ಪರೇಶ್ ರಾವಲ್ ಎಡವಟ್ಟಿನಿಂದ ರಟ್ಟಾಯ್ತು ಬಿಜೆಪಿಯ ಕೃತಕ ಟ್ವಿಟರ್ ಅಭಿಯಾನದ ಗುಟ್ಟು

Update: 2018-03-01 06:43 GMT

ಹೊಸದಿಲ್ಲಿ, ಮಾ.1: ಕೆಲವೊಂದು ಪೂರ್ವ ನಿಯೋಜಿತ ತಂತ್ರಗಾರಿಕೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಟ್ರೆಂಡಿಂಗ್ ವಿಚಾರಗಳನ್ನು  ಸೃಷ್ಟಿಸಲಾಗುತ್ತದೆ. ಬಿಜೆಪಿ ಸಂಸದ ಹಾಗೂ ನಟ ಪರೇಶ್ ಪರೇಶ್ ರಾವಲ್ ಅವರ ಆಕಸ್ಮಿಕ ಟ್ವೀಟ್ ಒಂದು ಕೂಡ ಇದನ್ನೇ ಹೇಳುತ್ತಿರುವಂತಿದೆ.

ಝೂಟಿಕಾಂಗ್ರೆಸ್ (#JhootiCongress) ಎಂಬ ಹ್ಯಾಶ್ ಟ್ಯಾಗ್ ಅನ್ನು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಮಾಡುವಂತೆ ಬಿಜೆಪಿ ಬೆಂಬಲಿಗರಿಗೆ ನೀಡಲಾಗಿರುವ ಸೂಚನೆಯೊಂದರ ಗೂಗಲ್ ಡಾಕ್ಯುಮೆಂಟ್ ಒಂದನ್ನು ಮಂಗಳವಾರ ಪರೇಶ್ ಅವರು ಆಕಸ್ಮಿಕವಾಗಿ ಟ್ವೀಟ್ ಮಾಡಿದ್ದರು. ಬಿಜೆಪಿಯ ಕೃತಕ ಟ್ವಿಟರ್ ಅಭಿಯಾನದ ಬಗ್ಗೆ ಈ ಹಿಂದೆ ಹಲವು ಬಾರಿ ವರದಿಯಾಗಿದ್ದರೂ ಈ ಬಾರಿ ಪಕ್ಷದ ಸಂಸದರೇ ಮಾಡಿರುವ ಟ್ವೀಟ್ ಈ ಗುಟ್ಟನ್ನು ರಟ್ಟು ಮಾಡಿದೆ.

ಕಾಂಗ್ರೆಸ್ ವಿರೋಧಿಸಿ ಮಾಡಲಾಗುವ ಟ್ವೀಟ್ ಗಳನ್ನು ಹ್ಯಾಶ್ ಟ್ಯಾಗ್ ಗಳನ್ನು ಬಳಸಿ ಟ್ರೆಂಡ್ ಮಾಡಲಾಗುತ್ತದೆ. ಇಂತಹ ಟ್ವೀಟ್ ಗಳನ್ನು ಯಾರೂ ಕೂಡ ತಮ್ಮ ಆಸಕ್ತಿಯಿಂದ ಮಾಡಿರುವುದಿಲ್ಲ. ಬದಲಾಗಿ ನಕಲಿ ಟ್ರೆಂಡ್ ಗಳನ್ನು ಕ್ರಿಯೇಟ್ ಮಾಡುವಂತೆ ಹೇಳಲಾಗುತ್ತದೆ. ಇದೇ ಹ್ಯಾಶ್ ಟ್ಯಾಗನ್ನು ಟ್ರೆಂಡ್ ಮಾಡಲು ಒಂದು ತಂಡವೇ ಇರುತ್ತದೆ.

ಪರೇಶ್ ರಾವಲ್ ಇದನ್ನು ಮೆಸೇಜ್ ಆಗಿ ಪಕ್ಷದ ನಾಯಕರಿಗೆ ಕಳುಹಿಸಬೇಕಿತ್ತು. ಆದರೆ ಅವರು ಅದನ್ನು ಟ್ವೀಟ್ ಮಾಡಿದ್ದರು. ತಮ್ಮ ತಪ್ಪಿನ ಅರಿವಾಗುತ್ತಲೇ ಅವರು ಟ್ವೀಟ್ ಡಿಲೀಟ್ ಮಾಡಿದ್ದರು. ಈ ಡಾಕ್ಯುಮೆಂಟ್ ನಲ್ಲಿ ಬಿಜೆಪಿ ಬೆಂಬಲಿಗರ ಉಪಯೋಗಕ್ಕೆಂದು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಡ್ರಾಫ್ಟ್ ಟ್ವೀಟ್ ಗಳಿದ್ದವು.

"ದಶಕಗಳ ಕಾಲ ಅಧಿಕಾರದಲ್ಲಿದ್ದ ನಂತರ ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬ ಅಧಿಕಾರದಿಂದ ಹೊರಗಿರಲು ಕಷ್ಟ ಪಡುತ್ತಿದೆ.  ಅವರು ಹೇಗಾದರೂ ಮಾಡಿ ಅಧಿಕಾರ ಪಡೆಯಲು ಯತ್ನಿಸುತ್ತಾರೆ. ರಾಷ್ಟ್ರೀಯ ಭದ್ರತೆ ವಿಚಾರಗಳೂ ಅವರಿಗೆ ಏನೇನೂ ಅಲ್ಲ. ಅವರು ಡೋಕ್ಲಂ ಬಗ್ಗೆ ಸುಳ್ಳು ಹರಡಿದ್ದಾರೆ. ಚೀನಾದ ರಾಯಭಾರಿಯನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ. ಎಫ್‍ಆರ್ ಡಿಐ ಮಸೂದೆಯ ಬಗ್ಗೆ ಸುಳ್ಳು ಹರಡಲು ಈ ಪಕ್ಷ ಯಾವ ಮಟ್ಟಕ್ಕೂ ಹೋಗಬಹುದು ಗುಜರಾತ್ ಚುನಾವಣೆಯ ಸಂದರ್ಭ ಪಾಕಿಸ್ತಾನಿಯರನ್ನು ಭೇಟಿಯಾಗಿದ್ದರೂ ಇಲ್ಲವೆನ್ನುತ್ತಿದ್ದಾರೆ. ಅವರನ್ನು ಎಕ್ಸ್ ಪೋಸ್ ಮಾಡುವ ಸಮಯ ಬಂದಿದೆ. ನಾವು #ಝೂಟಿಕಾಂಗ್ರೆಸ್ ಟ್ರೆಂಡಿಂಗ್ ಮಾಡೋಣ'' ಎಂದು ಗೂಗಲ್ ಡಾಕ್ಯುಮೆಂಟ್ ನಲ್ಲಿ ಬರೆಯಲಾಗಿತ್ತು.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಈ ಹ್ಯಾಶ್ ಟ್ಯಾಂಗ್ ಟ್ರೆಂಡಿಂಗ್ ಆಗಲು ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News