ಮೀಸಲಾತಿಯಿಂದ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಲು ಸಾಧ್ಯ: ನಾಗಸಿದ್ಧಾರ್ಥ ಹೊಲೆಯಾರ್

Update: 2018-02-25 12:50 GMT

ಉಡುಪಿ, ಫೆ. 25: ಮೀಸಲಾತಿ ಮತ್ತು ಭಡ್ತಿ ಮೀಸಲಾತಿಯನ್ನು ಉಳಿಸಿ ಕೊಳ್ಳುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಬೇಕಾಗಿದೆ ಎಂದು ರಾಜ್ಯ ಮೀಸಲಾತಿ ಸಂರಕ್ಷಣಾ ಸಮಿತಿಯ ನಾಗಸಿದ್ಧಾರ್ಥ ಹೊಲೆ ಯಾರ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಮೀಸಲಾತಿ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಆದಿ ಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ರವಿವಾರ ಆಯೋಜಿಸಲಾದ ‘ಬಡ್ತಿಯಲ್ಲಿ ಮೀಸಲಾತಿ’ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮೀಸಲಾತಿಯನ್ನು ತೆಗೆದು ಹಾಕಿ, ಅಂಬೇಡ್ಕರ್ ಸಿದ್ಧಾಂತ ಹಾಗೂ ಅವರು ರಚಿಸಿದ ಸಂವಿಧಾನ ಮತ್ತು ಅದು ಉಳಿಯಲು ಕಾರಣವಾಗಿರುವ ಪ್ರಜಾ ಪ್ರಭುತ್ವವನೇ ನಾಶ ಮಾಡುವ ನಿಟ್ಟಿನಲ್ಲಿ ಮನುವಾದಿಗಳು ಇಂದು ವ್ಯವಸ್ಥಿತ ವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಯಾವುದೇ ಚಳವಳಿ ಯಶಸ್ವಿಯಾಗಲು ಅದರ ಸಿದ್ಧಾಂತವೇ ಆಮ್ಲಜನಕ. ದಲಿತ ಚಳವಳಿಗೆ ಅಂಬೇಡ್ಕರ್ ಸಿದ್ಧಾಂತ ನಿಜವಾದ ಆಮ್ಲಜನಕವಾಗಿ ಕೆಲಸ ಮಾಡಬೇಕಾಗಿದೆ. ಆದರೆ ನಮ್ಮ ಆಂತರಿಕ ಶತ್ರುಗಳಾದ ಅಹಂಕಾರ, ದ್ವೇಷ, ಅಸೂಹೆ ಈ ಹೋರಾಟದಲ್ಲಿ ಕಂದಕ ನಿರ್ಮಿಸುವಂತೆ ಮಾಡುತ್ತಿದೆ. ಬಾಹ್ಯ ಶತ್ರು ಮನುವಾದಿ ವಿರುದ್ಧ ಹೋರಾಟ ಮಾಡಬೇಕಾದರೆ ಮೊದಲು ಒಳಗಿ ರುವ ಅಹಂಕಾರ ದ್ವೇಷ ಅಸೂಹೆಯನ್ನು ನಾವು ನಾಶ ಮಾಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಉದ್ಯೋಗ ಮೀಸಲಾತಿ: ಪಕ್ಷದ ಗುಲಾಮನಾಗಿರುವ ತಾತ್ಕಾಲಿಕ ರಾಜ ಕೀಯ ಮೀಸಲಾತಿಗಿಂತ ಸ್ವಾಭಿಮಾನದಿಂದ ಬದುಕು ನಡೆಸುವಂತಹ 60 ವರ್ಷಗಳ ಉದ್ಯೋಗದ ಮೀಸ ಲಾತಿ ಬೇಕಾಗಿದೆ. ಆದರೆ ಇಂದು ಅದನ್ನೇ ಗುರಿಯನ್ನಾಗಿಸುವ ಹುನ್ನಾರ ನಡೆಯುತ್ತಿದೆ ಎಂದು ನಾಗಸಿದ್ಧಾರ್ಥ ಹೊಲೆ ಯಾರ್ ಆರೋಪಿಸಿದರು.

ಇಂದು ಗ್ರಾಪಂ, ತಾಪಂ, ಜಿಪಂ, ಶಾಸಕ ಹಾಗೂ ಸಂಸದ ಸೇರಿದಂತೆ ಎಲ್ಲಾ ರಾಜಕೀಯ ಮೀಸಲಾತಿ ಸೀಟುಗಳು ಭರ್ತಿಯಾಗಿವೆ. ಆದರೆ ಸರಕಾರಿ ಉದ್ಯೋಗವಾಗಿರುವ ಗುಮಾಸ್ತನಿಂದ ಹಿಡಿದು ಐಎಎಸ್ ಅಧಿಕಾರಿವರೆಗಿನ ಹುದ್ದೆಗಳು ಖಾಲಿಯಾಗಿವೆ. ಸಂವಿಧಾನ ಜಾರಿಯಾಗಿ 70 ವರ್ಷ ಮತ್ತು ಮಂಡಲ್ ಆಯೋಗ ಜಾರಿಯಾಗಿ 25ವರ್ಷಗಳಾದರೂ ಸಂಪೂರ್ಣವಾಗಿ ಎಷ್ಟು ಪ್ರಮಾಣದ ಮೀಸಲಾತಿ ನೀಡಬೇಕಾಗಿತ್ತೊ ಅಷ್ಟು ಪ್ರಮಾಣದ ಮೀಸ ಲಾತಿಯನ್ನು ಎಲ್ಲ ಕೇಂದ್ರಗಳಲ್ಲಿ ಯೂ ನೀಡಿಲ್ಲ ಎಂದರು.

ಸ್ವಾತಂತ್ರ ಕಿತ್ತುಕೊಂಡವರು: ಸ್ವಾತಂತ್ಯ ಯಾವಾಗ ನಮಗೆ ಬಂತು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ನಾವು ಯಾವಾಗ ಕಳೆದು ಕೊಂಡಿದ್ದೇವೆ ಎಂಬ ಜ್ಞಾನ ನಮ್ಮಲ್ಲಿ ಇಲ್ಲ. ಬ್ರಿಟಿಷರು ಎಂದೂ ನಮ್ಮ ಸ್ವಾತಂತ್ರ್ಯ ವನ್ನು ಕಿತ್ತುಕೊಂಡಿಲ್ಲ. ಮುಸ್ಲಿಮ್ ರಾಜರ ಆಳ್ವಿಕೆಯ ಸಂದರ್ಭದಲ್ಲಿಯೂ ಎಲ್ಲ ರೀತಿಯ ಸ್ವಾತಂತ್ರಗಳಿದ್ದವು. ಆದರೆ ಭಾರತೀಯರಾದ ಗುಪ್ತರ ಸಾಮ್ರಾಜ್ಯದಲ್ಲಿ ಗೋಮಾಂಸಕ್ಕೆ ನಿಷೇಧ ಹೇರುವ ಮೂಲಕ ಅಸ್ಪಶ್ಯತೆಯನ್ನು ಆರಂಭಿಸಿ ನಮ್ಮ ಸ್ವಾತಂತ್ರವನ್ನು ಕಿತ್ತುಕೊಳ್ಳಲಾಯಿತು ಎಂದು ಅವರು ತಿಳಿಸಿದರು.

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕಾದರೆ ಅಂಬೇಡ್ಕರ್‌ರ ಸಿದ್ಧಾಂತ ವನ್ನು ತಿಳಿದುಕೊಳ್ಳಬೇಕಾಗಿದೆ. ಆ ಜ್ಞಾನ ನಮ್ಮ ಯಾವುದೇ ಶಿಕ್ಷಣದಲ್ಲಿ ಸಿಗು ವುದಿಲ್ಲ ಎಂದ ಅವರು, ನಾವು ಒಗ್ಗಟ್ಟಾಗಿ ಬಲಿಷ್ಠವಾದರೆ ಮಾತ್ರ ಯಶಸ್ವಿ ಯಾಗಲು ಸಾಧ್ಯ. ಇಲ್ಲದಿದ್ದರೆ ಶತ್ರುಗಳು ನಮ್ಮ ದೌರ್ಬಲ್ಯಗಳನ್ನು ಬಳಸಿ ಕೊಂಡು ನಮ್ಮನ್ನು ನಾಶ ಮಾಡುತ್ತಾರೆ ಎಂದರು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮೀಸಲಾತಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಎಚ್.ಪರಮೇಶ್ವರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾಸನ ಜಿಲ್ಲಾ ಮೀಸ ಲಾತಿ ಸಂರಕ್ಷಣಾ ಸಮಿತಿಯ ಲೋಕೇಶ್, ಉಡುಪಿ ಜಿಲ್ಲಾ ಉಪಾಧ್ಯಕ್ಷ ಸುಂದರ್ ಮಾಸ್ತರ್ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜೇಯ್ ಕುಮಾರ್ ಸ್ವಾಗತಿಸಿದರು. ಪ್ರದೀಪ್ ವಂದಿಸಿದರು. ಕಾರ್ಯದರ್ಶಿ ಪ್ರದೀಪ್ ಇನ್ನಂಜೆ ಕಾರ್ಯಕ್ರಮ ನಿರೂಪಿಸಿದರು.
 
ನಂಬಿಕೆ ಮತ್ತು ತಿಳುವಳಿಕೆ
ಭಾರತದಲ್ಲಿ ನಂಬಿಕೆ ಮತ್ತು ತಿಳುವಳಿ ಎಂಬ ಎರಡು ರೀತಿಯ ಜನ ಇದ್ದಾರೆ. ಇಲ್ಲಿ ನಂಬಿಕೆ ಪ್ರಮಾಣ ಜಾಸ್ತಿಯಾಗಿದ್ದರೆ ತಿಳಿವಳಿಕೆಯ ಜನಸಂಖ್ಯೆ ಕಡಿಮೆ. ನಂಬಿಕೆಗೆ ಒಂದು ವಾಟ್ಸಾಪ್ ಸಂದೇಶ ಸಾಕು. ಆದರೆ ತಿಳಿವಳುಕೆಗೆ ಬೃಹತ್ ಕೃತಿಗಳೇ ಬೇಕಾಗುತ್ತದೆ. ನಂಬಿಕೆ ಇರುವ ಜನ ತಾವು ಮಾಡಿದ ತಪ್ಪು ಗಳನ್ನು ತಮ್ಮ ಮಕ್ಕಳಿಗೆ ಹೇಳಿಕೊಡುತ್ತ ಅದನ್ನು ಮುಂದುವರೆಸುವಂತೆ ಮಾಡು ತ್ತಿದ್ದಾರೆ. ನಂಬಿಕೆಗೆ ಕಡಿಮೆ ಖರ್ಚು. ಆದರೆ ತಿಳುವಳಿಕೆ ತುಂಬಾ ದುಬಾರಿ. ತಿಳುವಳಿಕೆಗೆ ಪುಸ್ತಕ ಓದಬೇಕು ಮತ್ತು ಸ್ವತಃ ಪರಿಶ್ರಮ ಪಡಬೇಕು. ಆದರೆ ನಂಬಿಕೆಗೆ ಯಾವುದೇ ಪರಿಶ್ರಮ ಬೇಕಾಗಿಲ್ಲ. ಅಂಬೇಡ್ಕರ್ ತಿಳುವಳಿಕೆಯ ಸಮಾಜವನ್ನು ಬಯಸಿದ್ದರೆ ಹೊರತು ನಂಬಿಕೆ ಇರುವ ಸಮಾಜವನ್ನು ಅಲ್ಲ ಎಂದು ನಾಗಸಿದ್ಧಾರ್ಥ ಹೊಲೆಯಾರ್ ಹೇಳಿದರು.

ಹೆಸರು ಇಟ್ಟುಕೊಳ್ಳಲು ಕೂಡ ಕಾನೂನು !
ಮನುಸ್ಮತಿಯಲ್ಲಿ ಹೆಸರು ಇಟ್ಟುಕೊಳ್ಳುವುದಕ್ಕೂ ಒಂದು ಕಾನೂನು ಇತ್ತು. ಬ್ರಾಹ್ಮಣ ಹೆಸರು ಸಂತೋಷವನ್ನು ಸೂಚಿಸಿದರೆ, ಕ್ಷತ್ರಿಯರ ಹೆಸರು ಶೌರ್ಯ, ವೈಶ್ಯರ ಸಂಪತ್ತು ಮತ್ತು ಶೂದ್ರ ಹೆಸರು ದುಃಖವನ್ನು ಸೂಚಿಸಬೇಕು. ಈ ಬಗ್ಗೆ ನಮ್ಮ ಪ್ರಾಚೀನ ಕಂದಾಯ ದಾಖಲಾತಿಗಳನ್ನು ಪರಿಶೀಲಿಸಿದರೆ ಅದು ಅರಿವಿಗೆ ಬರುತ್ತದೆ. ಬ್ರಾಹ್ಮಣ ದೇವರ ಮೇಲೆ, ಕ್ಷತ್ರೀಯ ಆಯುಧದ ಮೇಲೆ, ವೈಶ್ಯ ಸಂಪತ್ತಿನ ಮೇಲೆ ಹಾಗೂ ಶೂದ್ರ ತನ್ನ ತಲೆಯ ಮೇಲೆಯೇ ಕೈ ಇಟ್ಟು ಆಣೆ ಮಾಡಿಕೊಳ್ಳುವ ಕಾನೂನು ಕೂಡ ಮನುಸ್ಮತಿಯಲ್ಲಿತ್ತು ಎಂದು ನಾಗಸಿದ್ಧಾರ್ಥ ಹೊಲೆಯಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News