ಮರಳುಗಾರಿಕಾ ದೋಣಿಗಳಲ್ಲಿ ದೋಷಪೂರಿತ ಜಿಪಿಎಸ್: ಮಾ.2ರಂದು ಹೊಯ್ಗೆ ದೋಣಿ ಕಾರ್ಮಿಕರ ಸಂಘದಿಂದ ಧರಣಿ

Update: 2018-02-27 11:03 GMT

ಉಡುಪಿ, ಫೆ.27: ಮರಳುಗಾರಿಕೆ ದೋಣಿಗಳಿಗೆ ಅಳವಡಿಸಲಾದ ದೋಷಪೂರಿತ ಜಿಪಿಎಸ್ ಮೂಲಕ ಪರವಾನಿಗೆ ರದ್ದು ಮಾಡುವ ಹುನ್ನಾರವನ್ನು ಜಿಲ್ಲಾಡಳಿತ ನಡೆಸುತ್ತಿದ್ದು, ಇದರ ವಿರುದ್ಧ ಕಾನೂನಿನ ಮೋರೆ ಹೋಗಲು ನಿರ್ಧರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಹೊಯ್ಗೆ ದೋಣಿ ಕಾರ್ಮಿಕರ ಸಂಘ ತಿಳಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಮಂಜಯ್ಯ ಶೆಟ್ಟಿ ಸಬ್ಲಾಡಿ, ಜಿಪಿಎಸ್ ವಿರುದ್ಧ ಮರಳುಗಾರಿಕೆ ಪರವಾನಿಗೆದಾರರು, ಕಾರ್ಮಿಕರು, ಲಾರಿ ಮಾಲಕರು ಮತ್ತು ಚಾಲಕರು ಮಾ.2ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವರು ಎಂದರು.

ಕೋಟ್ಯಂತರ ರೂ. ನೀಡಿ ಮರಳುಗಾರಿಕಾ ದೋಣಿಗಳಿಗೆ ಜಿಪಿಎಸ್ ಅಳವಡಿಸಿದ್ದು, ಇದೀಗ ಜಿಲ್ಲಾಡಳಿತ ಪದೇಪದೆ ಜಿಪಿಎಸ್ ಉಲ್ಲಂಘನೆ ವರದಿ ನೀಡಿ ಸತಾಯಿಸುತ್ತಿದೆ. ಈ ಬಗ್ಗೆ ಸತ್ಯಶೋಧನ ಸಮಿತಿಯು ಪರಿಶೀಲನೆ ಮಾಡಿ ಜಿಪಿಎಸ್‌ನಲ್ಲಿ ತಾಂತ್ರಿಕ ತೊಂದರೆ ಇರುವುದಾಗಿ ವರದಿ ಮಾಡಿದೆ. ಆದರೆ ಜಿಲ್ಲಾಡಳಿತ ಜಿಪಿಎಸ್ ಸರಿ ಇದೆ ಎಂಬುದಾಗಿ ವಾದ ಮಂಡಿಸುತ್ತಿದೆ. ಇದರಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ಯಾಮ್ ಕುಂದರ್, ಉಪಾಧ್ಯಕ್ಷ ಸತ್ಯರಾಜ್ ಬಿರ್ತಿ, ಸುಧಾಕರ ಪೂಜಾರಿ, ಅನಿಲ್ ರೊಡ್ರಿಗಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News