ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ: ನೀರವ್ ಮೋದಿ ಗುಂಪಿನ 523 ಕೋ. ರೂ. ಮೌಲ್ಯದ ಸೊತ್ತು ಮುಟ್ಟುಗೋಲು

Update: 2018-02-24 14:40 GMT

ಹೊಸದಿಲ್ಲಿ, ಫೆ. 24: ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ 11,400 ಕೋ. ರೂ. ವಂಚನೆಗೆ ಸಂಬಂಧಿಸಿ ವಜ್ರೋದ್ಯಮಿ ನೀರವ್ ಮೋದಿ ಗುಂಪಿಗೆ ಸೇರಿದ ಫ್ಲಾಟ್ ಹಾಗೂ ಫಾರ್ಮ್ ಹೌಸ್ ಸಹಿತ 523 ಕೋ. ರೂ. ನ 21 ಸೊತ್ತುಗಳನ್ನು ಜಾರಿ ನಿರ್ದೇಶನಾಲಯ ಶನಿವಾರ ಮುಟ್ಟುಗೋಲು ಹಾಕಿಕೊಂಡಿದೆ. ಹಣ ವಂಚನೆ ತಡೆ ಕಾಯ್ದೆ ಅಡಿಯಲ್ಲಿ ಈ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಹಣ ವಂಚನೆ ತಡೆ ಕಾಯ್ದೆ ಅಡಿಯಲ್ಲಿ ಸೊತ್ತು ಮುಟ್ಟುಗೋಲಿಗೆ ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ ಹಾಗೂ 81.16 ಕೋ. ರೂ. ಮೌಲ್ಯದ ಪೆಂಥ್‌ಹೌಸ್ (ಮೂರು ಫ್ಯಾಟ್‌ಗಳನ್ನು ಜೋಡಿಸಿ ನಿರ್ಮಿಸಿರುವುದು) ಹಾಗೂ ಮುಂಬೈಯ ವರ್ಲಿ ಪ್ರದೇಶದಲ್ಲಿ ಸಮುದ್ರದತ್ತ ಮುಖ ಮಾಡಿರುವ ಸಮುದ್ರ ಮಹಲ್ ಅಪಾರ್ಟ್‌ಮೆಟ್‌ನಲ್ಲಿರುವ 15.45 ಕೋ. ರೂ. ವೆಚ್ಚದ ಫ್ಲಾಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

‘‘ನೀರವ್ ಮೋದಿಯ 523.72 ಕೋ. ರೂ. ಮಾರುಕಟ್ಟೆ ಮೌಲ್ಯದ 21 ಸ್ಥಿರ ಸೊತ್ತು ಹಾಗೂ ಆತನಿಂದ ನಿರ್ವಹಣೆಗೊಳಗಾಗುತ್ತಿದ್ದ ಕಂಪೆನಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದು 6 ವಸತಿ ಸೊತ್ತು, 10 ಕಚೇರಿಗಳು, ಪುಣೆಯಲ್ಲಿರುವ ಎರಡು ಫ್ಲಾಟ್, ಆಲಿಬಾಗ್‌ನಲ್ಲಿರುವ ಸೋಲಾರ್ ಪ್ಲಾಂಟ್, ಫಾರ್ಮ್ ಹೌಸ್ ಹಾಗೂ ಅಹ್ಮದ್‌ನಗರ್‌ನ ಕಾರ್ಜಾತ್‌ನಲ್ಲಿರುವ 135 ಎಕರೆ ಭೂಮಿಯನ್ನು ಒಳಗೊಂಡಿದೆ’’ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ನೀರವ್ ಮೋದಿ ಟ್ರಸ್ಟ್‌ಗೆ ಸೇರಿದ ಆಲಿಬಾಗ್‌ನ ಕಡಲ ತೀರದ ಕಿಹಿಮ್ ಪ್ರದೇಶದಲ್ಲಿರುವ 42.70 ಕೋ. ರೂ.ಗೂ ಅಧಿಕ ಮೊತ್ತದ ಫಾರ್ಮ್ ಹೌಸ್ ಹಾಗೂ ಅದರ ಸಮೀಪದ ಭೂಮಿಯನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಇದೇ ರೀತಿ ಅಹ್ಮದಾನಗರ್ ಜಿಲ್ಲೆಯ ಕಾರ್ಜಾಟ್ ಪ್ರದೇಶದಲ್ಲಿರುವ 70 ಕೋ. ರೂ. ಮೌಲ್ಯದ 53 ಎಕರೆ ಸೋಲಾರ್ ಪವರ್ ಪ್ಲಾಂಟ್ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗಿದೆ. ಮುಂಬೈಯ ಲೋವರ್ ಪರೇಲ್‌ನಲ್ಲಿರುವ ಮಾರ್ಕ್ ಬ್ಯುಸಿನಸ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ನ ಹೆಸರಿನ 80 ಕೋ. ರೂ. ಮೌಲ್ಯದ ಎರಡು ಕಚೇರಿ ಸೊತ್ತುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಗೀತಾಂಜಲಿ ಗ್ರೂಪ್‌ನ ಪ್ರವರ್ತಕ ಮೆಹುಲ್ ಚೋಕ್ಸಿ ಹಾಗೂ ಮೋದಿ ಅವರ 100 ಕೋ. ರೂ. ಮೌಲ್ಯದ ಮ್ಯೂಚುವಲ್ ಫಂಡ್ ಹಾಗೂ ಶೇರುಗಳನ್ನು ಜಾರಿ ನಿರ್ದೇಶನಾಲಯ ಸ್ಥಗಿತಗೊಳಿಸಿದೆ.

ಮೋದಿಗೆ ಸೇರಿದ ಕನಿಷ್ಠ 9 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಕಾರುಗಳಲ್ಲಿ ರೋಲ್ಸ್ ರೋಯ್ಸ್ ಘೋಸ್ಟ್, ಮರ್ಸಿಡಸ್ ಬೆಂಝ್, ಪೋರ್ಸ್ ಪನಮೆರಾ, ಹೋಂಡಾ ವೇರಿಯೆಂಟ್, ಟೋಯೊಟಾ ಫೋರ್ಚೂನಲ್ ಹಾಗೂ ಇನ್ನೋವಾ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News