ಗುರಿಸಾಧನೆಯ ಒತ್ತಡದಿಂದಾಗಿ ಉದ್ಯೋಗಿಗಳಿಗೆ ಕಾಯಿಲೆ: ಅಸೋಚಾಮ್

Update: 2018-02-26 16:01 GMT

ಹೊಸದಿಲ್ಲಿ,ಫೆ.26: ಉದ್ಯೋಗದಾತರು ನಿಗದಿಗೊಳಿಸಿರುವ ಕಠಿಣ ಗುರಿಗಳಿಂದಾಗಿ ತೀವ್ರ ಒತ್ತಡದಲ್ಲಿರುವ ಕಾರ್ಪೊರೇಟ್ ಸಂಸ್ಥೆಗಳ ಉದ್ಯೋಗಿಗಳಿಗೆ ದಿನಕ್ಕೆ ಕನಿಷ್ಠ ನಾಲ್ಕರಿಂದ ಆರು ಗಂಟೆಗಳ ಕಾಲವೂ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಇದರಿಂದಾಗಿ ಅವರು ಅಧಿಕ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅಸೋಚಾಮ್‌ನ ಆರೋಗ್ಯ ರಕ್ಷಣೆ ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.

 ತರ್ಕಹೀನ ಮತ್ತು ಅವಾಸ್ತವಿಕ ಗುರಿಗಳನ್ನು ನಿಗದಿಗೊಳಿಸುವುದರಿಂದ ಸೃಷ್ಟಿಯಾಗುವ ಒತ್ತಡದಿಂದಾಗಿ ಉದ್ಯೋಗಿಗಳು ನಿದ್ರಾಹೀನತೆಗೆ ಗುರಿಯಾಗುತ್ತಿದ್ದಾರೆ ಮತ್ತು ಇದು ಹಗಲುವೇಳೆಯಲ್ಲಿ ಬಳಲಿಕೆ, ದೈಹಿಕ ಅನಾರೋಗ್ಯ, ಮಾನಸಿಕ ಒತ್ತಡ, ಸಾಧನೆಯಲ್ಲಿ ಕುಸಿತ ಮತ್ತು ಹೆಚ್ಚಿನ ಗೈರುಹಾಜರಿಯಂತಹ ವ್ಯಾಪಕ ಪರಿಣಾಮಗಳನ್ನು ಹೊಂದಿದೆ ಎಂದು ವರದಿಯು ಬೆಟ್ಟು ಮಾಡಿದೆ.

ನಿದ್ರಾಹೀನತೆಯ ಕಾರಣದಿಂದಾಗಿ ಅಧಿಕ ಒತ್ತಡ ಮತ್ತು ಕೆಲಸದ ಸ್ಥಳದಲ್ಲಿ ಕುಂಠಿತ ಉತ್ಪಾದಕತೆಯು ವಾರ್ಷಿಕ 150 ಶತಕೋಟಿ ಡಾಲರ್ ನಷ್ಟವನ್ನುಂಟು ಮಾಡುತ್ತಿದೆ ಎಂದಿರುವ ವರದಿಯು, ಗುರಿ ಸಾಧನೆಯ ಒತ್ತಡ, ಸಹೋದ್ಯೋಗಿಗಳ ಒತ್ತಡ ಮತ್ತು ಕಠಿಣ ನಿಲುವಿನ ಮಾಲಕರಿಂದಾಗಿ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗುತ್ತಿವೆ ಎಂದಿದೆ.

ಭಾರತದ ಕಾರ್ಪೊರೇಟ್ ಸಂಸ್ಥೆಗಳಲ್ಲಿಯ ಶೇ.46ರಷ್ಟು ಉದ್ಯೋಗಿಗಳು ಒಂದಲ್ಲ ಒಂದು ಒತ್ತಡದಿಂದ ಬಳಲುತ್ತಿದ್ದಾರೆ. ಈ ಒತ್ತಡವು ವೈಯಕ್ತಿಕ ವಿಷಯಗಳು, ಕಚೇರಿ ರಾಜಕೀಯ ಅಥವಾ ನಿಗದಿತ ಗುರಿಗಳಿಗೆ ಸಂಬಂಧಿಸಿದ್ದಿರಬಹುದು. ಉದ್ಯೋಗಿಗಳಲ್ಲಿ ಮಧುಮೇಹ, ಅಧಿಕ ಯೂರಿಕ್ ಆ್ಯಸಿಡ್, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಅಧಿಕ ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ವರದಿಯು ಕಳವಳ ವ್ಯಕ್ತಪಡಿಸಿದೆ.

ನಿದ್ರಾಹೀನತೆಯಿಂದಾಗಿ ತಾವು ನಿರಂತರವಾಗಿ ಬಳಲಿಕೆಯನ್ನು ಅನುಭವಿಸುತ್ತಿದ್ದೇವೆ ಎಂದು ಸಮೀಕ್ಷೆಗೆ ಒಳಪಡಿಸಲಾಗಿದ್ದ ಉದ್ಯೋಗಿಗಳ ಪೈಕಿ ಶೇ.46ರಷ್ಟು ಜನರು ಹೇಳಿದ್ದರೆ, ಶೇ.25ರಷ್ಟು ಜನರು ತಾವು ತಲೆನೋವಿನಿಂದ ಪೀಡಿತರಾಗಿದ್ದೇವೆ ಎಂದು ತಿಳಿಸಿದ್ದಾರೆ. ಶೇ.49ರಷ್ಟು ಜನರು ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ.

ಹಲವಾರು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಾರ್ಷಿಕ ಆರೋಗ್ಯ ತಪಾಸಣೆ, ಕಚೇರಿ ಆವರಣದಲ್ಲಿ ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳಂತಹ ಸೌಲಭ್ಯಗಳನ್ನು ಒದಗಿಸುತ್ತಿವೆಯಾದರೂ ಉನ್ನತ ಹುದ್ದೆಗಳಲ್ಲಿರುವ ಹೆಚ್ಚಿನವರಿಗೆ ಇವುಗಳನ್ನು ಬಳಸಿಕೊಳ್ಳಲೂ ಸಮಯಾವಕಾಶ ಸಿಗುತ್ತಿಲ್ಲ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News