ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆಯ ಬದ್ಧ ಸೈನಿಕರು: ಡಾ.ಎಂ.ಆರ್.ರವಿ

Update: 2018-02-27 10:58 GMT

ಮಂಗಳೂರು, ಫೆ.27: ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಬದ್ಧ ಸೈನಿಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಶ್ರಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಮತ್ತು ನೂತನ ಗರ್ಭ ನಿರೋಧಕ ವಿಧಾನಗಳ ಬಗ್ಗೆ ಒಂದು ದಿನದ ಪುನರ್ ಮನನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಮಾಜ ಆರೋಗ್ಯಕರವಾಗಿರಲು ಸರಕಾರದಿಂದ ಒದಗಿಸಲಾಗುವ ಸವಲತ್ತುಗಳನ್ನು ಸಾರ್ವಜನಿಕರ ಮನೆಬಾಗಿಲಿಗೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತರ ಕಾರ್ಯ ಅತಿ ಮುಖ್ಯವಾಗಿದೆ. ಆಶಾ ಕಾರ್ಯಕರ್ತರ ಬದ್ಧತೆಯ ಪಾಲ್ಗೊಳ್ಳುವಿಕೆಯಿಂದಾಗಿ ಸಮಾಜದ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಕಾರ್ಯಕರ್ತೆಯರಿಗೆ ನಗದು ಬಹಮಾನದೊಂದಿಗೆ ಸನ್ಮಾನಿಸಲಾಯಿತು.

ಜಿಲ್ಲಾ ಮಟ್ಟದಲ್ಲಿ ಮಂಗಳೂರು ತಾಲೂಕಿನ ಕೊಲ್ಲಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಡಗಮಿಜಾರು ಉಪ ಕೇಂದ್ರದ ಯಶೋದಾ ಪ್ರಥಮ, ಸುಳ್ಯದ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹರಿಹರ ಪಲ್ಲತ್ತಡ್ಕ ಉಪ ಕೇಂದ್ರದ ಪುಷ್ಪಾವತಿ ದ್ವಿತೀಯ ಹಾಗೂ ಪುತ್ತೂರಿನ ಕಡಬ ಆರೋಗ್ಯ ಕೇಂದ್ರದ ರೆಂಜಿಲಾಡಿ ಉಪ ಕೇಂದ್ರದ ಜಯಂತಿ ಪಿ. ತೃತೀಯ ಸ್ಥಾನ ಗಳಿಸಿ ಸನ್ಮಾನಿಸಲ್ಪಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಡಾ. ದುರ್ಗಾ ಪ್ರಸಾದ್, ಡಾ. ಪೂರ್ಣಮಾ, ಡಾ.ದೀಪಕ್ ರೈ ಉಪಸ್ಥಿತರಿದ್ದರು. ಆರ್‌ಸಿಎಚ್ ಅಧಿಕಾರಿ ಡಾ.ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಿಕಂದರ್ ಪಾಶಾ ಸ್ವಾಗತಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News