×
Ad

ಸರಕಾರದಿಂದ 9,500 ‘ಹೈ ರಿಸ್ಕ್’ ಎನ್‌ಬಿಎಫ್‌ಸಿಗಳ ಪಟ್ಟಿ ಬಿಡುಗಡೆ

Update: 2018-02-26 21:08 IST

ಹೊಸದಿಲ್ಲಿ,ಫೆ.26: ದೇಶದಲ್ಲಿಯ ಸುಮಾರು 9,500 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ(ಎನ್‌ಬಿಎಫ್‌ಸಿ)ಗಳನ್ನು ‘ಹೈ ರಿಸ್ಕ್(ಹೆಚ್ಚಿನ ಅಪಾಯ ಸಾಧ್ಯತೆ)’ ಕಂಪನಿಗಳೆಂದು ಸರಕಾರವು ವರ್ಗೀಕರಿಸಿದ್ದು, ಸೋಮವಾರ ಅವುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಕಂಪನಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯ ನಿರ್ದಿಷ್ಟ ನಿಯಮವನ್ನು ಪಾಲಿಸದಿದ್ದುದು ಸರಕಾರದ ಈ ಕ್ರಮಕ್ಕೆ ಕಾರಣವಾಗಿದೆ.

ಭಾರತೀಯ ಆರ್ಥಿಕತೆಯಲ್ಲಿ ಅಪರಾಧಗಳನ್ನು ತಡೆಯಲು ಮತ್ತು ಇಂತಹ ಪ್ರಕರಣಗಳ ಬಗ್ಗೆ ಜಾರಿ ಸಂಸ್ಥೆಗಳಿಗೆ ಎಚ್ಚರಿಕೆಯನ್ನು ನೀಡಲು ಕೇಂದ್ರ ವಿತ್ತ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರ್ಥಿಕ ಗುಪ್ತಚರ ಘಟಕ(ಎಫ್‌ಐಯು)ವು 9,491 ‘ಹೈ ರಿಸ್ಕ್’ ಹಣಕಾಸು ಸಂಸ್ಥೆಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯನ್ನು ಈ ವರ್ಷದ ಜನವರಿಯವರೆಗೆ ಮರುಪರಿಷ್ಕರಿಸಲಾಗಿದೆ.

ಪಿಎಂಎಲ್‌ಎ ಅಡಿ ಸಹಕಾರಿ ಬ್ಯಾಂಕುಗಳು ಸೇರಿದಂತೆ ಎಲ್ಲ ಎನ್‌ಬಿಎಫ್‌ಸಿಗಳು ತಮ್ಮ ಹಣಕಾಸು ಕಾರ್ಯಾಚರಣೆಗಳು ಮತ್ತು ವಹಿವಾಟುಗಳ ವಿವರಗಳನ್ನು ಎಫ್‌ಐಯುಗೆ ಸಲ್ಲಿಸುವುದು ಅಗತ್ಯವಾಗಿದೆ.

ಈ ಕಾಯ್ದೆಯ ನಿರ್ದಿಷ್ಟ ನಿಯಮದಂತೆ ಎನ್‌ಬಿಎಫ್‌ಸಿಗಳು ಪ್ರಧಾನ ಅಧಿಕಾರಿ ಯೋರ್ವನನ್ನು ನೇಮಿಸಬೇಕಾಗುತ್ತದೆ ಮತ್ತು ಆತ 10 ಲ.ರೂ.ಗೂ ಹೆಚ್ಚಿನ ಶಂಕಾಸ್ಪದ ವಹಿವಾಟುಗಳು ಮತ್ತು ನಗದು ವಹಿವಾಟುಗಳನ್ನು ಎಫ್‌ಐಯುಗೆ ವರದಿ ಮಾಡುವ ಹೊಣೆಗಾರಿಕೆಯನ್ನು ಹೊಂದಿರುತ್ತಾನೆ. ಎಫ್‌ಐಯು ಈ ಕಂಪನಿಗಳ ದತ್ತಾಂಶಗಳನ್ನು ವಿಶ್ಲೇಷಿಸಿದ್ದು, ಹೆಚ್ಚಿನ ಕಂಪನಿಗಳು ಈ ನಿಯಮವನ್ನು ಪಾಲಿಸದಿರುವುದು ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

2016,ನ.8ರಂದು 1,000 ರೂ. ಮತ್ತು 500 ರೂ.ನೋಟುಗಳ ನಿಷೇಧದ ಬಳಿಕ ಎನ್‌ಬಿಎಫ್‌ಸಿಗಳ ಚಟುವಟಿಕೆಗಳ ಮೇಲೆ ಎಫ್‌ಐಯು ನಿಗಾಯಿರಿಸಿತ್ತು.

 ಈ ಎನ್‌ಬಿಎಫ್‌ಸಿಗಳು ಕಾನೂನನ್ನು ಪಾಲಿಸುತ್ತಿಲ್ಲ ಮತ್ತು ಅವುಗಳೊಂದಿಗೆ ವಹಿವಾಟು ನಡೆಸುವುದರಿಂದ ದೂರವುಳಿಯಬೇಕು ಎಂದು ಜನರಲ್ಲಿ ಜಾಗ್ರತಿ ಮೂಡಿಸುವುದು ಪಟ್ಟಿ ಪ್ರಕಟಣೆಯ ಉದ್ದೇಶವಾಗಿದೆ ಎಂದು ಹಿರಿಯ ಅಧಿಕಾರಿ ಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News