ಸೊಮಾಲಿಯಾ: ಅವಳಿ ಕಾರ್‌ಬಾಂಬ್ ದಾಳಿಗೆ ಕನಿಷ್ಠ 38 ಬಲಿ

Update: 2018-02-24 16:24 GMT

ಮೊಗಾದಿಶು,ಫೆ.24: ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿ ಶನಿವಾರ ಭಯೋತ್ಪಾದಕರು ನಡೆಸಿದ ಅವಳಿ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 38 ಮಂದಿ ಮೃತಪಟ್ಟಿದ್ದಾರೆ. ಸೊಮಾಲಿಯಾದ ಸಂಸತ್ ಭವನ ‘ವಿಲ್ಲಾ ಸೊಮಾಲಿಯಾ’ದ ಸಮೀಪವಿರುವ ಭದ್ರತಾ ತಪಾಸಣಾ ಠಾಣೆಯಲ್ಲಿ ಭಯೋತ್ಪಾದಕರು ಮನಬಂದಂತೆ ಗುಂಡುಹಾರಾಟ ನಡೆಸಿದ ಬಳಿಕ ಕಾರ್ ಬಾಂಬ್ ಸ್ಪೋಟಿಸಿದ್ದಾರೆ.

 ಕೆಲವೇ ನಿಮಿಷಗಳ ಬಳಿಕ ಭಾರೀ ಸ್ಫೋಟಕಗಳಿಂದ ತುಂಬಿದ ವಾಹನವೊಂದು ಅಧ್ಯಕ್ಷರ ಅರಮನೆಯ ಸಮೀಪದ ತಪಾಸಣಾಗೇಟನ್ನು ಮುರಿದು ನುಗ್ಗಲು ಯತ್ನಿಸಿದೆ. ಆದರೆ ಅಲ್ಲಿದ್ದ ಭದ್ರತಾ ಸಿಬ್ಬಂದಿಗಳು ಆ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. ವಾಹನದಲ್ಲಿದ್ದ ಎಲ್ಲಾ ಐದು ಮಂದಿಯನ್ನು ಭದ್ರತಾ ಸಿಬ್ಬಂದಿಗಳು ಹತ್ಯೆಗೈದಿದ್ದಾರೆಂದು ಎಂದು ಅಬ್ದುಲ್ಲಾಹಿ ಅಹ್ಮದ್ ತಿಳಿಸಿದ್ದಾರೆ.

ಈ ಅವಳಿ ಬಾಂಬ್ ದಾಳಿಗಳಲ್ಲಿ ಸೊಮಾಲಿಯಾದ ಕುಖ್ಯಾತ ಭಯೋತ್ಪಾದಕ ಸಂಘಟನೆ ಶಬಾಬ್‌ನ ಕೈವಾಡವಿದೆಯೆಂದು ಶಂಕಿಸಲಾಗಿದೆ. ಶಬಾಬ್ ಗುಂಪು, ಅಂತಾರಾಷ್ಟ್ರೀಯ ಬೆಂಬಲ ಹೊಂದಿರುವ ಸೊಮಾಲಿಯಾ ಸರಕಾರದ ಪದಚ್ಯುತಿಗಾಗಿ ಸಶಸ್ತ್ರ ಹೋರಾಟ ನಡೆಸುತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ಶಂಕಿತ ಶಬಾಬ್ ಉಗ್ರರು ಮೊಗಾದಿಶು ನಗರದಲ್ಲಿ ನಡೆಸಿದ ಸರಣಿ ಬಾಂಬ್ ಸ್ಫೋಟದಲ್ಲಿ 500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

2011ರಲ್ಲಿ ನಡೆದ ಭೀಕರ ಕದನದಲ್ಲಿ ಶಬಾಬ್ ಉಗ್ರರನ್ನು, ಸೊಮಾಲಿಯಾ ಪಡೆ ಆಫ್ರಿಕನ್ ಒಕ್ಕೂಟ ಪಡೆಯ ನೆರವಿನೊಂದಿಗೆ ರಾಜಧಾನಿ ಮೊಗಾ ದಿಶುವಿನಿಂದ ಹೊರಗಟ್ಟಿತ್ತು. ಆದಾಗ್ಯೂ ಶಬಾಬ್ ಸಂಘಟನೆಯೂ ಈಗಲೂ ಸೊಮಾಲಿಯಾದ ಅನೇಕ ಪ್ರದೇಶಗಳ ಮೇಲೆ ನಿಯಂತ್ರಣಹೊಂದಿದ್ದು, ಆಗಾಗ್ಗೆ ಸರಕಾರಿ ಪಡೆಗಳ ಮೇಲೆ ದಾಳಿ ನಡೆಸುತ್ತಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News