ಮಂಗಳೂರು: ವಿಗ್ರಹ ಮಾರಾಟದಲ್ಲಿ ಸಿಕ್ಕಿಬಿದ್ದ ಎನ್‌ಎಸ್‌ಯುಐ ಜಿಲ್ಲಾ ಕಾರ್ಯದರ್ಶಿ

Update: 2018-02-27 03:51 GMT

ಮಂಗಳೂರು, ಫೆ.27: ಕುಂದಾಪುರ ಸಮೀಪದ ಕೋಟೇಶ್ವರದಲ್ಲಿ ಶನಿವಾರ ಬಂಧನಕ್ಕೊಳಗಾದ ವಿಗ್ರಹ ಮಾರಾಟ ಜಾಲದ ಆರೋಪಿ ನಗರದ ಕುಲಶೇಖರ ನಿವಾಸಿ ಆಸ್ಟಿನ್ ಸಿಕ್ವೇರಾ (27) ಎಂಬಾತ ದ.ಕ.ಜಿಲ್ಲ ಎನ್‌ಎಸ್‌ಯುಐ ಕಾರ್ಯದರ್ಶಿ ಎಂದು ತಿಳಿದು ಬಂದಿದೆ. ಇದರಿಂದ ತೀವ್ರ ಮುಜುಗರಕ್ಕೊಳಗಾಗಿರುವ ಕಾಂಗ್ರೆಸ್ ನಾಯಕರು ತಕ್ಷಣ ಆರೋಪಿ ಆಸ್ಟಿನ್‌ನನ್ನು ಸ್ಥಾನಪಲ್ಲಟ ಮಾಡಿಸಿದ್ದಾರೆ. ಇನ್ನು ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕರಿಂದ ಈ ಬಗ್ಗೆ ಅಪಸ್ವರ ಕೇಳಿ ಬರಬಹುದು ಎಂದು ಭಾವಿಸಿರುವ ನಾಯಕರು ಮುಜುಗರ ತಪ್ಪಿಸಸಲು ಆಸ್ಟಿನ್‌ನನ್ನು ಪಕ್ಷದಿಂದಲೇ ಉಚ್ಚಾಟಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಕೋಟೇಶ್ವರದ ಕೋಟಿಲಿಂಗೇಶ್ವರ ದೇವಾಲಯದ ಹಿಂಬದಿಯಲ್ಲಿ ವಿಗ್ರಹ ಮಾರಾಟ ಜಾಲವೊಂದು ಸಕ್ರಿಯವಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದ ಕುಂದಾಪುರ ಪೊಲೀಸರು ದಾಳಿ ಮಾಡಿ ಐವರನ್ನು ಬಂಧಿಸಿದ್ದರು. ಆ ಪೈಕಿ ಆಸ್ಟಿನ್ ಎನ್‌ಎಸ್‌ಯುಐ ಮೂಲಕ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾನೆ. ಈತ ಶಾಸಕರಾದ ಜೆ.ಆರ್.ಲೋಬೊ ಮತ್ತು ಬಿ.ಎ.ಮೊಯ್ದಿನ್ ಬಾವ ಹಾಗೂ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಸಹಿತ ಪಕ್ಷದ ಪ್ರಮುಖರ ಜೊತೆ ನಿಂತು ಹಲವು ಬಾರಿ ಫೋಟೋ ತೆಗೆಸಿಕೊಂಡಿದ್ದ. ಆಸ್ಟಿನ್ ಸೆರೆ ಸಿಕ್ಕ ಸುದ್ದಿ ಬಹಿರಂಗಗೊಳ್ಳುತ್ತಲೇ ಆ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿವೆ. ಇದರಿಂದ ತೀವ್ರ ಮುಜುಗರಕ್ಕೊಳಗಾದ ಕಾಂಗ್ರೆಸ್ ನಾಯಕರು ಪ್ರಥಮವಾಗಿ ಈತನ ಸ್ಥಾನಪಲ್ಲಟ ಮಾಡಿಸಿದ್ದು, ಬಳಿಕ ಪಕ್ಷದಿಂದಲೇ ಉಚ್ಚಾಟಿಸಲು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News