ಗಾಂಧೀಜಿ ಜಪದಿಂದ ಘನತೆ ಹೆಚ್ಚೀತೇ?

Update: 2018-02-24 18:06 GMT

ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ, ವಿಶೇಷವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ನಡೆಸಿದ ವಾಗ್ದಾಳಿ ನನಗೆ ಭಾರತೀಯ ಪ್ರಜಾಪ್ರಭುತ್ವವೆಂಬ ದೇವಾಲಯವನ್ನು ಅಪವಿತ್ರಗೊಳಿಸಿದಂತೆ ಅನ್ನಿಸಿತು. ಇದು ಎರಡು ಕಾರಣಗಳಿಗಾಗಿ.

ಮೊದಲನೆಯದಾಗಿ, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಒಂದು ಸರಕಾರದ ಮುಖ್ಯಸ್ಥರಾಗಿರುವ ಪ್ರಧಾನಿಯವರು ಪಕ್ಷದ ಕುಸ್ತಿಪಟುವಿನಂತೆ ವರ್ತಿಸಬಾರದು. ಅವರು ಇಡೀ ಭಾರತದ ಪ್ರಧಾನಿ, ಇದರಲ್ಲಿ ವಿಪಕ್ಷಗಳು ಸೇರುತ್ತವೆ.
ಮೋದಿಯವರ ಪಕ್ಷದ ಸಹೋದ್ಯೋಗಿಗಳು ಅವರು ಆಡಿದ ಮಾತುಗಳಿಗೆ ಸಮ್ಮತಿ ಸೂಚಿಸಲು ಮೇಜುಗಳನ್ನು ಗುದ್ದುವ ಮೂಲಕ ಅವರನ್ನು ಪ್ರೋತ್ಸಾಹಿಸಿ ಅವರಿಗೆ ಹಾನಿಯನ್ನು ಮಾಡಿದವು. ತುಂಬ ಅನುಭವವುಳ್ಳ ಎಲ್.ಕೆ. ಅಡ್ವಾನಿಯಂತಹ ಓರ್ವ ಸಂತ ಸಂಸದೀಯಪಟು ಮೋದಿಯವರ ಆವೇಶವನ್ನು ತಗ್ಗಿಸಬೇಕಿತ್ತು ಎಂದು ನನಗನ್ನಿಸಿತು. ದೇಶದ ಸ್ಥಿತಿಯ ಬಗ್ಗೆ ಮೋದಿ ಶಿಬಿರ ಎಷ್ಟೊಂದು ನಿರ್ಲಕ್ಷ ತೋರುತ್ತಿದೆ ಎನ್ನುವುದು ಕೂಡ ಆಶ್ಚರ್ಯದ ಸಂಗತಿ.

ಅರ್ಧ-ಸತ್ಯಗಳು ಮತ್ತು ಸುಳ್ಳುಗಳು

ಎರಡನೆಯದಾಗಿ, ಮೋದಿ ಸತ್ಯ ಸಂಗತಿಗಳನ್ನು ಹಾಗೂ ಸನ್ನಿವೇಶಗಳನ್ನು, ಅವುಗಳ ಸಂಕೀರ್ಣತೆಯನ್ನು ಅರಿಯದೆ, ತಪ್ಪುತಪ್ಪಾಗಿ ಉಲ್ಲೇಖಿಸುವುದನ್ನು ಕಂಡು ನನಗೆ ಆಘಾತವಾಯಿತು. ಭಾರತದ ರಾಜಕೀಯ ಭೂಪಟದಿಂದ ಕಾಂಗ್ರೆಸ್ ಪಕ್ಷವನ್ನು ಅಳಿಸಿ ಹಾಕಲು ಪ್ರಯತ್ನಿಸುವಲ್ಲಿ ತಾನು ಮಹಾತ್ಮಾ ಗಾಂಧಿಯವರ ಬಯಕೆಯನ್ನಷ್ಟೇ ಈಡೇರಿಸುತ್ತಿದ್ದೇನೆ ಎನ್ನುವ ದ್ವಂದ್ವಾರ್ಥದ ಅವರ ಮಾತುಗಳನ್ನಷ್ಟೇ ಇಲ್ಲಿ ಉಲ್ಲೇಖಿಸಿದರಷ್ಟೇ ಸಾಕು. ಫೆಬ್ರವರಿ 7ರಂದು ಸಂಸತ್‌ನಲ್ಲಿ ಮಾತನಾಡುತ್ತ ಮೋದಿ ಭಾರತೀಯ ಜನತಾ ಪಾರ್ಟಿಯು ಮಹಾತ್ಮಾ ಗಾಂಧಿಯ ಕಾಂಗ್ರೆಸ್ ಮುಕ್ತ ಭಾರತದ ಕನಸನ್ನು ನನಸು ಮಾಡಲಷ್ಟೇ ಪ್ರಯತ್ನಿಸುತ್ತಿದೆ ಎಂದರು. ‘‘ನಾನು ಕೂಡ ಮಹಾತ್ಮಾ ಗಾಂಧಿಯವರ ಭಾರತವನ್ನು ಬಯಸುತ್ತೇನೆ. ಯಾಕೆಂದರೆ ದೇಶ ಸ್ವತಂತ್ರವಾದಾಗ, ಗಾಂಧಿ ಹೇಳಿದ್ದರು, ‘ಇನ್ನು ಈಗ ನಮಗೆ ಕಾಂಗ್ರೆಸ್‌ನ ಅಗತ್ಯವಿಲ್ಲ’. ಕಾಂಗ್ರೆಸ್‌ಮುಕ್ತ ಭಾರತ ಎ್ನನುವುದು ಮೋದಿಯ ವಿಚಾರವಲ್ಲ. ಅದು ಗಾಂಧಿಯ ವಿಚಾರ. ನಾವು ಕೂಡ ಬಯಸುವುದು ಇದನ್ನೇ.’’

ಅಧಿಕಾರದಿಂದಾಗಿ ಕಾಂಗ್ರೆಸ್ ಭ್ರಷ್ಟವಾಗುವುದಕ್ಕಿಂತ ಅದನ್ನು ವಿಸರ್ಜಿಸುವುದು ಒಳ್ಳೆಯದು ಎಂಬ ಅರ್ಥದಲ್ಲಿ, ಉನ್ನತ ಆದರ್ಶಗಳ ನೆಲೆಯಲ್ಲಿ ಒಂದು ರಾಷ್ಟ್ರೀಯ ಚಳವಳಿಯಾಗಿದ್ದ ಕಾಂಗ್ರೆಸ್ ತನ್ನ ಪಾವಿತ್ರವನ್ನು ಕಳೆದುಕೊಳ್ಳುವ ಬದಲು ಅದನ್ನು ವಿಸರ್ಜಿಸುವುದು ಉತ್ತಮ ಎಂಬ ಅರ್ಥದಲ್ಲಿ ಗಾಂಧೀಜಿ ಹಾಗೆ ಹೇಳಿದ್ದಿರಬಹುದು. ಕಾಂಗ್ರೆಸ್ ಮಾಡಿದ ತಪ್ಪುಗಳಿಗಾಗಿ ಭಾರತದ ಮತದಾರರು ಅದನ್ನು ಅಧಿಕಾರದಿಂದ ಕೆಳಗಿಳಿಸಿದರು ಎಂಬುದರ ಅರ್ಥ, ಜನ ಸಾಮಾನ್ಯ ಇನ್ನೂ ಕೂಡ ಗಾಂಧೀಜಿ ಎತ್ತಿ ಹಿಡಿದಿದ್ದ ಆದರ್ಶಗಳಿಗೆ ತುಂಬ ಬೆಲೆ ಕೊಡುತ್ತಾನೆ, ಕೇರ್ ಮಾಡುತ್ತಾನೆ ಎನ್ನುವುದೇ ಆಗಿದೆ.

ಸ್ಥಾಪಿತ ಹಿತಾಸಕ್ತಿಗಳು ಕಾಂಗ್ರೆಸ್‌ನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಹುದೆಂದು ಗಾಂಧೀಜಿಯ ಐತಿಹಾಸಿಕ ಭಯದ ಕುರಿತು ಹೇಳುವಾಗ, ಗಾಂಧಿ ಹಾಗೆ ಭಯಪಟ್ಟದ್ದು ತನಗೆ ಹಾಗೂ ತನ್ನ ಪಕ್ಷಕ್ಕೆ ಅಧಿಕಾರಕ್ಕೆ ಬರುವ ಹಾದಿಯನ್ನು ಸುಗಮಗೊಳಿಸಲಿಕ್ಕಾಗಿ ಎಂಬ ಅಭಿಪ್ರಾಯ ಬರುವಂತೆ ಮೋದಿ ಮಾಡಿದ್ದಾರೆ. ಹಾಗಾದರೆ, ಗಾಂಧೀಜಿಯ ಮನದಾಸೆಯಂತೆ ನಡೆದುಕೊಳ್ಳುವ ತನ್ನ ಬದ್ಧತೆಯನ್ನು ಮೋದಿಯವರು ಭಾರತದ ವಿಭಜಕ, ಕೋಮು ಧ್ರುವೀಕರಣದ ವಿರುದ್ಧವಾಗಿಯೂ ಘೋಷಿಸಲು ಸಿದ್ಧರಿದ್ದಾಯೇ? ಗಾಂಧಿಗೆ ಗೌರವ ಸೂಚಕವಾಗಿ, ಹಿಂದೂಗಳು ಮತ್ತು ಮುಸ್ಲಿಮರು ಭಾರತ ಮಾತೆಯ ಎರಡು ಕಣ್ಣುಗಳು ಎಂದು ಮೋದಿ ಒತ್ತಿ ಹೇಳುತ್ತಾರೆಯೇ? ಅವರು ದ್ವೇಷ ಬ್ರಿಗೇಡ್‌ಗಳನ್ನು ಹದ್ದುಬಸ್ತಿನಲ್ಲಿಟ್ಟು, ಅದರ ಕಾವಲಿನಲ್ಲಿ ತಾವು ಸಬಲರು ಮತ್ತು ತಾವು ಏನು ಬೇಕಾದರೂ ಮಾಡಲು ತಮಗೆ ಪರವಾನಿಗೆ ಇದೆ ಎಂಬಂತೆ ವರ್ತಿಸುವ ಕೋಮುವಾದಿ ಮೋಟಾರ್ ಬಾಯಿಗಳನ್ನು ಮೋದಿ ಮುಚ್ಚಿಸುತ್ತಾರಾ? ತನಗೆ ಬೇಕಾದಾಗ, ತನಗೆ ಬೇಕಾದಂತೆ (ಸೆಲೆಕ್ಟಿವ್‌ಲಿ), ಗಾಂಧಿಯ ಹೆಸರನ್ನು ಉಲ್ಲೇಖಿಸುವುದು ಸತ್ಯದ ಪ್ರವಾದಿಯ ವಿರುದ್ಧ ಸುಳ್ಲು ಹೇಳುವುದಲ್ಲದೆ, ಸತ್ಯವನ್ನು ತಿರುಚುವುದಲ್ಲದೆ ಬೇರೇನೂ ಅಲ್ಲ. ಯಾಕೆಂದರೆ, ಅರ್ಧ ಸತ್ಯಗಳು ಸುಳ್ಳುಗಳಿಗಿಂತ ಹೆಚ್ಚು ಮಾರಕ, ಹೆಚ್ಚು ಭಯಾನಕ.

ಗಾಂಧಿ ಈಗ ಬದುಕಿರುತ್ತಿದ್ದರೆ
ಮಹಾತ್ಮಾ ಗಾಂಧಿ ಇಂದು ಬದುಕಿದ್ದರೆ, ಮೋದಿ ಖಂಡಿತವಾಗಿಯೂ ಭಾರತದ ಭವಿಷ್ಯವನ್ನು ಮುನ್ನಡೆಸುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷ ತನ್ನ ಆದರ್ಶಗಳಲ್ಲಿ ಅವನತಿ ಹೊಂದುತ್ತಿರಲಿಲ್ಲ ಮತ್ತು ಮೃದು ಹಿಂದುತ್ವದ ವಿಕಾರಗಳಿಂದ ಅದು ಸೈದ್ಧಾಂತಿಕವಾಗಿ ಕಳಂಕಿತವಾಗಲು ಗಾಂಧಿ ಬಿಡುತ್ತಿರಲಿಲ್ಲ. ಹಿಂದುತ್ವವಾದಿ ನಿಲುವುಗಳು ಮತ್ತು ತಂತ್ರಗಳ ಪ್ರತಿಯೊಂದು ಮುಖವನ್ನೂ ಖಂಡಿಸುವುದರಲ್ಲಿ ಅವರೇ ಮುಂಚೂಣಿಯಲ್ಲಿರುತ್ತಿದ್ದರು. ರಾಷ್ಟ್ರದ ಮೇಲೆ ಸುಳ್ಳುಗಳು ಹಾಗೂ ಅರ್ಧ ಸತ್ಯಗಳ ಮಳೆಗೆರೆಯುವುದರ ವಿರುದ್ಧ ಗಾಂಧೀಜಿ ಆಮರಣಾಂತ ಉಪವಾಸ ಕೈಗೊಳ್ಳುತ್ತಿದ್ದರು.

ಸ್ವಾರ್ಥ ಬಂಡವಾಳಶಾಹಿಗಳ ಜತೆ ಆಪ್ತ ಸಂಬಂಧ ಹೊಂದಿರುವುದಕ್ಕಾಗಿ ಈ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು ಮತ್ತು ರೈತನೊಬ್ಬನು ಆತ್ಮಹತ್ಯೆ ಮಾಡಿಕೊಂಡಾಗ, ಓರ್ವ ದಲಿತ ದೌರ್ಜನ್ಯಕ್ಕೊಳಗಾದಾಗ, ಅಥವಾ ಒಬ್ಬ ಅಸಹಾಯಕ ಮನುಷ್ಯ ಅವಮಾನಿತನಾದಾಗ ಮತ್ತು ಗದರಿಸಲ್ಪಟ್ಟಾಗ, ಪ್ರತಿಬಾರಿಯೂ ಗಾಂಧೀಜಿ ಅತ್ಯಾಸೆಯ ದೊರೆಗಳನ್ನು ಖಂಡಿಸುತ್ತಿದ್ದರು. ಬಡತನ, ಶೋಷಣೆ ಮುಕ್ತ, ಹಿಂಸೆ, ಭಯ ಮುಕ್ತ ಭಾರತಕ್ಕಾಗಿ ಅವರು ಹಕ್ಕೊತ್ತಾಯ ಸಲ್ಲಿಸುತ್ತಿದ್ದರು. ಈ ವಿಷಯಗಳಲ್ಲಿ ಅವರು ಎಂದಿಗೂ ಯಾವುದೇ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಪ್ರಧಾನಿ ಮೋದಿಯವರು ಕೆಲಸದ ಜಾಗವನ್ನು ಶಬ್ದಗಳು ತುಂಬಬಹುದೆಂದು ನಂಬಿರುವುದು ಶೋಚನೀಯ. ವಾಕ್ಚಾತುರ್ಯದ ಒಂದು ಕಬ್ಬಿಣದ ಪರದೆಯಿಂದ ಮನುಷ್ಯನ ಹಸಿವು ಹಾಗೂ ಬೃಹತ್ ಯಾತನೆಯನ್ನು ಹಿಂದಕ್ಕೆ ತಳ್ಳಬಹುದೆಂದು ಅವರು ನಂಬಿರುವಂತೆ ಕಾಣುತ್ತದೆ. ಮೋಸ ಹೋದಾಗ ಸಹಜವಾಗಿಯೇ ಬರುವ ಜನತೆಯ ಸಿಟ್ಟಿನಶಾಖದಲ್ಲಿಶಬ್ದಗಳು ಆವಿಯಾಗಿ ಹೋಗುತ್ತವೆಂಬ ಸತ್ಯ ತಿಳಿಯಲು ಬಹಳ ಸಮಯ ಬೇಕಾಗುವುದಿಲ್ಲ.

ನಾಲ್ಕು ವರ್ಷಗಳ ಹಿಂದೆ, ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲು ಕಾಂಗ್ರೆಸ್ ಪಕ್ಷ ತನ್ನಿಂದಾದ ಎಲ್ಲವನ್ನೂ ಮಾಡಿತ್ತು ಎನ್ನುವುದಾದರೆ, ಈಗ ಮೋದಿಯವರ ಬಿಜೆಪಿ ತನ್ನಿಂದಾದ ಎಲ್ಲವನ್ನೂ ಮಾಡಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಸಮಯ ಬಂದಿದೆ ಅನ್ನಿಸುತ್ತದೆ. ಮೋದಿ ಮ್ಯಾಜಿಕ್ ಮಸುಕಾಗುತ್ತಿದೆ, ವಿಫಲವಾಗುತ್ತಿದೆ ಎಂಬುದು ಬಿಜೆಪಿಯನ್ನು ಚಿಂತೆಗೀಡು ಮಾಡಬೇಕಾಗಿದೆ. ಯಾಕೆಂದರೆ ಮೋದಿ ಮ್ಯಾಜಿಕ್ ಹೊರತಾಗಿ ಆ ಪಕ್ಷಕ್ಕೆ ಆತುಕೊಳ್ಳಲು ಬೇರೇನೂ ಉಳಿದಿಲ್ಲ. ಕಾಂಗ್ರೆಸ್‌ನ ಸೋಲುಗಳನ್ನೇ ಭಜನೆ ಮಾಡಿ ಮತದಾರರನ್ನು ಮಂಕುಗೊಳಿಸಬಹುದೆಂಬುದು ಶುದ್ಧ ಮೂರ್ಖತನ.

ಕಾಂಗ್ರೆಸ್ ಪಕ್ಷ ಬಿಜೆಪಿಯ ಶತ್ರುವಿರಬಹುದು. ಆದರೆ ಜನಸಾಮಾನ್ಯನ ಶತ್ರುಗಳು ಬೇರೆಯೇ ಆಗಿವೆ ಮತ್ತು ಆ ಶತ್ರುಗಳು ಕಾಂಗ್ರೆಸ್‌ನ ಆಶ್ರಯದಲ್ಲಿ ಬೆಳೆಯುತ್ತಿದ್ದುದಕ್ಕಿಂತ ಹೆಚ್ಚಾಗಿ ಬಿಜೆಪಿಯ ರಾಜಾಶ್ರಯದಲ್ಲಿ ಬೆಳೆಯುತ್ತಿರುವಂತೆ ಕಾಣಿಸುತ್ತಿದೆ.

ಕೃಪೆ: scroll.in

Writer - ಸ್ವಾಮಿ ಅಗ್ನಿವೇಶ್

contributor

Editor - ಸ್ವಾಮಿ ಅಗ್ನಿವೇಶ್

contributor

Similar News