ಮೇನಲ್ಲಿ ಜೆರುಸಲೇಂಗೆ ರಾಯಭಾರಿ ಕಚೇರಿ ಸ್ಥಳಾಂತರ: ಅಮೆರಿಕ

Update: 2018-02-24 16:14 GMT

ವಾಶಿಂಗ್ಟನ್,ಫೆ.24: ಪ್ರಬಲ ಜಾಗತಿಕ ವಿರೋಧದ ನಡುವೆಯೇ ಅಮೆರಿಕವು ಇಸ್ರೇಲ್‌ನಲ್ಲಿರುವ ತನ್ನ ರಾಯಬಾರಿ ಕಚೇರಿಯನ್ನು ಟೆಲ್‌ಅವೀವ್‌ನಿಂದ ಜೆರುಸಲೇಂಗೆ ಮೇ ತಿಂಗಳ ವೇಳೆಗೆ ಸ್ಥಳಾಂತರಿಸಲಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಶುಕ್ರವಾರ ಘೋಷಿಸಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್, ಹಲವು ವಾರಗಳ ವಿಳಂಬದ ಬಳಿಕ ರಾಯಭಾರಿ ಕಚೇರಿಗೆ ರೂಪಿಸಲಾದ ಭದ್ರತಾ ಯೋಜನೆಗೆ ಅಂತಿಮ ಒಪ್ಪಿಗೆ ನೀಡಿದ್ದಾರೆಂದು ಹಿಲ್ ವರದಿ ಮಾಡಿದ್ದಾರೆ.

      ‘‘ಇಸ್ರೇಲ್‌ನ ಉದಯದ 70ನೇ ವರ್ಷಾಚರಣೆಯ ಸಂದರ್ಭದಲ್ಲಿಯೇ ಅಮೆರಿಕದ ರಾಯಭಾರಿ ಕಚೇರಿಯು ಟೆಲ್‌ಅವೀವ್‌ನಿಂದ ಜೆರುಸಲೇಂಗೆ ಸ್ಥಳಾಂತರಿಸಲಿದೆ. ಆರಂಭದಲ್ಲಿ ರಾಯಭಾರಿ ಕಚೇರಿಯು, ಜೆರುಸಲೇಂನಲ್ಲಿರುವ ಅಮೆರಿಕದ ಕಾನ್ಸುಲೇಟ್ ಜನರಲ್ ಕಾರ್ಯಾಲಯವಿರುವ ಅತ್ಯಾಧುನಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರೆ ಹೀಥರ್ ನ್ಯೂಯೆರ್ಟ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

 2019ರೊಳಗೆ ಅಮೆರಿಕವು ತನ್ನ ರಾಯಬಾರಿ ಕಚೇರಿಯನ್ನು ಜೆರುಸಲೇಂನಲ್ಲಿ ಬೇರೆಯೇ ಇರುವ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಲಿದೆ ಎಂದು ಇಸ್ರೇಲ್ ಪ್ರದಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.

  ಈ ಮಧ್ಯೆ ಶ್ವೇತಭವವು ಹೇಳಿಕೆಯೊಂದನ್ನು ನೀಡಿ, ‘‘ ಟೆಲ್‌ಅವೀವ್‌ನಿಂದ ಜೆರುಸಲೇಂಗೆ ರಾಯಭಾರಿ ಕಚೇರಿಯನ್ನು ವರ್ಗಾಯಿಸುವ ಐತಿಹಾಸಿಕ ಕ್ರಮದ ಬಗ್ಗೆ ನಾವು ತುಂಬಾ ಪುಳಕಿತರಾಗಿದ್ದೇವೆ ಹಾಗೂ ಮೇ ತಿಂಗಳಲ್ಲಿ ರಾಯಭಾರ ಕಚೇರಿಯು ಜೆರುಸಲೇಂನಲ್ಲಿ ಆರಂಭಗೊಳ್ಳುವುದನ್ನು ಕಾತರದಿಂದ ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದೆ.

  ಡೊನಾಲ್ಡ್ ಟ್ರಂಪ್ ತನ್ನ ಶುಕ್ರವಾರದ ಭಾಷಣದಲ್ಲಿ ಅಮೆರಿಕದ ರಾಯಭಾರಿ ಕಚೇರಿಯನ್ನು ಜೆರುಸಲೇಂಗೆ ವರ್ಗಾಯಿಸುವುದಕ್ಕಾಗಿ, ಶ್ರೀಮಂತ ಅಮೆರಿಕನ್ ಹಾಗೂ ಯೆಹೂದಿ ದಾನಿಗಳಿಂದ ಯಥೇಚ್ಛ ದೇಣಿಗಳ್ನು ಸಂಗ್ರಹಿಸುವ ಸಾಧ್ಯತೆಯ ಬಗೆಗೂ ತಾನು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದರು.

  ಜೆರುಸಲೇಂ ನಗರವು ಮುಸ್ಲಿಮ್, ಕ್ರೈಸ್ತರು ಹಾಗೂ ಯಹೂದಿಗಳ ಪವಿತ್ರ ಶ್ರದ್ದಾಕೇಂದ್ರಗಳಿರುವ ಸ್ಥಳವಾಗಿದೆ. ಆದರೆ ಇದೊಂದು ವಿವಾದಿತ ಪ್ರದೇಶವಾಗಿದ್ದು, ಇಸ್ರೇಲ್ ಹಾಗೂ ಫೆಲೆಸ್ತೀನ್‌ಗಳೆರಡೂ ಈ ನಗರದ ಮೇಲೆ ಹಕ್ಕುಸ್ಥಾಪನೆಗೆ ಯತ್ನಿಸುತ್ತಿದ್ದಾರೆ. ಫೆಲೆಸ್ತೀನಿಯರು ಜೆರುಸಲೇಂ ನಗರವನ್ನು, ಭವಿಷ್ಯತ್ತಿನಲ್ಲಿ ಸ್ಥಾಪನೆಯಾಗಲಿರುವ ತಮ್ಮ ದೇಶದ ರಾಜಧಾನಿಯೆಂದು ಪರಿಗಣಿಸಿದ್ದಾರೆ.

ಪಶ್ಚಿಮದಂಡೆ, ಗಾಝಾಗಳಲ್ಲಿ ಭುಗಿಲೆದ್ದ ಪ್ರತಿಭಟನೆ

 ಇಸ್ರೇಲ್‌ನಲ್ಲಿರುವ ತನ್ನ ರಾಯಭಾರಿ ಕಚೇರಿಯನ್ನು ಟೆಲ್‌ಅವೀವ್‌ನಿಂದ ಜೆರುಸಲೇಂ ನಗರಕ್ಕೆ ಮೇ ತಿಂಗಳಲ್ಲಿ ಸ್ಥಳಾಂತರಿಸುವ ಅಮೆರಿಕದ ನಿರ್ಧಾರಕ್ಕೆ ಅರಬ್ ಹಾಗೂ ಇತರ ಮುಸ್ಲಿಂ ರಾಷ್ಟ್ರಗಳಿಂದ ವ್ಯಾಪಕ ಖಂಡನೆ ಹಾಗೂ ಪ್ರತಿಭಟನೆ ವ್ಯಕ್ತವಾಗಿದೆ.

  ಮೇ ತಿಂಗಲ್ಲಿ ಜೆರುಸಲೇಂ ನಗರಕ್ಕೆ ತನ್ನ ರಾಯಭಾರಿ ಕಚೇರಿಯನ್ನು ಸ್ಥಳಾಂತರಿಸುವ ನಿರ್ಧಾರವನ್ನು ಅಮೆರಿಕವು ಶುಕ್ರವಾರ ಪ್ರಕಟಿಸಿದ ಬೆನ್ನಲ್ಲೇ ಇಸ್ರೇಲಿ ಸೈನಿಕರು ಹಾಗೂ ಫೆಲೆಸ್ತೀನ್ ಪ್ರತಿಭಟನಕಾರರ ಮಧ್ಯೆ ಪಶ್ಚಿಮದಂಡೆ ಹಾಗೂ ಗಾಝಾ ಪಟ್ಟಿ ಪ್ರದೇಶಗಳಲ್ಲಿ ಭಾರೀ ಘರ್ಷಣೆಗಳು ಭುಗಿಲೆದ್ದಿದ್ದು, ಕನಿಷ್ಠ 32 ಮಂದಿ ಫೆಲೆಸ್ತೀನ್ ನಾಗರಿಕರು ಗಾಯಗೊಂಡಿದ್ದಾರೆಂದು ಫೆಲೆಸ್ತೀನ್ ರೆಡ್ ಕ್ರಿಸೆಂಟ್ ಸೊಸೈಟಿಯು ತಿಳಿಸಿದೆ.

ಶುಕ್ರವಾರ ಮಧ್ಯಾಹ್ನ ಸಹಸ್ರಾರು ಫೆಲೆಸ್ತೀನಿಯರು ಪಶ್ಚಿಮದಂಡೆಯ ವಿವಿಧ ಸ್ಥಳಗಳಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಗಾಝಾ ಪಟ್ಟಿಗೆ ತಾಗಿಕೊಂಡಿರುವ ಇಸ್ರೇಲ್ ಗಡಿ ಸಮೀಪವೂ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆಂದು ‘ಹಾರೆಟ್ಝ್ ಡೈಲಿ’ ಪತ್ರಿಕೆ ವರದಿ ಮಾಡಿದೆ.

 ಅಮೆರಿಕವು ತನ್ನ ರಾಯಭಾರಿ ಕಚೇರಿಯನ್ನು ಜೆರುಸಲೇಂಗೆ ಸ್ಥಳಾಂತರಿಸುತ್ತಿರುವುದು ಅಸ್ವೀಕಾರಾರ್ಹ ನಡೆಯೆಂದು ಫೆಲೆಸ್ತೀನ್ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಅವರ ವಕ್ತಾರ ನಬಿಲ್ ಅಬು ರದೈನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕವು ಕೈಗೊಳ್ಳುವ ಯಾವುದೇ ಏಕಪಕ್ಷೀಯ ಕ್ರಮದಿಂದ ಅದಕ್ಕೆ ಮಾನ್ಯತೆ ಸಿಗಲಾರದು ಹಾಗೂ ಪ್ರದೇಶದಲ್ಲಿ ಶಾಂತಿಯನ್ನು ಸೃಷ್ಟಿಸುವ ಯಾವುದೇ ಪ್ರಯತ್ನಕ್ಕೂ ಅಡ್ಡಿಯಾಗಲಿದೆಯೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News