ಉಬರ್ - ಓಲಾ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ

Update: 2018-02-27 07:26 GMT

ಮಂಗಳೂರು, ಫೆ.27: ಆನ್‌ಲೈನ್ ಟ್ಯಾಕ್ಸಿಯಲ್ಲಿ ದುಡಿಯುತ್ತಿರುವ ತನ್ನ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಓಲಾ ಮತ್ತು ಉಬರ್ ಕಂಪೆನಿಯ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಆನ್‌ಲೈನ್ ಡ್ರೈವರ್ಸ್‌ ಆ್ಯಂಡ್ ಓನರ್ಸ್‌ ಅಸೋಸಿಯೇಶನ್ ಎಚ್ಚರಿಕೆ ನೀಡಿದೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಈ ಓಲಾ ಮತ್ತು ಉಬರ್ ಕಂಪೆನಿಗಳು ಆನ್‌ಲೈನ್ ಟ್ಯಾಕ್ಸಿ ಸೇವೆಯಲ್ಲಿ ತಿಂಗಳಿಗೆ ಸಾವಿರಾರು ರೂ. ಸಂಪಾದಿಸಬಹುದು ಎಂದು ಯುವಕರಲ್ಲಿ ಆಸೆಹುಟ್ಟಿಸಿ ವಂಚಿಸುತ್ತಿದೆ. ಅದರಂತೆ ವಿದ್ಯಾವಂತ ಯುವಕರು ಬ್ಯಾಂಕ್‌ನಿಂದ ಸಾಲ ಪಡೆದು ಕಾರು ಖರೀದಿಸಿ ಸೇವೆ ಸಲ್ಲಿಸುತ್ತಿದ್ದರೂ ಈ ಕಂಪೆನಿಗಳು ನೀಡುವ ಬಾಡಿಗೆಗಳಿಂದ ಜೀವನ ನಿರ್ವಹಿಸಲು ಸಾಧ್ಯವಾಗದೆ, ಬ್ಯಾಂಕ್ ಸಾಲ ಮರುಪಾವತಿ ಮಾಡಲಾಗದೆ ಹತಾಶರಾಗಿದ್ದಾರೆ. ಈ ಬಗ್ಗೆ ಪ್ರಶ್ನಿಸಲು ಕಂಪೆನಿಯ ಕಚೇರಿಗೆ ಹೋದರೆ ಗೂಂಡಾಗಳನ್ನಿಟ್ಟು ಬೆದರಿಸಲಾಗುತ್ತದೆ ಎಂದು ಆರೋಪಿಸಿದರು.

ಈ ಕಂಪೆನಿಗಳು ಆಕರ್ಷಕ ಆಫರ್‌ಗಳನ್ನು ನೀಡಿ ಟ್ಯಾಕ್ಸಿಗಳನ್ನು ಜೋಡಿಸುತ್ತಾ ಹೋಗುತ್ತದೆ. ಈಗಾಗಲೆ ಸುಮಾರು 250ಕ್ಕೂ ಅಧಿಕ ಟ್ಯಾಕ್ಸಿಗಳು ದ.ಕ. ಜಿಲ್ಲೆಯಲ್ಲಿ ಓಡಾಡುತ್ತಿವೆ. ಹೆಚ್ಚಿನ ಚಾಲಕರಿಗೆ ದಿನಕ್ಕೆ 2-3 ಬಾಡಿಗೆಗಳು ಮಾತ್ರ ಸಿಗುತ್ತವೆ. ಈ ಬಾಡಿಗೆಯಿಂದ ಎಂಬಿಜಿ ದರದಲ್ಲಿ ಶೇ.25ರಷ್ಟು ಕಮಿಷನ್ ಕಡಿತ ಮಾಡುತ್ತದೆ. ಅಲ್ಲದೆ ಕಂಪೆನಿಯು ವಾರಕ್ಕೊಮ್ಮೆ ದರಗಳನ್ನು ಬದಲಾಯಿಸುತ್ತಾ ಬರುತ್ತವೆ. ಇದರಿಂದ ನಷ್ಟಕ್ಕೀಡಾಗಿ ಸಾಲದ ಮೊತ್ತ ಪಾವತಿಸಲಾಗದ ಚಾಲಕರ ಕಾರುಗಳನ್ನು ಬ್ಯಾಂಕಿನವರು ವಶಪಡಿಸುವುದು, ಸ್ವತಃ ಚಾಲಕರೇ ಕಾರುಗಳನ್ನು ಬ್ಯಾಂಕ್‌ನ ವಶಕ್ಕೆ ಒಪ್ಪಿಸುವ ಪ್ರಕ್ರಿಯೆಯೂ ನಡೆಯುತ್ತದೆ ಎಂದರು.

ಡೀಸೆಲ್ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ದಿನದ 24 ಗಂಟೆಯೂ ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಪರೇಟರ್‌ಗಳು ಬಸ್, ರೈಲು, ವಿಮಾನ ನಿಲ್ದಾಣಗಳ ಇತರ ಖಾಸಗಿ ಟ್ಯಾಕ್ಸಿಗಳ ಪೈಪೋಟಿ, ಬೆದರಿಕೆಗೂ ಒಳಗಾಗುತ್ತಾರೆ. ಹಾಗಾಗಿ ಈ ಕಂಪೆನಿಗಳು ನ್ಯಾಯ ನೀಡದಿದ್ದರೆ ಹೋರಾಟ ಮಾಡುವುದು ಅನಿವಾರ್ಯ ಎಂದು ಬಿ.ಕೆ.ಇಮ್ತಿಯಾಝ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್‌ನ ಅಧ್ಯಕ್ಷ ಜಗರಾಜ್ ರೈ, ಪ್ರಧಾನ ಕಾರ್ಯದರ್ಶಿ ಸಾದಿಕ್ ಕಣ್ಣೂರು, ಜೊತೆ ಕಾರ್ಯದರ್ಶಿ ಕಮಲಾಕ್ಷ ಬಜಾಲ್, ಉಪಾಧ್ಯಕ್ಷ ಮುನವ್ವರ್ ಕುತ್ತಾರ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News