ಹಳೆಯಂಗಡಿ: ಸರಕಾರಿ ಗೋಮಾಳದಲ್ಲಿ ತಲೆಯೆತ್ತಿದ ಅಕ್ರಮ ಕಟ್ಟಡ

Update: 2018-02-27 07:59 GMT

ಸರಕಾರಿ ಜಮೀನು ಅತಿಕ್ರಮಣಕ್ಕೆ ಗ್ರಾಪಂ, ತಹಶೀಲ್ದಾರ್ ಮೌನ ಸಮ್ಮತಿ: ಆರೋಪ 

ಮಂಗಳೂರು, ಫೆ.27: ಮುಲ್ಕಿ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾ ನಗರದಲ್ಲಿರುವ ಸರಕಾರಿ ಗೋಮಾಳದ ಜಾಗದಲ್ಲಿ ಅಕ್ರಮವಾಗಿ ಕಟ್ಟಡವೊಂದು ನಿರ್ಮಾಣಗೊಂಡಿದ್ದು, ಇದರ ವಿರುದ್ಧ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಂಗಮ ಮಹಿಳಾ ಮಂಡಲ’ ಎಂಬ ಸಂಘಟನೆ ನಿರ್ಮಿಸುತ್ತಿರುವ ಈ ಕಟ್ಟಡಕ್ಕೆ ಗ್ರಾಮ ಪಂಚಾಯತ್‌ನಿಂದ ಯಾವುದೇ ಪರವಾನಿಗೆ ಪಡೆಯಲಾಗಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಪಂಚಾಯತ್, ಗ್ರಾಮ ಲೆಕ್ಕಾಧಿಕಾರಿ, ತಹಶಿಲ್ದಾರ್ ಅವರಿಗೆ ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಕಂದಾಯ ಸಚಿವರಿಗೂ ದೂರು

ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ಇಂದಿರಾ ನಗರದಲ್ಲಿ ಸರ್ವೇ ನಂಬರ್ 65/1ಸಿ1 ರಲ್ಲಿರುವ 1.41 ಎಕರೆ ಜಾಗವು ಗೋಮಾಳದ ಜಮೀನು ಎಂದು ಪಹಣಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಆದರೆ, ಸ್ಥಳೀಯ ಮಹಿಳಾ ಮಂಡಲವೊಂದು ಗ್ರಾಮ ಪಂಚಾಯತ್‌ನ ಗಮನಕ್ಕೂ ತಾರದೇ ಈ ಗೋಮಾಳದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದೆ. ಇದು ಕಾನೂನು ಕ್ರಮದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಗ್ರಾಪಂ ಅಧ್ಯಕ್ಷ, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ್, ಜಿಲ್ಲಾಧಿಕಾರಿ ಸಹಿತ ಕಂದಾಯ ಸಚಿವ ಕಾಗೋಡು ತಿಮ್ಮಪ್ಪರಿಗೂ ಲಿಖಿತ ದೂರು ನೀಡಿದ್ದಾರೆ.

ದೂರಿನ ಬಳಿಕವೂ ಎಗ್ಗಿಲ್ಲದೆ ಸಾಗಿದೆ ಕಾಮಗಾರಿ
ಇಷ್ಟೆಲ್ಲ ದೂರು ನೀಡಿದ ಬಳಿಕವೂ ಗ್ರಾಮ ಪಂಚಾಯತ್ ಆಗಲೀ, ಲೆಕ್ಕಾಧಿಕಾರಿ, ತಹಶೀಲ್ದಾರ್ ಆಗಲೀ ಈ ಅಕ್ರಮ ಕಟ್ಟಡದ ವಿರುದ್ಧ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗಿಲ್ಲ. ಇದರ ಫಲವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಎಗ್ಗಿಲ್ಲದೆ ಮುಂದುವರಿದಿದ್ದು, ಫೆ.25ಕ್ಕೆ ಕಟ್ಟಡದ ಬಹುತೇಕ ಕಾಮಗಾರಿ ಸಂಪೂರ್ಣಗೊಂಡಿದೆ. ಇದು ಅಧಿಕಾರಿಗಳ ನಿರ್ಲಕ್ಷದ ಪರಮಾವಧಿ ಎಂದು ಸ್ಥಳೀಯರಾದ ಹಾರಿಸ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ವ್ಯಾಪ್ತಿಯಲ್ಲ ಎನ್ನುತ್ತಿರುವ ಗ್ರಾಪಂ, ತಹಶೀಲ್ದಾರ್
ಗೋಮಾಳದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿರು ಬಗ್ಗೆ ಗ್ರಾಪಂ, ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಅವರು ಯಾವುದೇ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದಾಗ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದ್ದರು. ಅದರಂತೆ ಸ್ಥಗಿತಗೊಂಡಿದ್ದ ಕಾಮಗಾರಿ ಎರಡೇ ದಿನಗಳಲ್ಲಿ ಮತ್ತೆ ಆರಂಭಗೊಂಡಿತ್ತು ಎಂದು ಸ್ಥಳೀಯರಾದ ಮೊಯ್ದಿನ್ ಎಂಬವರು ತಿಳಿಸಿದ್ದಾರೆ.

ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಹಳೆಂಯಗಡಿ ಗ್ರಾಮ ಪಂಚಾಯತ್‌ನಲ್ಲಿ ವಿಚಾರಿಸಿದರೆ, ಅದು ಕಂದಾಯ ಇಲಾಖೆಯ ವ್ಯಾಪ್ತಿಯ ಜಮೀನು ಆಗಿದ್ದು, ಯಾವುದೇ ತಕರಾರುಗಳಿದ್ದಲ್ಲಿ ತಹಶಿಲ್ದಾರ್ ಮೂಲಕ ಪರಿಹರಿಸಿಕೊಳ್ಳಿ ಎನ್ನುತ್ತಾರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ. ಅದರಂತೆ ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ದೂರು ನೀಡಿದರೆ, ಆ ಜಮೀನು ಹಳೆಯಂಗಡಿ ಗ್ರಾಮ ಪಂಚಾಯತ್‌ಗೆ ಒಳಪಡುತ್ತದೆ. ಆದ್ದರಿಂದ ಗ್ರಾಮ ಪಂಚಾಯತ್‌ನಲ್ಲಿ ವಿಚಾರಿಸಿ ಎಂದು ಹೇಳಿ ಹಿಂದೆ ಕಳುಹಿಸಿದ್ದಾರೆ ಎಂದು ಮೊಯ್ದಿನ್ ದೂರಿದ್ದಾರೆ.

ಈ ನಡುವೆ ಹಳೆಯಂಗಡಿ ಗ್ರಾಪಂ ಉಪಾಧ್ಯಕ್ಷೆ ಅಕ್ರಮ ಕಟ್ಟಡ ನಿರ್ಮಾಣದ ಆರೋಪ ಎದುರಿಸುತ್ತಿರುವ ಸಂಗಮ ಮಹಿಳಾ ಮಂಡಲದ ಕಾರ್ಯಕರ್ತೆ ಆಗಿದ್ದಾರೆ. ಉಪಾಧ್ಯಕ್ಷೆಯೇ ಸ್ವತಃ ಸ್ಥಳದಲ್ಲಿ ಮೊಕ್ಕಂ ಇದ್ದು ಕಟ್ಟಡದ ಕಾಮಗಾರಿ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

 ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಗೋಮಾಳದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಕುಮ್ಮಕ್ಕು ನೀಡುವುದನ್ನು ಮುಂದುವರಿಸಿದಲ್ಲಿ ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

******************

ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ಸರಕಾರಿ ಜಮೀನಿನಲ್ಲಿ ಅಕ್ರಮ ಕಟ್ಟಡವಾಗಿ ನಿರ್ಮಾಣವಾಗುತ್ತಿದೆ ಎಂದು ಮಾರ್ಚ್ 19ರಂದು ಇಂದಿರಾ ನಗರದ ನಾಗರಿಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೆಕ್ಕಾಧಿಕಾರಿ ಮತ್ತು ಆರ್‌ಐ ಮೂಲಕ ಪರಿಶೀಲನೆ ಮಾಡಿಸಿ ವರದಿ ಪಡೆಯಲಾಗಿದೆ. ಅದರಂತೆ ಈ ಜಮೀನು ಹಳೆಯಂಗಡಿ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿರುವುದು ತಿಳಿದು ಬಂದಿದೆ. ಬೇರೆ ಇಲಾಖೆಗೆ ಸೇರಿರುವ ಬಗ್ಗೆ ತನಗೆ ಮಾಹಿತಿ ಇಲ್ಲ.

-ಮಾಣಿಕ್ಯ ಜೈನ್, ತಹಶೀಲ್ದಾರ್ ಮುಲ್ಕಿ

******************

ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಪಂಚಾಯತ್‌ಗೆ ದೂರು ಬಂದಿತ್ತು. ಕೂಡಲೇ ಕಾಮಗಾರಿ ನಿಲ್ಲಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಅಕ್ರಮ ಕಟ್ಟಡ ನಿರ್ಮಾಣವಾಗಿದೆ ಎನ್ನಲಾಗಿರುವ ಜಮೀನು ಗೋಮಾಳದ್ದಾಗಿದ್ದು, ಇದು ಪಂಚಾಯತ್ ವ್ಯಾಪ್ತಿಗೆ ಬರುವುದಿಲ್ಲ.

- ಅಬೂಬಕರ್, ಪಿಡಿಒ, ಹಳೆಯಂಗಡಿ ಗ್ರಾಪಂ.

******************

ಪ್ರತಿಕ್ರಿಯೆಗೆ ನಿರಾಕರಿಸಿದ ಗ್ರಾಪಂ ಅಧ್ಯಕ್ಷೆ

ಕಟ್ಟಡ ನಿರ್ಮಾಣದ ವಿವಾದಕ್ಕೆ ಸಂಬಂಧಿಸಿ ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾ ಅವರನ್ನು ‘ವಾರ್ತಾಭಾರತಿ’ ದೂರವಾಣಿ ಮೂಲಕ ಸಂಪರ್ಕಿಸಿ ಈ ವಿವಾದದ ಕುರಿತು ಮಾತುಕತೆ ಆರಂಭಿಸುತ್ತಿದ್ದಂತೆ ಅವರು ಕರೆ ಕಟ್ ಮಾಡಿದರು. ಬಳಿಕ ಕರೆ ಮಾಡಿದರೂ ಅವರು ಸ್ವೀಕರಿಸಿಲ್ಲ.

******************

 ಸದ್ಯ ಸಂಗಮ ಮಹಿಳಾ ಮಂಡಲ ಕಟ್ಟಡ ನಿರ್ಮಿಸಿರುವ ಸ್ಥಳದಲ್ಲೇ ತಮಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕೆಂದು 2003ರಲ್ಲಿ ಸ್ಥಳೀಯ ಮೂರು ಸಂಘ ಸಂಸ್ಥೆಗಳು ತಹಶೀಲ್ದಾರ್‌ರಿಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದವು. ಈ ವೇಳೆ ಉದ್ದೇಶಿತ ಸ್ಥಳ ಗೋಮಾಳದ ಜಮೀನು ಆಗಿರುವುದರಿಂದ ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗದು ಎಂದು ತಹಶೀಲ್ದಾರ್‌ಅವರು ಮನವಿಗೆ ಹಿಂಬರಹ ನೀಡಿ ವಾಪಸ್ ಕಳುಹಿಸಿದ್ದರು. ಆದರೆ, ಈಗ ವಿವಾದಿತ ಸ್ಥಳವನ್ನು ಪಂಚಾಯತ್ ಗೋಮಾಳ ಎಂದೂ, ತಹಶೀಲ್ದಾರ್ ಗ್ರಾಮ ಪಂಚಾಯತ್‌ನ ಸ್ಥಳವೆಂದೂ ವಿಭಿನ್ನ ಹೇಳಿಕೆಗಳನ್ನು ನೀಡುತ್ತಾ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ.
 - ಹಾರಿಸ್, ಸ್ಥಳೀಯರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News