×
Ad

ನರೋಡಾ ಪಾಟಿಯಾದಲ್ಲಿ ಹಿರಿಯ ಅಧಿಕಾರಿಗಳ ಸೂಚನೆ ಉಲ್ಲಂಘಿಸಿ ಪೊಲೀಸರೇ ನರಮೇಧಕ್ಕೆ ಅವಕಾಶ ನೀಡಿದ್ದು ಹೇಗೆ ?

Update: 2018-02-28 23:41 IST

ಆರ್‌ಬಿ ಶ್ರೀಕುಮಾರ್ ಅವರು ಗುಜರಾತ್ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದ ಮಾಜಿ ಹೆಚ್ಚುವರಿ ಮಹಾನಿರ್ದೇಶಕರು. ಗೋಧ್ರಾ ಹತ್ಯಾಕಾಂಡದ ಬಳಿಕ 2002ರಲ್ಲಿ ಈ ಹುದ್ದೆಯನ್ನು ಇವರು ವಹಿಸಿಕೊಂಡರು.

2004ರ ಆಗಸ್ಟ್‌ನಲ್ಲಿ ಶ್ರೀಕುಮಾರ್ ಅವರು  ಹತ್ಯಾಕಾಂಡದ ತನಿಖೆ ನಡೆಸಲು ನೇಮಕ ಮಾಡಿದ್ದ ನಾನಾವತಿ- ಮೆಹ್ತಾ ಆಯೋಗದ ಮುಂದೆ ರಾಜ್ಯ ಸರ್ಕಾರದ ವಿರುದ್ಧ  ಒಂಬತ್ತು ಅಫಿಡವಿಟ್‌ಗಳನ್ನು ಸಲ್ಲಿಸಿದರು. 1987ರಲ್ಲಿ ಇವರು ಕಚ್‌ನಲ್ಲಿ ಪೊಲೀಸ್ ಅಧೀಕ್ಷಕರಾಗಿದ್ದ ಅವಧಿಯಲ್ಲಿನ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವ ಕಾರಣ ನೀಡಿ 2005ರಲ್ಲಿ ಇವರಿಗೆ ಬಡ್ತಿ ನಿರಾಕರಿಸಲಾಯಿತು. ಆ ಬಳಿಕ ಅವರು ಪ್ರಕರಣವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ ಮುಂದೆ ಒಯ್ದರು. ಇದು ಶ್ರೀಕುಮಾರ್ ಪರವಾಗಿ 2006ರ ಸೆಪ್ಟೆಂಬರ್‌ನಲ್ಲಿ ತೀರ್ಪು ನೀಡಿತು.

'ರಹಸ್ಯ ಅಧಿಕೃತ ದಿನಚರಿ' ಹೊಂದಿದ್ದ  ಮತ್ತು ತನಿಖಾ ಸಮಿತಿಗೆ ವರ್ಗೀಕೃತ ಮಾಹಿತಿಯನ್ನು ನೀಡಿದ್ದ ಆರೋಪದಲ್ಲಿ  ಗುಜರಾತ್ ಸರ್ಕಾರ ಶ್ರೀಕುಮಾರ್ ವಿರುದ್ಧ ತನಿಖೆ ಆರಂಭಿಸಿತು. 2015ರ ಅಕ್ಟೋಬರ್‌ನಲ್ಲಿ ಅವರು ಈ ತನಿಖೆಗೆ ಸುಪ್ರೀಂಕೋರ್ಟ್‌ನಿಂದ ತಡೆಯಾಜ್ಞೆ ಪಡೆದರು.

ಶ್ರೀಕುಮಾರ್ ಅವರ ಕೃತಿ "ಗುಜರಾತ್: ಬಿಹೈಂಡ್ ದ ಕರ್ಟೈನ್" ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದೆ. ಇದು ಗುಜರಾತ್  ಹಿಂಸೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಸಂಘ ಪರಿವಾರದ ಪಾತ್ರವನ್ನು ಕಟುವಾಗಿ ಟೀಕಿಸಿದೆ. ಶ್ರೀಕುಮಾರ್ ಅವರು ಗಲಭೆಯ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾದ ಯುಪಿಎ ಸರ್ಕಾರದ ಬಗ್ಗೆಯೂ ಟೀಕಿಸಿದ್ದಾರೆ.

ಕೃತಿಯ ಈ ಕೆಳಗಿನ ಆಯ್ದ ಭಾಗದಲ್ಲಿ ಶ್ರೀಕುಮಾರ್ ಅವರು, 2002ರ ಫೆಬ್ರವರಿ 28ರಂದು ನರೋಡಾ ಪಾಟಿಯಾದಲ್ಲಿ ಮುಸ್ಲಿಮರನ್ನು ಸಂರಕ್ಷಿಸಲು ತಾವು ನೀಡಿದ್ದ ಸ್ಪಷ್ಟ ಆದೇಶವನ್ನು ಹೇಗೆ ಧಿಕ್ಕರಿಸಲಾಯಿತು ಎನ್ನುವುದನ್ನು ವಿವರಿಸಿದ್ದಾರೆ. ಈ ಗಲಭೆಯಲ್ಲಿ 96 ಮಂದಿ ಜೀವ ಕಳೆದುಕೊಂಡಿದ್ದರು.

ಅವರ ಪುಸ್ತಕದ ಆಯ್ದ ಭಾಗ ಇಲ್ಲಿದೆ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ತೀಸ್ತಾ ಸೆತಲ್ವಾಡ್ ನೇತೃತ್ವದ ಸಿಟಿಜನ್ ಫಾರ್ ಜೆಸ್ಟೀಸ್ ಅಂಡ್ ಪೀಸ್ ಸಂಘಟನೆಯ ಸಿಬಿಐನ ಮಾಜಿ ನಿರ್ದೇಶಕ ಡಾ.ಆರ್.ಕೆ.ರಾಘವನ್ ನೇತೃತ್ವದಲ್ಲಿ 2008ರ ಮಾರ್ಚ್‌ನಲ್ಲಿ ರಚನೆಯಾದ ವಿಶೇಷ ತನಿಖಾ ತಂಡ (ಎಸ್‌ಐಟಿ) ಗಲಭೆಯಲ್ಲಿ ಸಂತ್ರಸ್ತರಾಗಿ ಉಳಿದುಕೊಂಡವರಲ್ಲಿ ತೀರಾ ಆಶಾವಾದ ಮತ್ತು ನಿರೀಕ್ಷೆಯನ್ನು ಹುಟ್ಟುಹಾಕಿತ್ತು.

2008ರ ಮೇ 9ರಂದು ನಾನು ಡಾ.ಆರ್.ಕೆ.ರಾಘವನ್ ಅವರನ್ನು ಗಾಂಧಿನಗರದ ಎಸ್‌ಐಟಿ ಕಚೇರಿಯಲ್ಲಿ ಭೇಟಿ ಮಾಡಿ, ಎಸ್‌ಐಟಿ ತನಿಖೆಗೆ ವಹಿಸಿದ್ದ ಒಂಬತ್ತು ಪ್ರಮುಖ ಸಾಮೂಹಿಕ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೇಳಿಕೆಯನ್ನು ಸಲ್ಲಿಸಿದೆ. ಜತೆಗೆ ಆಯೋಗದ ಮುಂದೆ ಸಲ್ಲಿಸಿದ್ದ ನಾಲ್ಕು ಅಫಿಡವಿಟ್‌ಗಳ ಪ್ರತಿಯನ್ನೂ ಸಲ್ಲಿಸಿ, ಮುಂದಿನ ಕ್ರಮಕ್ಕೆ ಕೋರಿದ್ದೆ. ನರೋಡಾ ಪಾಟಿಯಾ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪ್ರಸ್ತುತ ಎನಿಸಿದ ನನ್ನ ಹೇಳಿಕೆಯ ಆಯ್ದ ಭಾಗವನ್ನು ಈ ಕೆಳಗೆ ನೀಡಲಾಗಿದೆ.

"2002ರ ಫೆಬ್ರವರಿ 28ರಂದು ಬೆಳಗ್ಗೆ 10.30ರ ಸುಮಾರಿಗೆ ನಾನು ಗಾಂಧಿನಗರದ ಪೊಲೀಸ್ ಭವನದ ಕಚೇರಿಯಲ್ಲಿದ್ದಾಗ ಅಹ್ಮದಾಬಾದ್ ನಗರದ ನರೋಡಾ ಪಾಟಿಯಾ ಪ್ರದೇಶದ ಸೈಜ್‌ಪುರ ಪ್ರದೇಶದಲ್ಲಿ ಕೇಂದ್ರ ಕಚೇರಿ ಹೊಂದಿದ್ದ ರಾಜ್ಯ ಮೀಸಲು ಪೊಲೀಸ್ ಪಡೆಯ ಗುಂಪು-2ರ ಕಮಾಂಡೆಂಟ್ ಶ್ರೀ ಖುರ್ಷಿದ್ ಅಹ್ಮದ್, ಐಪಿಎಸ್ (ಗುಜರಾತ್, 1977ನೇ ಬ್ಯಾಚ್, ಬಿಹಾರ ಮೂಲದವರು) ಅವರು ನನಗೆ ಮಹಿಳೆಯರು ಮತ್ತು ಮಕ್ಕಳು ಸೇರಿದ್ದ ಸುಮಾರು 500 ಮಂದಿ ಮುಸ್ಲಿಮರ ಗುಂಪು ಎಸ್‌ಆರ್‌ಪಿ ಪ್ರವೇಶ ದ್ವಾರದ ಗೇಟನ್ನು ಬಡಿಯುತ್ತಾ ಆಶ್ರಯಕ್ಕಾಗಿ ಮೊರೆ ಇಡುತ್ತಿದ್ದಾರೆ ಎಂದು ಹೇಳಿದರು.

ವಿಶ್ವಹಿಂದೂ ಪರಿಷತ್‌ನ ಸಶಸ್ತ್ರ ಹಿಂಸಾತ್ಮಕ ಗುಂಪಿನಿಂದ ರಕ್ಷಣೆ ಕೋರಿ ಅವರು ಆಶ್ರಯ ಬೇಡುತ್ತಿದ್ದಾರೆ ಎಂದು ಹೇಳಿದರು. ನನ್ನ ಕಚೇರಿಯಿಂದ ನಾನು ತಕ್ಷಣ ಗೇಟು ತೆರೆಯುವಂತೆ ಆದೇಶ ನೀಡಿದೆ ಹಾಗು ನಿರಾಶ್ರಿತರಿಗೆ ಅಲ್ಲಿನ ಬ್ಯಾರಕ್‌ಗಳಲ್ಲಿ ಆಶ್ರಯ ನೀಡುವಂತೆ ಸೂಚಿಸಿದೆ. ಸಿಬ್ಬಂದಿ ಬಂದೋಬಸ್ತ್‌ಗೆ ತೆರಳಿರುವುದರಿಂದ ಈ ಬ್ಯಾರಕ್‌ಗಳು ಖಾಲಿ ಇವೆ ಎಂಬ ಕಾರಣಕ್ಕೆ ಅಲ್ಲಿ ಆಶ್ರಯ ನೀಡಲು ಆದೇಶಿಸಿದೆ. ಆಶ್ರಯ ಕೋರಿದ ಎಲ್ಲ ನಾಗರಿಕರಿಗೂ ಎಸ್‌ಆರ್‌ಪಿ ಶಿಬಿರದ ಒಳಗೆ ಬರಲು ಅನುಮತಿ ನೀಡುವಂತೆ ಕಮಾಂಡೆಂಟ್‌ಗೆ ನಿರ್ದೇಶನ ನೀಡಿದೆ. ನನ್ನ ಸೂಚನೆಗಳನ್ನು ದೃಢೀಕರಿಸಿ ಕಮಾಂಡೆಂಟ್‌ಗೆ ಫ್ಯಾಕ್ಸ್ ಸಂದೇಶವನ್ನೂ ಕಳುಹಿಸಿದೆ. ಶ್ರೀ ಖುರ್ಷಿದ್ ಅಹ್ಮದ್ ಅವರಿಗೆ ಸೆಕೆಂಡ್ ಇನ್ ಕಮಾಂಡ್ ಆಗಿದ್ದವರು ಶ್ರೀ ಖುರೇಶಿ. ಮುಸ್ಲಿಂ ನಿರಾಶ್ರಿತರಿಗೆ ಎಸ್‌ಆರ್‌ಪಿ ಕ್ಯಾಂಪಸ್‌ನೊಳಗೆ ಬರಲು ಅನುಮತಿ ನೀಡುವ ಬಗ್ಗೆ ಇಬ್ಬರೂ ಅಧಿಕಾರಿಗಳು ಭೀತಿ ಹೊಂದಿದ್ದರು. ಆದ್ದರಿಂದ ಯಾರಾದರೂ ಈ ಬಗ್ಗೆ ಪ್ರಶ್ನಿಸಿದರೆ, ಎಡಿಜಿಪಿಯವರ ಲಿಖಿತ ಆದೇಶವನ್ನು ನಾವು ಪಾಲಿಸಿದ್ದೇವೆ ಎಂದು ವಿವರಣೆ ನೀಡುವಂತೆ ಅವರಿಗೆ ಹೇಳಿದೆ. (ನಾನು ಆಗ 11 ಎಸ್‌ಆರ್‌ಪಿ ಬೆಟಾಲಿಯನ್‌ಗಳ ಮೇಲ್ವಿಚಾರಣಾ ಆಡಳಿತ ನಡೆಸುತ್ತಿದ್ದ ಸಶಸ್ತ್ರ ಘಟಕಗಳ ಎಡಿಜಿಪಿ ಆಗಿದ್ದೆ).

ಆ ಬಳಿಕ ರಾಜ್ಯ ಸರ್ಕಾರ 500 ಮುಸ್ಲಿಮರಿಗೆ ಎಸ್‌ಆರ್‌ಪಿ ಕ್ಯಾಂಪಸ್‌ನಲ್ಲಿ ಆಶ್ರಯ ನೀಡುವ ಮೂಲಕ ಅವರ ಜೀವರಕ್ಷಣೆ ಮಾಡಿದ್ದಾಗಿ ಸರ್ಕಾರ ಹೇಳಿಕೊಂಡಿತು. ಆದರೆ ಆ ಬಳಿಕ ಶೋಚನೀಯ, ದುರದೃಷ್ಟಕರ ಹಾಗೂ ನಿಂದನಾತ್ಮಕ ಘಟನೋತ್ತರ ಅಂಶಗಳಿದ್ದವು. ಎಸ್‌ಆರ್‌ಪಿಎಫ್ ಅಧಿಕಾರಿಗಳು ಹೇಳಿದಂತೆ, 2002ರ ಫೆಬ್ರುವರಿ 28ರ ಮಧ್ಯಾಹ್ನದ ಬಳಿಕ ಮೇಲಧಿಕಾರಿಗಳು ಹಾಗೂ ಸ್ಥಳೀಯ ಮುಖಂಡ ಒತ್ತಡದಿಂದಾಗಿ ನನಗೆ ಮಾಹಿತಿ ನೀಡದೇ ಕಮಾಂಡೆಂಟ್, ನಿರಾಶ್ರಿತರಿಗೆ ತೆರೆದಿದ್ದ ಗೇಟ್ ಮುಚ್ಚಿದರು.

ಪರಿಣಾಮವಾಗಿ ಎಸ್‌ಆರ್‌ಪಿಎಫ್ ಮುಂದೆ, ಗುಂಪು-2ರ ಪ್ರವೇಶದ್ವಾರದಲ್ಲಿ 100-130 ಮಂದಿ ಮುಸ್ಲಿಮರ ಹತ್ಯೆಯಾಯಿತು. ಹಲವು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು ಹಾಗೂ ಮೃತದೇಹಗಳನ್ನು ಪಾಳುಬಿದ್ದಿದ್ದ ಗೋಡೆಯ ಪಕ್ಕದಲ್ಲಿ ಎಸೆಯಲಾಯಿತು. ಹಿಂದೂ ಗುಂಪುಗಳು, ಎಸ್‌ಆರ್‌ಪಿಎಫ್ ಪ್ರವೇಶದ್ವಾರದ ಮುಂದೆ ಸೇರಿದ್ದ ಮುಸ್ಲಿಮರನ್ನು ಸುಲಭದ ಗುರಿಯಾಗಿ ಮಾಡಿಕೊಂಡವು. ಒಂದೇ ಕಡೆ ಅವರಿಗೆ ದೊಡ್ಡ ಸಂಖ್ಯೆಯ ಮಂದಿ ಸಿಕ್ಕಿದಂತಾಯಿತು . ಇಲ್ಲಿ ನಿರ್ದಿಷ್ಟವಾಗಿ ಗಮನಿಸಬೇಕಾದ ಅಂಶವೆಂದರೆ ಗಲಭೆಯ ಬಳಿಕ ಶ್ರೀ ಖುರ್ಷಿದ್ ಅಹ್ಮದ್ ಅವರನ್ನು ಸೂರತ್ ನಗರದ ಡಿಸಿಪಿಯಾಗಿ ವರ್ಗಾಯಿಸಲಾಯಿತು. ಆ ಪ್ರದೇಶದ ಸಮೃದ್ಧತೆ ಮತ್ತು ಆ ಹುದ್ದೆಗೆ ಇದ್ದ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಎಸ್‌ಪಿ ದರ್ಜೆಯ ಅಧಿಕಾರಿಯೊಬ್ಬರಿಗೆ ಸಿಕ್ಕಿದ್ದ ಬಹುದೊಡ್ಡ ಸ್ಥಾನ ಅದಾಗಿತ್ತು. ಶ್ರೀ ಖುರ್ಷಿದ್ ಅಹ್ಮದ್ ಅವರ ಪತ್ನಿ ಶ್ರೀಮತಿ ಶಮೀಮಾ ಹುಸೇನ್ (ಐಎಎಸ್, 1997, ಗುಜರಾತ್, ಮಧ್ಯಪ್ರದೇಶ ಮೂಲದವರು) ಅವರನ್ನು ಜಿಲ್ಲಾ ಅಭಿವೃದ್ಧಿ ಅಧಿಕಾರಿಯಾಗಿ ಶ್ರೀಮಂತ ವಲ್ಸದ್ ಜಿಲ್ಲೆಗೆ ವರ್ಗಾಯಿಸಲಾಯಿತು. ಬಳಿಕ ಅವರನ್ನು ಜಿಲ್ಲಾಧಿಕಾರಿಯಾಗಿ ಸುರೇಂದ್ರನಗರ ಜಿಲ್ಲೆಗೆ ನಿಯೋಜಿಸಲಾಯಿತು. ಇಂಥ ಮಹತ್ವದ ಹುದ್ದೆಗಳನ್ನು ಮುಸ್ಲಿಂ ಅಧಿಕಾರಿಗಳು ಅದರಲ್ಲೂ ಹೊರರಾಜ್ಯಕ್ಕೆ ಸೇರಿದವರು ಈ ಹಿಂದೆ ಪಡೆದ ನಿದರ್ಶನಗಳಿಲ್ಲ.

ಮಹತ್ವದ ಅಂಶವೆಂದರೆ ಉಪ ಕಮಾಂಡೆಂಟ್ ಶ್ರೀ ಖುರೇಶಿ, ಗ್ರೂಪ್-8 ಕಮಾಂಡೆಂಟ್ ಆಗಿ ರಾಜಕೋಟ್ ನಗರಕ್ಕೆ ವರ್ಗಾವಣೆಗೊಂಡರು. ಇವರಿಗೆ ಎರಡನೇ ಪೊಲೀಸ್ ಪದಕವನ್ನು ಗಣನೀಯ ಸೇವೆಗಾಗಿ ನೀಡಲಾಯಿತು. ಎಸ್‌ಆರ್‌ಪಿಎಫ್ ಅಧಿಕಾರಿಗಳಿಗೆ ಈ ಪದಕ ನೀಡುವುದು ಅಪರೂಪ. ನರೋಡಾ ಪಾಟಿಯಾ ಹತ್ಯಾಕಾಂಡಕ್ಕೆ ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಇವರಿಗೆ ಸಿಕ್ಕಿದ ಪ್ರಶಸ್ತಿಗಳು ಇವು ಎಂದು ಆಡಳಿತಾತ್ಮಕ ವರ್ತುಲದಲ್ಲಿ ಗುಲ್ಲೆದ್ದಿದೆ.

ಎಸ್‌ಐಟಿ ನನಗೆ ಸಮನ್ಸ್ ನೀಡಿ ಕರೆಸಿಕೊಳ್ಳಲಿಲ್ಲ ಹಾಗೂ ಅಪರಾಧ ಸಂಹಿತೆಯ ಸೆಕ್ಷನ್ 161ರ ಅನ್ವಯ ನನ್ನ ಹೇಳಿಕೆ ದಾಖಲಿಸಿಕೊಳ್ಳಲಿಲ್ಲ. ಇದು ನನ್ನ ಹೇಳಿಕೆಯನ್ನು ಪುರಾವೆಯಾಗಿ ಪರಿಗಣಿಸಲು ಅಗತ್ಯವಾಗಿದ್ದ ಕಾನೂನಾತ್ಮಕ ಅಂಶ. ನಾನು ನನ್ನ ಅಧಿಕಾರದಿಂದ ಮುಕ್ತ ಎಸ್‌ಆರ್‌ಪಿ ಕ್ಯಾಂಪ್‌ಗೆ ಮುಸ್ಲಿಮರಿಗಾಗಿ ಆದೇಶ ನೀಡಿದ್ದರೂ, ನರೋಡಾ ಪಾಟಿಯಾ ಹತ್ಯಾಕಾಂಡ ಪ್ರಕರಣದಲ್ಲಿ ನನ್ನನ್ನು ತನಿಖಾ ಸಾಕ್ಷಿಯಾಗಿ ಪರಿಗಣಿಸಲಿಲ್ಲ. ವೈಯಕ್ತಿಕವಾಗಿ ವಿಧಿವಿಜ್ಞಾನ ಪರೀಕ್ಷೆಗೆ ಒಳಪಡುವುದಾಗಿ ನಾನೇ ಸ್ವಯಂ ಹೇಳಿಕೆ ನೀಡಿದರೂ, ನನಗೆ ನಾರ್ಕೋ ಮತ್ತು ಬ್ರೈನ್ ಫಿಂಗರ್‌ಪ್ರಿಂಟ್ ಪರೀಕ್ಷೆ ನಡೆಸಲಿಲ್ಲ.

ಗಲಭೆಯ ಸಂತ್ರಸ್ತರು ಪದೇ ಪದೇ ತಮ್ಮ ಕಳವಳ, ಅಸಮಾಧಾನ ಹಾಗೂ ಸಂದೇಹವನ್ನು ವ್ಯಕ್ತಪಡಿಸಿದ್ದರು. ಗುಜರಾತ್ ಪೊಲೀಸರಿಂದ ಮತ್ತು ಗುಜರಾತ್ ಪೊಲೀಸರ ಮೂಲಕ 9 ಪ್ರಮುಖ ಹತ್ಯಾಕಾಂಡ ಪ್ರಕರಣಗಳ ತನಿಖೆ ನಡೆಸಿದ ವೀಶೇಷ ತನಿಖಾ ತಂಡದಿಂದ ನ್ಯಾಯ ವಿತರಣೆಯಾಗುವ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. ಆದರೆ ನಮ್ಮ ಅಪರಾಧ ನ್ಯಾಯ ವಿತರಣೆ ವ್ಯವಸ್ಥೆಯ ನಿಷ್ಪಕ್ಷಪಾತ, ನೈಪುಣ್ಯ ಮತ್ತು ನಿಷ್ಠೆಯ ಬಗ್ಗೆ ನಾನು ಅವರಿಗೆ ಭರವಸೆ ನೀಡುತ್ತಲೇ ಬಂದಿದ್ದೆ. ಜತೆಗೆ ತ್ವರಿತವಾಗಿ ನ್ಯಾಯದಾನ ಮಾಡುವ ನ್ಯಾಯಾಂಗದ ಉತ್ಸಾಹದಿಂದ ಅವರು, ದೇಶದ್ರೋಹಿ, ಪ್ರತ್ಯೇಕತಾವಾದಿ ಜಿಹಾದಿ ಉಗ್ರರ ಸಿದ್ಧಾಂತದ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದೂ ಹೇಳಿದ್ದೆ. ಅವರ ಪ್ರಕಾರ, ವಿಶೇಷ ತನಿಖಾ ತಂಡವು, ಗುಜರಾತ್ ಪೊಲೀಸರು ನೀಡಿದ್ದ ತನಿಖೆಯ ಮಾರ್ಗಸೂಚಿಯ ಅನ್ವಯವೇ ಪ್ರಮುಖ ಹತ್ಯಾಕಾಂಡ ಪ್ರಕರಣಗಳ ತನಿಖೆ ನಡೆಸಿದರು.

ಆದರೆ ಸಾಕ್ಷಿಗಳು ಮತ್ತು ದೂರುದಾರರನ್ನು ಒತ್ತಡ, ಬೆದರಿಕೆ ಮತ್ತು ಭಯಪಡಿಸಿ ತಿರುಗಿಸುವ ಪ್ರಯತ್ನ ನಡೆಸಿದ ಆರೋಪ ಎದುರಿಸುತ್ತಿದ್ದ ಗುಜರಾತ್ ಪೊಲೀಸರಿಗಿಂತ ಭಿನ್ನವಾಗಿ, ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಆರೋಪಿಗಳ ವಿರುದ್ಧದ ಎಫ್‌ಐಆರ್‌ಗಳ ಮಾನ್ಯತೆಗೇ ದ್ರೋಹ ಎಸಗುವ ರೀತಿಯಲ್ಲಿ ಅವರ ಪರವಾಗಿ ಹಾಗೂ ಅವರ ಬಗೆಗಿನ ಸಹಾನುಭೂತಿಯಿಂದ ವಿಶೇಷ ತನಿಖಾ ತಂಡ ಕಾರ್ಯ ನಿರ್ವಹಿಸಿತು. ಸಿಜೆಪಿ ಮನವಿಯ ಮೇರೆಗೆ ಸುಪ್ರೀಂಕೋರ್ಟ್ ನೀಡಿದ ಆದೇಶದ ನೆಲೆಯಲ್ಲಿ ಸಾಕ್ಷಿಗಳನ್ನು ರಕ್ಷಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಎಲ್ಲ ಅಲ್ಪಸಂಖ್ಯಾತ ವಿರೋಧಿ ಪ್ರಕರಣಗಳಲ್ಲಿ ಗುಜರಾತ್ ಪೊಲೀಸರು ಎಲ್ಲ ಆರೋಪಿಗಳನ್ನು ಕಾನೂನು ಕುಣಿಕೆಯಿಂದ ರಕ್ಷಿಸಲು ಪ್ರಯತ್ನ ಮಾಡಿದರು. 2000ಕ್ಕೂ ಅಧಿಕ ಗಲಭೆ ಪ್ರಕರಣಗಳ ಪೈಕಿ ವಿಚಾರಣೆ ಹಂತಕ್ಕೆ ಬಂದಿದ್ದ ಕೇವಲ 30-35 ಪ್ರಕರಣಗಳನ್ನು ಮಾತ್ರ ಗುಜರಾತ್ ಪೊಲೀಸರು ಸುಪ್ರೀಂಕೋರ್ಟ್ ಆದೇಶಕ್ಕೆ ಅನುಗುಣವಾಗಿ ಮರು ತನಿಖೆಗೆ ಒಳಪಡಿಸಿದರು.

ಉಳಿದ ಪ್ರಕರಣಗಳಲ್ಲಿ, ಗಲಭೆ ಸಂತ್ರಸ್ತರಾಗಿ ಉಳಿದುಕೊಂಡಿರುವವರೂ ಸೇರಿದಂತೆ ಸಾಕ್ಷಿಗಳು ನ್ಯಾಯಾಲಯ ವಿಚಾರಣೆ ವೇಳೆ ತಾವೇ ನೀಡಿದ್ದ ಹೇಳಿಕೆಗಳಿಗೆ ತಾಳೆಯಾಗದ ಹೇಳಿಕೆಗಳನ್ನು ಪೊಲೀಸರಿಗೆ ನೀಡಿದರು. ಎಸ್‌ಐಟಿ ಗಲಭೆಯಲ್ಲಿ ನೇರವಾಗಿ ಶಾಮೀಲಾದವರನ್ನು ಬಂಧಿಸಿ ಆರೋಪಪಟ್ಟಿ ಸಲ್ಲಿಸಿದರೂ, ಇದರ ಯೋಜನೆ ರೂಪಿಸಿದವರು, ಸಂಘಟಕರು, ಕ್ರೋಢೀಕರಿಸಿದವರು ಮತ್ತು ಅಲ್ಪಸಂಖ್ಯಾತ ವಿರೋಧಿ ಗಲಭೆಗೆ ಅವಕಾಶ ಮಡಿಕೊಟ್ಟವರ ವಿರುದ್ಧ ಯಾವ ಕ್ರಮಕ್ಕೂ ಮುಂದಾಗಲಿಲ್ಲ. ಎಸ್‌ಐಟಿ ಈ ಇಡೀ ಅಪರಾಧದ ಸಂಕೀರ್ಣತೆಯನ್ನು ಕೇವಲ ತಳಹಂತದ ಕಾರ್ಯಕರ್ತರಿಗಷ್ಟೇ ಸೀಮಿತಗೊಳಿಸಿತು. ಇಬ್ಬರು ಪೊಲೀಸ್ ನಿರೀಕ್ಷಕರ ಹೊರತಾಗಿ, ಯಾವುದೇ ಉನ್ನತ ಅಧಿಕಾರಿಗಳನ್ನು ಯಾವುದೇ ಕರ್ತವ್ಯ ನಿರ್ಲಕ್ಷ್ಯದ ಹೊಣೆಗಾರಿಕೆಗಾಗಿ, ಹಿಂದೂ ಗುಂಪುಗಳು ಹಲ್ಲೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಹೊಣೆ ಮಾಡಲಿಲ್ಲ.

ಹೋರಾಟಗಾರರು ಮತ್ತು ಸಂತ್ರಸ್ತರು ಸಾಕಷ್ಟು ಸದ್ದುಗದ್ದಲ ಮಾಡಿದ ಬಳಿಕವಷ್ಟೇ, ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ತನಿಖೆ ನಡೆಸಿದ ಡಿವೈಎಸ್ಪಿ ನೋಯಲ್ ಪರ್ಮಾರ್ ಅವರನ್ನು ಈ ಪ್ರಕರಣದ ಹೊಣೆಗಾರಿಕೆಯಿಂದ ಮುಕ್ತಗೊಳಿಸಲಾಯಿತು. ನಿವೃತ್ತಿಯಾಗಿ ಹಲವು ತಿಂಗಳು ಕಳೆದರೂ, ಅದುವರೆಗೂ ಅವರೇ ಪ್ರಕರಣಗಳ ತನಿಖೆ ನಡೆಸುತ್ತಿದ್ದರು. ಈ ಪ್ರಕರಣದ ಇಬ್ಬರು ಪ್ರಮುಖ ಸಾಕ್ಷಿಗಳು, ನ್ಯಾಯಾಂಗದ ಹೊರಗೆ ಒಪ್ಪಿಕೊಂಡಂತೆ, ರೈಲು ಬೆಂಕಿ ಪ್ರಕರಣದಲ್ಲಿ ಪೊಲೀಸ್ ಸಿದ್ಧಾಂತವನ್ನು ಬೆಂಬಲಿಸುವ ಸಲುವಾಗಿ ನೋಯಲ್ ಪರ್ಮಾರ್ ಇವರಿಗೆ ಲಂಚ ನೀಡಿದ್ದರು. ಇದಕ್ಕಿಂತ ಹೆಚ್ಚಾಗಿ ವಿಶೇಷ ನ್ಯಾಯಾಲಯ ತನ್ನ ತೀರ್ಪಿನಲ್ಲಿ, ನರೋಡಾ ಪಾಟಯಾ ಮತ್ತು ಸರ್ದಾರ್‌ಪುರ ಸಾಮೂಹಿಕ ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದರೂ, ಗಲಭೆ ಪ್ರಕರಣಗಳ ತನಿಖೆ ವಿಚಾರದಲ್ಲಿ ಗುಜರಾತ್ ಪೊಲೀಸರು ಯಾವುದೇ ಲೋಪ ಎಸಗಿದ್ದೂ ಎಸ್‌ಐಟಿ ಗಮನಕ್ಕೆ ಬರಲಿಲ್ಲ. ಜತೆಗೆ ಎಸ್‌ಐಟಿ ಈ ಪ್ರಕರಣ ಕೈಗೆತ್ತಿಕೊಳ್ಳುವ ಮೊದಲು ಪೊಲೀಸರು ಉದ್ದೇಶಪೂರ್ವಕವಾಗಿ ಪ್ರಕರಣದ ತನಿಖೆಯಲ್ಲಿ ಲೋಪ ಎಸಗಿದ್ದನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದರೂ, ಎಸ್‌ಐಟಿ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಅಹ್ಮದಾಬಾದ್ ನಗರದ ಪೊಲೀಸ್ ಆಯುಕ್ತರು ಈ ಪ್ರದೇಶದಲ್ಲಿ ಹೇರಿದ್ದ ಕರ್ಫ್ಯೂ ಜಾರಿಗೊಳಿಸದಿರುವ ಕಾರಣದಿಂದ ಶಸ್ತ್ರಾಸ್ತ್ರ ಹೊಂದಿದ್ದ ಮಂದಿ ಮುಕ್ತವಾಗಿ ಅಲ್ಪಸಂಖ್ಯಾತರ ವಾಸತಾಣಗಳ ಮೇಲೆ ದಾಳಿ ಮಾಡಿ 96 ಮಂದಿಯನ್ನು ಹತ್ಯೆ ಮಾಡಿದರು. ಸ್ಥಳೀಯ ಪೊಲೀಸರು ಕರ್ಫ್ಯೂ ಉಲ್ಲಂಘನೆಯಾಗಿ ಯಾರನ್ನೂ ಬಂಧಿಸಲಿಲ್ಲ ಹಾಗೂ ಭಾರತೀಯ ದಂಡಸಂಹಿತೆಯ ಸೆಕ್ಷನ್ 188ರ ಅನ್ವಯ ಅವರ ವಿರುದ್ಧ ಯಾವ ತನಿಖೆಯನ್ನೂ ನಡೆಸಲಿಲ್ಲ. ಇದು ಅಪರಾಧ ಎಸಗಲು ರಾಜಾರೋಷವಾಗಿ ಅನುಕೂಲ ಮಾಡಿಕೊಟ್ಟಂತಲ್ಲವೇ?

(ಮಾನಸ ಪಬ್ಲಿಕೇಶನ್ಸ್ ಪ್ರಕಟಿಸಿರುವ ಆರ್.ಬಿ.ಶ್ರೀಕುಮಾರ್ ಅವರ "ಗುಜರಾತ್: ಬಿಹೈಂಡ್ ದ ಕರ್ಟೈನ್" ಕೃತಿಯ ಆಯ್ದ ಭಾಗಗಳು)

Writer - ಆರ್ ಬಿ ಶ್ರೀಕುಮಾರ್

contributor

Editor - ಆರ್ ಬಿ ಶ್ರೀಕುಮಾರ್

contributor

Similar News