ರಾಮಜನ್ಮಭೂಮಿ ಮಾಲಕತ್ವದ ಕುರಿತು ಸಕ್ರಮ ದಾಖಲೆಗಳಿವೆ : ಧರಮ್ ದಾಸ್
ಮಥುರಾ, ಫೆ.27: ಭೂಮಿಯ ಮಾಲಕತ್ವದ ಕುರಿತು ತಮ್ಮ ಬಳಿ ಸಕ್ರಮವಾದ ದಾಖಲೆ ಪತ್ರಗಳಿರುವ ಕಾರಣ ರಾಮಜನ್ಮಭೂಮಿ ವಿವಾದದಲ್ಲಿ ಸುಪ್ರೀಂಕೋರ್ಟ್ ತಮ್ಮ ಪರವಾಗಿ ತೀರ್ಪು ನೀಡುವ ನಿರೀಕ್ಷೆಯಿದೆ ಎಂದು ರಾಮಜನ್ಮಭೂಮಿ ವಿವಾದದಲ್ಲಿ ಪ್ರಮುಖ ಫಿರ್ಯಾದಿಯಾಗಿರುವ ಧರಮ್‌ದಾಸ್ ಮಹಾರಾಜ್ ತಿಳಿಸಿದ್ದಾರೆ.
ಭೂಮಿಯ ಕುರಿತು ಇರುವ ವಿವಾದವನ್ನು ಯಾರ ಭಾವನೆಗಳಿಗೂ ಧಕ್ಕೆಯಾಗದ ರೀತಿಯಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ತಮ್ಮ ಬಳಿ ಭೂಮಿಯ ಮಾಲಕತ್ವದ ಕುರಿತು ಸಕ್ರಮವಾದ ದಾಖಲೆಪತ್ರಗಳಿರುವ ಕಾರಣ ತೀರ್ಪು ತಮ್ಮ ಪರವಾಗಿ ಬರಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು. ದಾಸ್ ಅವರು ಅಖಿಲ ಭಾರತೀಯ ಪಂಚ ರಮಾನಂದಿ ನಿರ್ಮಾಣಿ ಅನಿ ಅಖಾಡದ ಮಹಾಂತರಾಗಿದ್ದಾರೆ.
ಇಲ್ಲಿ ನಡೆಯುತ್ತಿರುವ ಶಂಕರಾಚಾರ್ಯ ಆಶ್ರಮದ ಯತಿಗಳ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಿ ಗೋವರ್ಧನ ಬೆಟ್ಟಕ್ಕೆ ಪ್ರದಕ್ಷಿಣೆ ಬರುತ್ತೇನೆ ಎಂದ ದಾಸ್, ಅಯೋಧ್ಯೆ ವಿಷಯಕ್ಕೆ ಸಂಬಂಧಿಸಿ ನಿಯೋಗವೊಂದು ಶೀಘ್ರ ಪ್ರಧಾನಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದೆ ಎಂದರು.
ಶಂಕರಾಚಾರ್ಯ ಅಧೋಕ್ಷಜಾನಂದ ತೀರ್ಥ ಮಹಾರಾಜರು ಮಾತನಾಡಿ, ಯತಿಗಳ ಸಭೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಘಟಿತ ಪ್ರಯತ್ನ ನಡೆಸಲು ನಿರ್ಧರಿಸಲಾಯಿತು ಎಂದರು. ಹಲವು ಮುಸ್ಲಿಮ್ ಮುಖಂಡರ ಜೊತೆ ತಾನು ಮಾತುಕತೆ ನಡೆಸಿದ್ದು, ಈ ಸ್ಥಳದಲ್ಲಿ ಮಸೀದಿ ನಿರ್ಮಿಸಲೂ ಒಪ್ಪಿದರೆ ತಮ್ಮ ಸಹಕಾರ ನೀಡುವುದಾಗಿ ಅವರು ತಿಳಿಸಿದ್ದಾರೆ ಎಂದು ಶಂಕರಾಚಾರ್ಯ ತೀರ್ಥರು ಹೇಳಿದರು.