×
Ad

ದುಬೈ ಯಲ್ಲಿ ಶ್ರೀದೇವಿಗೆ ಆಗಿದ್ದೇನು ? ಕೊನೆಗಳಿಗೆಯಲ್ಲಿ ಇದ್ದವರು ಕಂಡಿದ್ದೇನು ?

Update: 2018-02-26 13:47 IST

ಮುಂಬೈ, ಫೆ.26: ಹಿರಿಯ ನಟಿ ಶ್ರೀದೇವಿ ತಮ್ಮ 54ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಅವರ ಸಾವಿರಾರು ಅಭಿಮಾನಿಗಳಿಗೆ ಇನ್ನೂ ಕಷ್ಟವಾಗುತ್ತಿದೆ. ಅಷ್ಟಕ್ಕೂ ಶ್ರೀದೇವಿ ಹೇಗೆ ಸಾವಿಗೀಡಾದರು, ಕೊನೆಗಳಿಗೆಯಲ್ಲಿ ನಡೆದಿದ್ದೇನು ಎಂಬ ಬಗ್ಗೆ ಮಾಹಿತಿಗಳು ಹೊರಬೀಳಲಾರಂಭಿಸಿವೆ. ಮೂಲಗಳ ಪ್ರಕಾರ ಆ ಸಂಜೆ ಶ್ರೀದೇವಿ ತಮ್ಮ ಪತಿ, ಚಿತ್ರ ನಿರ್ಮಾಪಕ ಬೋನಿ ಕಪೂರ್ ಜತೆ ಡಿನ್ನರ್ ಗೆ ಹೋಗಲು ತಮ್ಮ ಹೋಟೆಲ್ ಕೊಠಡಿಯಲ್ಲಿ ತಯಾರಿ ನಡೆಸುತ್ತಿರುವಾಗ ಈ ಸಾವು ಸಂಭವಿಸಿದೆ.

ಶ್ರೀದೇವಿ ತಂಗಿದ್ದ ಜುಮೇರಾಹ್ ಎಮಿರೇಟ್ಸ್ ಟವರ್ಸ್‌ ಹೋಟೆಲ್ ಗೆ ಶನಿವಾರ ಸಂಜೆ 5:30ರ ಸುಮಾರಿಗೆ ಆಗಮಿಸಿದ ಬೋನಿ ಕಪೂರ್ ಆಕೆಯನ್ನು ಸರ್‌ಪ್ರೈಸ್ ಡಿನ್ನರ್ ಗೆ ಕರೆದೊಯ್ಯುವ ಯೋಚನೆಯಲ್ಲಿದ್ದರೆಂದು ವರದಿಯೊಂದು ತಿಳಿಸಿದೆ.

ಕೊಠಡಿಗೆ ಪ್ರವೇಶಿಸಿದ ಬೋನಿ, ಶ್ರೀದೇವಿಯನ್ನು ಎಬ್ಬಿಸಿದ ನಂತರ ಅವರಿಬ್ಬರೂ 15 ನಿಮಿಷಗಳ ಕಾಲ ಮಾತನಾಡಿದ್ದರು. ನಂತರ ಬಾತ್ ರೂಂಗೆ ಹೋದ ಶ್ರೀದೇವಿ 15 ನಿಮಿಷಗಳಾದರೂ ಹೊರಗೆ ಬಾರದೇ ಇರುವುದನ್ನು ಗಮನಿಸಿದ ಬೋನಿ ಕಪೂರ್ ಶೌಚಾಲಯದ ಬಾಗಿಲು ಬಡಿದಿದ್ದರು. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ದೊರೆಯದೇ ಇದ್ದಾಗ ಅವರು ಬಾಗಿಲನ್ನು ಬಲಪ್ರಯೋಗಿಸಿ ತೆರೆದಿದ್ದು ಆಗ ಶ್ರೀದೇವಿ ನೀರು ತುಂಬಿದ್ದ ಟಬ್ ನಲ್ಲಿ  ಮೃತದೇಹವಾಗಿದ್ದರೆಂದು ತಿಳಿದು ಬಂದಿದೆ.

ಕೂಡಲೇ ತನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿದ ಬೋನಿ ನಂತರ 9 ಗಂಟೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲಿಗೆ ಪೊಲೀಸರು ಮತ್ತು ವೈದ್ಯಕೀಯ ತಂಡ ಆಗಮಿಸಿ ಶ್ರೀದೇವಿ ಮ್ರತಪಟ್ಟಿದ್ದಾರೆಂದು ಘೋಷಿಸಿತು.

ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಹಾಗೂ ಕಿರಿಯ ಪುತ್ರಿ ಖುಷಿ ಜತೆ ಬೋನಿಯ ಸೋದರಳಿಯ ಮೋಹಿತ್ ಮಾರ್ವಾಹ್ ವಿವಾಹಕ್ಕಾಗಿ ರಾಸಲ್ ಖೈಮಾಗೆ ಕಳೆದ ವಾರ ಆಗಮಿಸಿದ್ದರು. ವಿವಾಹದ ನಂತರ ಮುಂಬೈಗೆ ಮರಳಿದ್ದ ಬೋನಿ ಶನಿವಾರ ಪತ್ನಿಗೆ ಸರ್‌ಪ್ರೈಸ್ ನೀಡಲು ಮತ್ತೆ ದುಬೈಗೆ ಆಗಮಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News