ಲಾಭದಾಯಕ ಹುದ್ದೆ: ಚುನಾವಣಾ ಆಯೋಗ ವಿರುದ್ಧದ ದೂರನ್ನು ವಾಪಸ್ ಪಡೆದ ಆಪ್ ಶಾಸಕರು
ಹೊಸದಿಲ್ಲಿ, ಫೆ.24: ಲಾಭದಾಯಕ ಹುದ್ದೆಯನ್ನು ಪಡೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ಚುನಾವಣಾ ಆಯೋಗದ ಶಿಫಾರಸ್ಸಿನ ಮೇರೆಗೆ ಅನರ್ಹಗೊಳಿಸಲ್ಪಟ್ಟಿದ್ದ ಆಮ್ ಆದ್ಮಿ ಪಕ್ಷದ 20 ಶಾಸಕರು ಆಯೋಗದ ವಿರುದ್ಧ ದಿಲ್ಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಲಾಭದಾಯಕ ಹುದ್ದೆಯನ್ನು ಪಡೆದುಕೊಂಡಿರುವ ಬಗ್ಗೆ ಬಂದಿರುವ ದೂರಿನ ಆಲಿಕೆಯನ್ನು ಮುಂದುವರಿಸುವ ಆಯೋಗದ ನಿರ್ಧಾರದ ವಿರುದ್ಧ ಆಪ್ ಶಾಸಕರು ಕಳೆದ ವರ್ಷ ಆಗಸ್ಟ್‌ನಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸಂಸದೀಯ ಕಾರ್ಯದರ್ಶಿಗಳಾಗಿ ತಮ್ಮ ಆಯ್ಕೆಯನ್ನು ಉಚ್ಚ ನ್ಯಾಯಾಲಯವು ಕಾದಿರಿಸುವಾಗ ಚುನಾವಣಾ ಆಯೋಗವು ಈ ವಿಷಯದ ಬಗ್ಗೆ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಶಾಸಕರು ತಮ್ಮ ಮನವಿಯಲ್ಲಿ ತಿಳಿಸಿದ್ದರು. ಉಚ್ಚ ನ್ಯಾಯಾಲಯದ ಪೀಠದ ಮುಂದೆ ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಮನವಿ ಸಲ್ಲಿಸಿರುವ ಕಾರಣ ಈ ಹಿಂದೆ ಸಲ್ಲಿಸಿರುವ ಮೇಲ್ಮನವಿಯನ್ನು ವಾಪಸ್ ಪಡೆಯುವುದಾಗಿ ಆಪ್ ಶಾಸಕರು ನ್ಯಾಯಾಧೀಶರಾದ ರೇಖಾ ಪಳ್ಳಿಯವರಿಗೆ ತಿಳಿಸಿದ್ದಾರೆ. ಈ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರಕಾರದ 21 ಶಾಸಕರು ಲಾಭದಾಯಕ ಹುದ್ದೆಯನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಪ್ರಶಾಂತ್ ಪಟೇಲ್ ಎಂಬವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಜನವರಿ 19ರಂದು ಆಪ್‌ನ 20 ಶಾಸಕರನ್ನು ಅನರ್ಹಗೊಳಿಸುವ ಸಲಹೆ ನೀಡಿತ್ತು. ಈ ಸಲಹೆಗೆ ಒಪ್ಪಿಗೆ ಸೂಚಿಸಿದ ರಾಷ್ಟ್ರಪತಿ, ಮರುದಿನವೇ ಈ ಕುರಿತ ದೂರಿಗೆ ಸಹಿ ಹಾಕಿದ್ದರು. ಇದಾದನಂತರ ಅನರ್ಹಗೊಂಡ ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದರು.