ಮಂಗಳೂರು ವಿಧಾನ ಸಭಾ ಕ್ಷೇತ್ರ ಸಿಪಿಎಂ ಅಭ್ಯರ್ಥಿಯಾಗಿ ನಿತಿನ್ ಕುತ್ತಾರ್

Update: 2018-02-25 12:52 GMT

ಮಂಗಳೂರು, ಫೆ.25: ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಯುವ ನ್ಯಾಯವಾದಿ ನಿತಿನ್ ಕುತ್ತಾರ್ ಮಂಗಳೂರು ವಿಧಾನ ಸಭಾ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮತ್ತು ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಅಭ್ಯರ್ಥಿಯಾಗಿದ್ದು, ಈಗಾಗಲೆ ಪ್ರಚಾರ ಆರಂಭಿಸಿದ್ದಾರೆ. ಇದೀಗ ಮಂಗಳೂರು ಕ್ಷೇತ್ರದಲ್ಲಿ ನಿತಿನ್ ಕುತ್ತಾರ್ ಸ್ಪರ್ಧಿಸಲಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೂರು ಕ್ಷೇತ್ರದಲ್ಲಿ ಸಿಪಿಎಂ ಸ್ಪರ್ಧಿಸುವುದು ಖಚಿತವಾಗಿದೆ.

ಬಿಕಾಂ ಎಲ್‌ಎಲ್‌ಬಿ ಪದವೀಧರರಾಗಿರುವ 25ರ ಹರೆಯದ ನಿತಿನ್ ಕುತ್ತಾರ್ ವೃತ್ತಿಯಲ್ಲಿ ನ್ಯಾಯವಾದಿ. ಪ್ರಸ್ತುತ ಡಿವೈಎಫ್‌ಐ ಜಿಲ್ಲಾ ಜೊತೆ ಕಾರ್ಯದರ್ಶಿ ಮತ್ತು ಡಿವೈಎಫ್‌ಐ ಉಳ್ಳಾಲ ವಲಯ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2006ರಲ್ಲಿ 8ನೇ ತರಗತಿಯಲ್ಲಿರುವಾಗ ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಯ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ನಿತಿನ್ ಕುತ್ತಾರ್ 2010ರಲ್ಲಿ ಎಸ್‌ಎಫ್‌ಐ ಉಳ್ಳಾಲ ವಲಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಭಾರತ್ ಪಿಯು ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಚುನಾಯಿತರಾದ ನಿತಿನ್ 2011ರಲ್ಲಿ ಸಿಪಿಎಂ ಪಕ್ಷದ ಸದಸ್ಯತ್ವ ಪಡೆದರು. 2011ರಲ್ಲಿ ವಿವಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ತರಗತಿ ಪ್ರತಿನಿಧಿಯಾಗಿ ಆಯ್ಕೆಯಾದರಲ್ಲದೆ 2012ರಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದರು. 2012ರಲ್ಲಿ ವಿವಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, 2015ರಲ್ಲಿ ಎಸ್‌ಡಿಎಂ ಕಾನೂನು ಕಾಲೇಜಿನ ಅಂತಿಮ ವರ್ಷದ ತರಗತಿಯಲ್ಲಿ ತರಗತಿ ಪ್ರತಿನಿಧಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. 2016ರಲ್ಲಿ ಡಿವೈಎಫ್‌ಐ ಮುನ್ನೂರು ಗ್ರಾಮ ಸಮಿತಿ ಕಾರ್ಯದರ್ಶಿಯಾಗಿ ಹಾಗೂ 2017ರಲ್ಲಿ ಡಿವೈಎಫ್‌ಐ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಪ್ರೌಢ ಶಾಲಾ ಶಿಕ್ಷಣದ ಸಮಯದಲ್ಲೇ ಕಾರ್ಮಿಕರ ಪರವಾದ ಹೋರಾಟಗಳಲ್ಲಿ ಪಿಕೆಟಿಂಗ್‌ಗಳಲ್ಲಿ ಭಾಗಿಯಾಗಿದ್ದ ನಿತಿನ್ 2012ರಲ್ಲಿ ಬಿಜೆಪಿ ಸರಕಾರ ಪ್ರೊ.ಗೋವಿಂದ ವರದಿಯ ಪ್ರಕಾರ ರಾಜ್ಯದ 12,000 ಶಾಲೆಗಳನ್ನು ಮುಚ್ಚಲು ಮುಂದಾದಾಗ ಸರಕಾರಿ ಶಾಲೆಯನ್ನು ಮುಚ್ಚದಂತೆ ನ.1ರಂದು ನೆಹರೂ ಮೈದಾನದಲ್ಲಿ ನಡೆದ ಹೋರಾಟಕ್ಕೆ ನೇತೃತ್ವ. 2012 ರಲ್ಲಿ ಪಂಕ್ತಿ ಭೇದದ ವಿರುದ್ಧದ ಸಿಪಿಎಂ ಹೋರಾಟದಲ್ಲಿ ಲಾಠಿ ಏಟು. ಸೌಜನ್ಯಾ ಕೊಲೆ ಪ್ರಕರಣ,ಕಾವ್ಯ ಪೂಜಾರಿ ಅಸಹಜ ಸಾವಿನ ಸೂಕ್ತ ತನಿಖೆಗೆ ಒತ್ತಾಯಿಸಿ ನಡೆದ ಹೋರಾಟದ ನೇತೃತ್ವ, ಉಳ್ಳಾಲದಲ್ಲಿ ಅಮಾಯಕ ವಿದ್ಯಾರ್ಥಿಗಳ ಮೇಲೆ ಸುಳ್ಳು ಕೇಸು ಪ್ರಕರಣ ದಾಖಲಿಸಿದಾಗ ವಿದ್ಯಾರ್ಥಿಗಳ ಪರ ಹೋರಾಟ. ಬಂಟ್ವಾಳ, ಬಜ್ಪೆ, ಮಂಗಳೂರಿನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಸೌಕರ್ಯಗಳಿಗಾಗಿ ವಿದ್ಯಾರ್ಥಿಗಳ ಪರ ಹೋರಾಟಕ್ಕೆ ನೇತೃತ್ವ. 2015ರಲ್ಲಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿ, ಪೋಷಕರನ್ನು ಸಂಘಟಿಸಿ ಹೋರಾಟ. 2016ರಲ್ಲಿ ಬಡ ಭೂ ರಹಿತರ ಪರವಾಗಿ ರೈತ ಸಂಘ ನಡೆಸಿದ ಭೂಮಿಗಾಗಿ ಹೋರಾಟದಲ್ಲಿ ಜೈಲು ವಾಸ ಇತ್ಯಾದಿ ಹೋರಾಟದಲ್ಲಿ ಭಾಗಿಯಾದ ನಿತಿನ್‌ರ ಸ್ಪರ್ಧೆ ಕುತೂಹಲ ಹುಟ್ಟಿಸಿದೆ.

    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News