ಕೋಮಾವಸ್ಥೆಯಲ್ಲಿ ಮಲಗಿದ್ದಾತ ಎದ್ದು ಬಂದು ‘ಒಲಿಂಪಿಕ್ಸ್’ ಕಂಚು ಗೆದ್ದ !
ಅಪಘಾತದಲ್ಲಿ ಗಾಯಗೊಂಡ ಬಳಿಕ ಕೋಮಾವಸ್ಥೆಯಲ್ಲಿದ್ದ ಆಟಗಾರನೊಬ್ಬ ಚೇತರಿಸಿಕೊಂಡ ಬಳಿಕ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಕಂಚುಗೆದ್ದುಕೊಳ್ಳುವ ಮೂಲಕ ಇಡೀ ವಿಶ್ವವನ್ನು ಬೆರಗುಗೊಳಿಸಿದ್ದಾನೆ. ಈ ಅದ್ಭುತ ಆಟಗಾರನ ಹೆಸರು ಮಾರ್ಕ್ ಮೈಕ್‌ಮಾರಿಸ್. ಆತ ಕೆನಡದ ಜನಪ್ರಿಯ ಸ್ನೋಬೋರ್ಡ್ ಸ್ಲೋಪ್‌ಸ್ಟೈಲ್ (ಹಿಮದ ಜಾರುಬಂಡಿ)ಆಟಗಾರ. ಕೇವಲ 11 ತಿಂಗಳುಗಳ ಹಿಂದೆ ಅವಘಡವೊಂದರಲ್ಲಿ ಗಂಭೀರ ಗಾಯಗೊಂಡು ಆತ ಕೋಮಾವಸ್ಥೆಗೆ ಜಾರಿದ್ದ. ಸ್ನೋಬೋರ್ಡ್ ಆಡುತ್ತಿದ್ದ ಸಂದರ್ಭದಲ್ಲಿ ಎತ್ತರದಿಂದ ಜಿಗಿದಾಗ ಆತ ಮರಕ್ಕೆ ವೇಗವಾಗಿ ಢಿಕ್ಕಿ ಹೊಡೆದುದರಿಂದ ಅಪಘಾತ ಸಂಭವಿಸಿತ್ತು. ಎಡಭಾಗಕ್ಕೆ ತುಂಬಾ ಹಾನಿಯಾಗಿ ಆತನ 17 ಮೂಳೆಗಳು ಮುರಿದುಹೋಗಿದ್ದವು.
ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಆತ ವಸ್ತುಶಃ ಜೀವಚ್ಛವವಾಗಿದ್ದ. ಸತತ ಪ್ರಯತ್ನದಿಂದ ವೈದ್ಯರು ಆತನ ಮುರಿದ ಮೂಳೆಗಳನ್ನು, ದವಡೆಗಳನ್ನು ಹಾನಿಗೀಡಾಗಿದ್ದ ಶ್ವಾಸಕೋಶವನ್ನು ಶಸ್ತ್ರಕ್ರಿಯೆಯ ಮೂಲಕ ಸರಿಪಡಿಸಿದ್ದರು.
24 ವರ್ಷದ ಮೈಕ್ ಮ್ಯಾರಿಸ್ ಆಸ್ಪತ್ರೆಯಲ್ಲಿ ಕನಿಷ್ಠ ಒಂದು ತಿಂಗಳಾದರೂ ಇರಬೇಕಿತ್ತು. ಆದರೆ ಆತನ ಇಚ್ಛಾಶಕ್ತಿಯ ಫಲವೆಂಬಂತೆ ಕೇವಲ 12 ದಿನಗಳಲ್ಲಿ ಆಸ್ಪತ್ರೆಯಿಂದ ಚೇತರಿಸಿಕೊಂಡು, ಬಿಡುಗಡೆಗೊಳ್ಳುವಲ್ಲಿ ಸಫಲನಾದ. ಆದರೆ ಆತನ ಸಾಧನೆ ಅಲ್ಲಿಗೆ ನಿಲ್ಲಲಿಲ್ಲ. ಮತ್ತೆ ಸ್ನೋಬೋರ್ಡ್ ಸ್ಲೋಪಿಂಗ್ ಕ್ರೀಡೆಯಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ ಆತ ಇತ್ತೀಚೆಗೆ ನಡೆದ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಕಂಚನ್ನು ಗೆದ್ದು, ಅಚ್ಚರಿಮೂಡಿಸಿದ್ದಾನೆ.
ಕಂಚುಗೆದ್ದ ಬಳಿಕ ಮೈಕ್ ಮ್ಯಾರಿಸ್ ತಾನು ಆಸ್ಪತ್ರೆಯಲ್ಲಿ ಕೋಮಾವಸ್ಥೆಯಲ್ಲಿ ಮಲಗಿರುವ ಹಾಗೂ ತಾನು ಚಳಿಗಾಲದ ಒಲಿಂಪಿಕ್ ಪದಕ ಗೆದ್ದ ಫೋಟೋಗಳನ್ನು ಜೊತೆಜೊತೆಯಾಗಿ ಟ್ವಿಟರ್‌ನಲ್ಲಿ ಪ್ರಸಾರ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಪ್ರಯತ್ನಿಸಿದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಮೈಕ್ ಮ್ಯಾರಿಸ್ ಒಂದು ಉತ್ತಮ ನಿದರ್ಶನವಾಗಿದ್ದಾರೆ.
*ವಿಸ್ಮಯ