ಬೆಳ್ತಂಗಡಿ: ಜಮಲಾಬಾದ್‌ (ಗಡಾಯಿಕಲ್ಲು) ಪ್ರವೇಶ ನಿಷೇಧ

Update: 2018-02-25 16:08 GMT

ಬೆಳ್ತಂಗಡಿ, ಫೆ. 25: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ನಡ ಗ್ರಾಮದ ಜಮಲಾಬಾದ್‌ಗಡ (ಗಡಾಯಿಕಲ್ಲು) ಕ್ಕೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಪ್ರವೇಶವನ್ನು ನಿಷೇಧಿಸಿದ್ದು, ಪ್ರತಿನಿತ್ಯ ಇಲ್ಲಿಗೆ ಚಾರಣಕ್ಕಾಗಿ ಆಗಮಿಸುವ ಜನರು ನಿರಾಸೆಯಿಂದ ಹಿಂತಿರುಗುವಂತಾಗಿದೆ.

ಮೈಸೂರು ಹುಲಿ ಟಿಪ್ಪು ಸುಲ್ತಾನ್ ನಿರ್ಮಿಸಿರುವ ಐತಿಹಾಸಿಕ ಕೋಟೆಯಿರುವ ಜಮಲಾಬಾದ್ ಗಡದ ಉಸ್ತುವಾರಿಯನ್ನು ಪ್ರಾಚ್ಯವಸ್ತು ಇಲಾಖೆ, ಪ್ರವಾಸೋಧ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ನೋಡಿಕೊಳ್ಳುತ್ತಿದ್ದರು. ಸಮುದ್ರಮಟ್ಟದಿಂದ ಸುಮಾರು 1800 ಅಡಿ ಎತ್ತರದಲ್ಲಿರುವ ಕೋಟೆಯನ್ನು ವೀಕ್ಷಿಸಲು ಪ್ರತಿನಿತ್ಯ ನೂರಾರು ಜನರು ಆಗಮಿಸುತ್ತಿದ್ದರು ಹಾಗು ರಾಜ್ಯದ ವಿವಿಧ ಭಾಗಗಳಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ. ಇದೀಗ ಕಳೆದ ಒಂದು ತಿಂಗಳಿನಿಂದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ಪ್ರವಾಸಿಗರಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪ್ರವಾಸೋಧ್ಯಮ ಇಲಾಖೆಯವರಾಗಲಿ, ಅರಣ್ಯ ಇಲಾಖೆಯವರಾಗಲಿ ಇಲ್ಲಿಗೆ ಪ್ರವೇಶ ನಿರಾಕರಿಸಿರುವ ಬಗ್ಗೆ ಎಲ್ಲಿಯೂ ಯಾವುದೇ ಪ್ರಕಟನೆಯನ್ನು ನೀಡಿಲ್ಲ ಆದ್ದರಿಂದ ಜನರಿಗೆ ಈ ಬಗ್ಗೆ ಮಾಹಿತಿಯಿಲ್ಲವಾಗಿದ್ದು, ಇಲ್ಲಿಗೆ ಬಂದ ಬಳಿಕವಷ್ಟೇ ಪ್ರವೇಶ ಇಲ್ಲ ಎಂದು ತಿಳಿಯಬೇಕಾಗಿದೆ. ಪ್ರತಿನಿತ್ಯ ಬಂದು ಹೋಗುವವರು ಇಲಾಖೆಯ ಈ ಕ್ರಮದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ನಿಷೇಧವಿದ್ದರೆ ಇದನ್ನು ಮೊದಲೇ ಪ್ರಕಟಿಸಲು ಸಾಧ್ಯವಿಲ್ಲವೇ ? ಇಲ್ಲಿಯ ವರೆಗೆ ಬಂದು ಹಿಂತಿರುಗುವಂತೆ ಮಾಡುವುದು ಯಾಕೆ ಎಂದು ಪ್ರವಾಸಿಗಳು ಪ್ರಶ್ನಿಸುತ್ತಿದ್ದಾರೆ.

ಜಮಲಾಬಾದ್ ಗಡದಲ್ಲಿ ಬಹುತೇಕ ಒಣ ಹುಲ್ಲು ತುಂಬಿದ್ದು ಅಲ್ಲಿಗೆ ಬಂದ ಪ್ರವಾಸಿಗರು ಈ ಒಣಗಿದ ಹುಲ್ಲಿಗೆ ಬೆಂಕಿ ಹಾಕಿದರೆ ಇದರಿಂದ ಇಡೀ ಅರಣ್ಯಕ್ಕೆ ಬೆಂಕಿ ಆವರಿಸುವ ಭಯವಿದ್ದು, ಒಂದೆರಡು ಬಾರಿ ಈ ರೀತಿ ಬೆಂಕಿ ಹಚ್ಚಿದ ಕಾರಣದಿಂದಾಗಿ ಮತ್ತು ಅರಣ್ಯ ಸಂರಕ್ಷಣೆಯ ಉದ್ದೇಶದಿಂದ ಇಲ್ಲಿಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಮಳೆ ಬರುವ ವರೆಗೆ ಈ ನಿಷೇಧ ಮುಂದುವರಿಯಲಿದೆ. ಮುಂದಿನ ಮೇ ತಿಂಗಳ ವೇಳೆಗೆ ಒಂದೆರಡು ಮಳೆ ಸುರಿದ ಬಳಿಕ ಹಿಂದಿನಂತೆ ಪ್ರವೇಶ ನೀಡಲಾಗುವುದು
- ಕಿರಣ್
ವಲಯ ಅರಣ್ಯಾಧಿಕಾರಿ, ವನ್ಯ ಜೀವಿ ವಿಭಾಗ, ಬೆಳ್ತಂಗಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News