ಐಐಟಿ ಮದ್ರಾಸ್‌ನ ಕಾರ್ಯಕ್ರಮದಲ್ಲಿ ಸಂಸ್ಕೃತದಲ್ಲಿ ಪ್ರಾರ್ಥನೆ: ವಿವಾದ ಸೃಷ್ಟಿ
ಚೆನ್ನೈ,ಫೆ.26: ರಾಜ್ಯ ಸರಕಾರದ ಕಾರ್ಯಕ್ರಮಗಳಲ್ಲಿ ತಮಿಳು ಪ್ರಾರ್ಥನಾ ಗೀತೆಯನ್ನು ಹಾಡುವುದು ಸಂಪ್ರದಾಯವಾಗಿದ್ದರೂ ಕೇಂದ್ರ ಸಚಿವರಿಬ್ಬರು ಭಾಗಿಯಾಗಿದ್ದ ಐಐಟಿ ಮದ್ರಾಸ್‌ನಲ್ಲಿಯ ಕಾರ್ಯಕ್ರಮವೊಂದರಲ್ಲಿ ಸಂಸ್ಕೃತ ಪ್ರಾರ್ಥನಾ ಗೀತೆಯನ್ನು ಹಾಡಿರುವುದು ವಿವಾದವನ್ನು ಸೃಷ್ಟಿಸಿದೆ.
ಐಐಟಿ ಮದ್ರಾಸ್‌ನ ಸಹಭಾಗಿತ್ವದೊಂದಿಗೆ ಸ್ಥಾಪನೆಯಾಗಲಿರುವ ಬಂದರುಗಳು, ಜಲಮಾರ್ಗಗಳು ಮತ್ತು ಕರಾವಳಿಗಳ ರಾಷ್ಟ್ರೀಯ ತಂತ್ರಜ್ಞಾನ ಕೇಂದ್ರದ ಶಿಲಾನ್ಯಾಸಕ್ಕಾಗಿ ಗಣ್ಯರ ಆಗಮನದ ಬಳಿಕ ವಿದ್ಯಾರ್ಥಿಗಳು ದಿವಂಗತ ಕವಿ ಮುತ್ತುಸ್ವಾಮಿ ದೀಕ್ಷಿತರ್ ವಿರಚಿತ ‘ಮಹಾ ಗಣಪತಿಂ ಮಾನಸ ಸ್ವರಾಮಿ’ ಸಂಸ್ಕೃತ ಪ್ರಾರ್ಥನೆಯನ್ನು ಹಾಡಿದ್ದರು.
ರಾಜ್ಯದಲ್ಲಿಯ ಸರಕಾರಿ ಕಾರ್ಯಕ್ರಮಗಳಲ್ಲಿ ಆರಂಭದಲ್ಲಿ ಪ್ರಾರ್ಥನೆಗಾಗಿ ತಮಿಳು ಮಾತೆಯ ಸ್ತುತಿಗೀತೆಯಾದ ಮನೋಮಣಿಯಂ ಸುಂದರಂ ಪಿಳ್ಳೈ ವಿರಚಿತ ‘ತಮಿಳ್ ತಾಯಿ ವಳತ್ತು’ ಮಾತ್ರ ಬಳಕೆಯಾಗುತ್ತಿದ್ದು, ಅಂತ್ಯದಲ್ಲಿ ರಾಷ್ಟ್ರಗೀತೆಯನ್ನು ಹಾಡಲಾ ಗುತ್ತದೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಪೊನ್ ರಾಧಾಕೃಷ್ಣನ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮಗಳಲ್ಲಿ ಇಂತಹುದೇ ಗೀತೆಯನ್ನು ಹಾಡಬೇಕೆಂದು ಸಂಸ್ಥೆಯು ವಿದ್ಯಾರ್ಥಿ ಗಳಿಗೆ ನಿರ್ದೇಶ ನೀಡುವುದಿಲ್ಲ ಎಂದು ಐಐಟಿ ಮದ್ರಾಸ್‌ನ ನಿರ್ದೇಶಕ ಭಾಸ್ಕರ ರಾಮಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.
ತನ್ಮಧ್ಯೆ ಸಂಸ್ಕೃತ ಗೀತೆಯನ್ನು ಹಾಡಿರುವುದನ್ನು ಖಂಡಿಸಿರುವ ಎಂಡಿಎಂಕೆ ಮುಖ್ಯಸ್ಥ ವೈಕೊ ಅವರು, ಕಾರ್ಯಕ್ರಮದಲ್ಲಿ ಸಂಸ್ಕೃತ ಹೇರಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರಲ್ಲದೆ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇಂದ್ರ ಸಚಿವರಿಬ್ಬರೂ ಇದಕ್ಕಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಕೇಂದ್ರವು ವಿವಿಧ ಮಾರ್ಗಗಳ ಮೂಲಕ ಸಂಸ್ಕೃತ ಮತ್ತು ಹಿಂದಿ ಹೇರಿಕೆಗೆ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.