ಮಾಲ್ದೀವ್ಸ್‌ನಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ; 4 ಸಂಸದರ ಬಂಧನ
ಮಾಲೆ (ಮಾಲ್ದೀವ್ಸ್), ಫೆ. 27: ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿರುವುದಕ್ಕಾಗಿ, ತುರ್ತು ಪರಿಸ್ಥಿತಿ ಕಾನೂನಿನನ್ವಯ ಇನ್ನೂ ನಾಲ್ಕು ಪ್ರತಿಪಕ್ಷ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪ್ರತಿಪಕ್ಷ ಮಂಗಳವಾರ ತಿಳಿಸಿದೆ.
ಯಮೀನ್ ಕೋರಿರುವಂತೆ, ದೇಶದ ಸುಪ್ರೀಂ ಕೋರ್ಟ್ ಕಳೆದ ವಾರ ತುರ್ತು ಪರಿಸ್ಥಿತಿಯನ್ನು 30 ದಿನಗಳ ಕಾಲ ವಿಸ್ತರಿಸಿದೆ. ರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಬೆದರಿಕೆ ಹಾಗೂ ಸಾಂವಿಧಾನಿಕ ಬಿಕ್ಕಟ್ಟನ್ನು ನಿಭಾಯಿಸಲು ತುರ್ತು ಪರಿಸ್ಥಿತಿ ವಿಸ್ತರಣೆ ಅಗತ್ಯವಾಗಿದೆ ಎಂದು ಅಧ್ಯಕ್ಷರು ವಾದಿಸಿದ್ದರು.
ಜೈಲಿನಲ್ಲಿರುವ 9 ಪ್ರತಿಪಕ್ಷ ನಾಯಕರ ದೋಷಿತ್ವವನ್ನು ರದ್ದುಪಡಿಸಿ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಮೂಲ ಆದೇಶವನ್ನು ಜಾರಿಗೆ ತರುವಂತೆ ಒತ್ತಾಯಿಸಿ ಸೋಮವಾರ ರಾತ್ರಿ ಪ್ರತಿಪಕ್ಷ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಯಮೀನ್‌ರ ಪಕ್ಷದಿಂದ ಪಕ್ಷಾಂತರ ಮಾಡಿರುವ ಇಬ್ಬರು ಸಂಸದರು ಹಾಗೂ ಪ್ರತಿಪಕ್ಷಗಳ ಇತರ ಇಬ್ಬರು ಸಂಸದರನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ ಎಂದು ಪ್ರಮುಖ ಪ್ರತಿಪಕ್ಷ ಮಾಲ್ದೀವಿಯನ್ ಡೆಮಾಕ್ರಟಿಕ್ ಪಾರ್ಟಿ ಟ್ವಿಟರ್‌ನಲ್ಲಿ ಹೇಳಿದೆ.