ಉಗ್ರರಿಗೆ ಆರ್ಥಿಕ ನೆರವು ತಡೆಗೆ ತುರ್ತು ಕ್ರಮ: ಪಾಕ್ ಭರವಸೆ

Update: 2018-02-24 16:36 GMT

ಇಸ್ಲಾಮಾಬಾದ್,ಫೆ.24: ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುತ್ತಿರುವ ಆರೋಪದಲ್ಲಿ ಅಂತಾರಾಷ್ಟ್ರೀಯ ಆರ್ಥಿಕ ಕಾರ್ಯಪಡೆಯ ‘ಬೂದುಪಟ್ಟಿ’ಗೆ ಸೇರ್ಪಡೆಗೊಳ್ಳುವುದನ್ನು ನಿನ್ನೆ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿರುವ ಪಾಕಿಸ್ತಾನವು ಶನಿವಾರ ಹೇಳಿಕೆಯೊಂದನ್ನು ನೀಡಿ, ಭಯೋತ್ಪಾದನೆಗೆ ಆರ್ಥಿಕ ನೆರವು ಹಾಗೂ ಕಪ್ಪು ಹಣ ಬಿಳುಪುಗೊಳಿಸುವುದನ್ನು ತಡೆಯಲು ತಾನು ತ್ವರಿತಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ.

ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಪಾಕಿಸ್ತಾನದ ಕಾರ್ಯನಿರ್ವಹಣೆಯು ಇತರರಿಗಿಂತ ಉತ್ತಮವಾಗಿದ್ದರೂ, ಅದು ಇನ್ನೂ ಅಮೆರಿಕದಿಂದ ಒತ್ತಡವನ್ನು ಎದುರಿಸುತ್ತಿದೆಯೆಂದು ಪಾಕ್ ಗೃಹ ಸಚಿವ ಅಹ್ಸಾನ್ ಇಕ್ಬಾಲ್ ತಿಳಿಸಿದ್ದಾರೆ.

    ಪ್ಯಾರಿಸ್‌ನಲ್ಲಿ ಶುಕ್ರವಾರ ಸಭೆ ಸೇರಿದ ಜಾಗತಿಕ ಆರ್ಥಿಕ ಕಾರ್ಯಪಡೆಯು, ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ಹಾಗೂ ಆರ್ಥಿಕ ನೆರವು ನೀಡುತ್ತಿರುವ ಆರೋಪ ಎದುರಿಸುತ್ತಿರುವ ಪಾಕಿಸ್ತಾನವನ್ನು ಬೂದುಪಟ್ಟಿಗೆ ಸೇರ್ಪಡೆಗೊಳಿಸಬೇಕೆಂಬ ನಿರ್ಣಯವನ್ನು ಮಂಡಿಸಲು ಮುಂದಾಗಿತ್ತಾದರೂ, ಕಡೆಗಳಿಗೆಯಲ್ಲಿ ಅದನ್ನು ಕೈಬಿಡಲಾಗಿತ್ತು. ಪಾಕಿಸ್ತಾನವನ್ನು ಭಯೋತ್ಪಾದನೆಗೆ ಆಶ್ರಯ ನೀಡುತ್ತಿರುವ ರಾಷ್ಟ್ರಗಳ ಕಣ್ಗಾವಲು ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ಅಮೆರಿಕ ಹಾಗೂ ಬ್ರಿಟನ್ ಎಫ್‌ಎಟಿಎಫ್‌ಗೆ ಜಂಟಿಯಾಗಿ ಪತ್ರವೊಂದನ್ನು ಬರೆದಿದ್ದವು.

ಭಯೋತ್ಪಾದನೆಗೆ ಆರ್ಥಿಕ ನೆರವು ಹಾಗೂ ಆಶ್ರಯ ನೀಡುತ್ತಿರುವುದಕ್ಕಾಗಿ ಕಣ್ಗಾವಲಿಗೊಳಗಾಗುವ ದೇಶಗಳನ್ನು ಬೂದುಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತದೆ. 2012ರಿಂದ 2015ರವರೆಗೆ ಪಾಕಿಸ್ತಾನವು ಬೂದುಪಟ್ಟಿಯಲ್ಲಿತ್ತು. ಮತ್ತೆ ಬೂದುಪಟ್ಟಿಗೆ ಸೇರ್ಪಡೆಗೊಳ್ಳುವುದರಿಂದ ವಿದೇಶಿ ಹೂಡಿಕೆ ಹರಿದುಬರಲು ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ಮಾರುಕಟ್ಟೆಗಳನ್ನು ಪ್ರವೇಶಿಸಲು ಅಡ್ಡಿಯಾಗಲಿದೆಯೆಂಬ ಆತಂಕವನ್ನು ಪಾಕ್ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News