ಭಾರತ ನಮಗೆ ಉಪಕಾರ ಮಾಡುತ್ತಿಲ್ಲ: ಟ್ರಂಪ್
ವಾಶಿಂಗ್ಟನ್, ಫೆ. 27: ಹಾರ್ಲೆ-ಡೇವಿಡ್ಸನ್ ಮೋಟರ್ ಬೈಕ್‌ಗಳ ಮೇಲಿನ ಆಮದು ಸುಂಕವನ್ನು ಭಾರತ 50 ಶೇಕಡಕ್ಕೆ ಇಳಿಸಿದ್ದರೂ, ಅದರಿಂದ ಅಮೆರಿಕಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ಅಮೆರಿಕ ನ್ಯಾಯೋಚಿತ ಹಾಗೂ ಪರಸ್ಪರ ಪೂರಕ ವ್ಯಾಪಾರ ಒಪ್ಪಂದಗಳನ್ನು ಬಯಸುತ್ತದೆ ಎಂದು ಅವರು ಹೇಳಿದರು.
‘‘ಹಾರ್ಲೆ-ಡೇವಿಡ್ಸನ್ ಭಾರತಕ್ಕೆ ತನ್ನ ಮೋಟರ್‌ಸೈಕಲ್‌ಗಳನ್ನು ಕಳುಹಿಸುವಾಗ ಅವರು 100 ಶೇಕಡ ತೆರಿಗೆ ಪಾವತಿಸಬೇಕು’’ ಎಂದು ಟ್ರಂಪ್ ಹೇಳಿದರು.
ಇಲ್ಲಿನ ಶ್ವೇತಭವನದಲ್ಲಿ ಸೋಮವಾರ ನೆರೆದ ಎಲ್ಲ ರಾಜ್ಯಗಳ ಗವರ್ನರ್‌ಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿ ಜೊತೆ ಇತ್ತೀಚೆಗೆ ನಡೆಸಿದ ಮಾತುಕತೆಯನ್ನು ಉಲ್ಲೇಖಿಸಿದ ಅವರು, ಆಮದಿತ ಮೋಟರ್ ಸೈಕಲ್‌ಗಳ ಮೇಲಿನ ಸುಂಕವನ್ನು ಭಾರತ ಕಡಿಮೆ ಮಾಡಿದೆ ಎಂದು ‘ಅದ್ಭುತ ಮನುಷ್ಯ’ ತನಗೆ ತಿಳಿಸಿದರು, ಆದರೆ ಇದರಿಂದ ಅಮೆರಿಕಕ್ಕೆ ಏನೂ ಲಾಭವಿಲ್ಲ ಎಂದರು.
‘‘ಅದ್ಭುತ ಮನುಷ್ಯ ಎಂಬುದಾಗಿ ನಾನು ಭಾವಿಸುವ ಪ್ರಧಾನಿ ಮೊನ್ನೆ ನನಗೆ ಕರೆ ಮಾಡಿ, ಆಮದು ಸುಂಕವನ್ನು ನಾವು 50 ಶೇಕಡಕ್ಕೆ ಇಳಿಸಿದ್ದೇವೆ ಎಂದು ಹೇಳಿದರು. ಸರಿ, ಆದರೆ ಈವರೆಗೆ ನಮಗೆ ಏನೂ ಸಿಕ್ಕಿಲ್ಲ ಎಂದು ನಾನು ಹೇಳಿದೆ. ಅವರಿಗೆ 50 ಶೇಕಡ ಸಿಗುತ್ತದೆ. ಆದರೆ ನಮಗೆ ಏನೂ ಸಿಗುವುದಿಲ್ಲ. ಅವರು ನಮಗೆ ಉಪಕಾರ ಮಾಡುತ್ತಿದ್ದಾರೆ ಎಂದು ಭಾವಿಸಿದ್ದಾರೆ. ಅದು ಉಪಕಾರವಲ್ಲ’’ ಎಂದರು.
ಮೋದಿ ಸುಂದರ ಪುರುಷ!
‘‘ಅವರು (ಮೋದಿ) ಸುಂದರ ಪುರುಷ. ಅಷ್ಟೇ ಚಂದದಿಂದ ಹೇಳಿದರು: ‘ನಾವು ಆಮದು ಸುಂಕವನ್ನು 75 ಶೇಕಡಕ್ಕೆ ಇಳಿಸಿದ್ದೇವೆ ಎಂಬುದನ್ನು ನಾನು ನಿಮಗೆ ತಿಳಿಸಬಯಸುತ್ತೇನೆ. ಅಷ್ಟೇ ಅಲ್ಲ, ನಾವು ಅದನ್ನು ಇನ್ನಷ್ಟು ಇಳಿಸಿದ್ದೇವೆ, ಅಂದರೆ 50 ಶೇಕಡಕ್ಕೆ ಇಳಿಸಿದ್ದೇವೆ’. ನಾನು ಏನು ಹೇಳಲಿ? ನಾನು ಇದರಿಂದ ರೋಮಾಂಚಿತಗೊಳ್ಳಲೇ? ಇದು ನಿಮಗೂ (ಗವರ್ನರ್) ಒಳ್ಳೆಯದಲ್ಲ. ಅದರಲ್ಲೂ ಮುಖ್ಯವಾಗಿ ಗವರ್ನರ್ ಸ್ಥಾನದಲ್ಲಿರುವ ನಿಮಗೆ. ಅದು ಸರಿಯಲ್ಲ. ಇಂಥ ಹಲವಾರು ಒಪ್ಪಂದಗಳನ್ನು ನಾವು ಹೊಂದಿದ್ದೇವೆ’’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.