ದಮನ್,ದಿಯು ಮತ್ತು ಅಹ್ಮದಾಬಾದ್ ನಡುವೆ ವಾಯುಯಾನ ಸೇವೆಗೆ ಪ್ರಧಾನಿ ಮೋದಿ ಚಾಲನೆ

Update: 2018-02-24 15:09 GMT

ದಮನ್,ಫೆ.24: ದಮನ್ ಮತ್ತು ದಿಯು ನಡುವೆ ಹೆಲಿಕಾಪ್ಟರ್ ಹಾಗೂ ದಿಯು ಮತ್ತು ಅಹ್ಮದಾಬಾದ್ ನಡುವೆ ವಿಮಾನಯಾನ ಸೇವೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಯವರು ಶನಿವಾರ ಚಾಲನೆ ನೀಡಿದರು.

ದಮನ್‌ನಲ್ಲಿ ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಮೋದಿ, ಹೆಲಿಕಾಪ್ಟರ್ ಮತ್ತು ವಿಮಾನಯಾನ ಸೇವೆಗಳ ಆರಂಭದೊಂದಿಗೆ ದಮನ್ ಮತ್ತು ದಿವುಗಳ ಪ್ರವಾಸೋದ್ಯಮಗಳಿಗೆ ಭಾರೀ ಉತ್ತೇಜನ ದೊರೆಯಲಿದೆ ಎಂದರು.

ದಮನ್ ದೇಶದ ಅತ್ಯಂತ ಸ್ವಚ್ಛ ಕೇಂದ್ರಾಡಳಿತ ಪ್ರದೇಶಗಳಲ್ಲೊಂದಾಗಿದೆ ಎಂದ ಅವರು, ಈ ಹೆಗ್ಗಳಿಕೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಈಗ ದಮನ್ ನಿವಾಸಿಗಳದ್ದಾಗಿದೆ. ಇದು ದಮನ್‌ಗೆ ಹೆಚ್ಚಿನ ಪ್ರವಾಸಿಗಳನ್ನು ಆಕರ್ಷಿಸಲಿದೆ ಮತ್ತು ದಮನ್‌ನ ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದರು.

ಮೀನುಗಾರ ಸಮುದಾಯದ ಮೇಲಿನ ವ್ಯಾಟ್ ತೆಗೆದುಹಾಕಲು ದಮನ್ ಆಡಳಿತವು ನಿರ್ಧರಿಸಿದೆ ಎಂದು ಪ್ರಕಟಿಸಿದ ಮೋದಿ, ಮೀನುಗಾರರು ಸಂಪೂರ್ಣ ಲಾಭವನ್ನು ಗಳಿಸಲು ಇದು ನೆರವಾಗಲಿದೆ ಎಂದರು.

ಇದೇ ವೇಳೆ ಪ್ರಧಾನಿಯವರು ಜಲ ಸಂಸ್ಕರಣ ಘಟಕ, ವಿದ್ಯುತ್ ಉತ್ಪಾದನೆ, ಸೌರ ವಿದ್ಯುತ್ ಉತ್ಪಾದನೆ, ವಿಶ್ವವಿದ್ಯಾನಿಲಯ, ಅನಿಲ ಕೊಳವೆಮಾರ್ಗ ಮತ್ತು ಸಿಎನ್‌ಜಿ ಸ್ಟೇಷನ್ ಸೇರಿದಂತೆ ದಮನ್‌ನಲ್ಲಿ 1,000 ಕೋ.ರೂ.ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News