಚಾಲಯದಲ್ಲಿ ಸೇವಿಸುವಂತೆ ಸೂಚಿಸಿದ್ದ. ಅದರಂತೆ ಯಶೋದಾ ಸೆನೈಡ್ ಅನ್ನು ತಿಂದು ಶೌಚಾಲಯದಲ್ಲಿ ಕುಸಿದು ಮೃತಪಟ್ಟಿದ್ದಳು. ಆಕೆ ಮೃತಪಟ್ಟಿದ್ದನ್ನು ಖಚಿತ ಪಡಿಸಿಕೊಂಡ ಮೋಹನ್ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸ್ ದೂರು ದಾಖಲಾಗಿತ್ತು.

ಇದೇ ರೀತಿ 2009 ಅ.21ರಂದು ವನಿತಾ ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ಮೋಹನ್ ಕುಮಾರ್ ವಿರುದ್ಧ ಕೇಸು ದಾಖಲಾಗಿತ್ತು. ಈ ಸಂಬಂಧ 2009ರ ಡಿ.29ರಂದು ಈತನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ಮೋಹನ್ ಕುಮಾರ್, ಯಶೋದಾರನ್ನು ಕೊಲೆ ಮಾಡಿದ್ದನ್ನು ಬಾಯಿಬಿಟ್ಟಿದ್ದ. ಈ ಮೂಲಕ ಯಶೋದಾ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಒಟ್ಟು 20 ಯುವತಿಯರನ್ನು ಅತ್ಯಾಚಾರ ನಡೆಸಿ, ಸಯನೈಡ್ ನೀಡಿ ಹತ್ಯೆಗೈದ ಆರೋಪಕ್ಕೆ ಸಂಬಂಧಿಸಿ ಮೋಹನ್ ಕುಮಾರ್ ಸದಸ್ಯ ಜೈಲುಪಾಲಾಗಿದ್ದಾನೆ.

ತನ್ನ ವಿರುದ್ಧದ ನಾಲ್ಕು ಪ್ರಕರಣಗಳಲ್ಲಿ ಮೋಹನ್ ಅಪರಾಧಿ ಎಂಬುದು ಸಾಬೀತಾಗಿದೆ. ಈ ಪೈಕಿ ಸುನಂದಾ ಪ್ರಕರಣದಲ್ಲಿ ಮೋಹನ್ ಕುಮಾರ್‌ಗೆ ಮಂಗಳೂರು ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು ಹೈಕೋರ್ಟ್ ಕೂಡ ಎತ್ತಿಹಿಡಿದಿದೆ.

ಲೀಲಾವತಿ ಪ್ರಕರಣದಲ್ಲಿ 5 ವರ್ಷ ಸಜೆ, ಅನಿತಾ ಬರಿಮಾರ್ ಮತ್ತು ವಿನುತಾ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಜೀವಾವಧಿ ಶಿಕ್ಷೆಯ ಪ್ರಕರಣ ಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್‌ನಿಂದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಈ ಮಧ್ಯೆ ತೀರ್ಪನ್ನು ಮರು ವಿಮರ್ಶಿಸುವಂತೆ ಮೋಹನ್ ಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದು ವಿಚಾರಣೆಯಲ್ಲಿದೆ. ಒಟ್ಟು 20 ಅತ್ಯಾಚಾರ-ಹತ್ಯೆ ಪ್ರಕರಣ ಗಳಲ್ಲಿ ಉಳಿದ 15 ಪ್ರಕರಣಗಳು ಇನ್ನೂ ವಿಚಾರಣೆಗೆ ಬಾಕಿ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News