ದ.ಆಫ್ರಿಕಾದಲ್ಲಿ ಗುಪ್ತಾ ಕುಟುಂಬದ ಹಣದ ಸ್ತಂಭನ: ಬ್ಯಾಂಕ್ ಆಫ್ ಬರೋಡಾ ಆಕ್ಷೇಪ

Update: 2018-03-01 16:08 GMT

ಜೋಹಾನ್ಸ್‌ಬರ್ಗ್.ಮಾ.1: ಸರಕಾರಿ ಬೆಂಬಲಿತ ಡೇರಿ ಫಾರ್ಮ್‌ಗೆ ಮೀಸಲಾಗಿದ್ದ ಹಣವನ್ನು ರಾಜಕೀಯ ನಂಟು ಹೊಂದಿರುವ ಗುಪ್ತಾ ಕುಟುಂಬ ಮತ್ತು ಅದರ ಸಹವರ್ತಿಗಳಿಗೆ ವರ್ಗಾಯಿಸುವಲ್ಲಿ ನೆರವಾಗಿದ್ದ ಆರೋಪದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ತನ್ನ ನಿಧಿಗಳನ್ನು ಸ್ತಂಭನಗೊಳಿಸಿರುವುದನ್ನು ಭಾರತದ ಸರಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ(ಬಿಒಬಿ) ಆಕ್ಷೇಪಿಸಿದೆ.

ಫ್ರೀ ಸ್ಟೇಟ್ ಪ್ರಾಂತ್ಯದಲ್ಲಿರುವ ಸರಕಾರಿ ಒಡೆತನದ ಡೇರಿ ಫಾರ್ಮ್‌ನ್ನು 2012ರಲ್ಲಿ ಗುಪ್ತಾ ಕುಟುಂಬಕ್ಕೆ ಸಂಬಂಧಿಸಿರುವ ಎಸ್ಟಿನಾ ಕಂಪನಿಗೆ ಲೀಸ್ ಆಧಾರದಲ್ಲಿ ನೀಡಿದ್ದಕ್ಕೆ ಈ ಪ್ರಕರಣವು ಸಂಬಂಧಿಸಿದೆ. ಭೂಮಿಯ ಅಭಿವೃದ್ಧಿಗೆ ನೆರವಾಗಲು ಪ್ರಾದೇಶಿಕ ಸರಕಾರವು ಒಪ್ಪಿಕೊಂಡಿತ್ತಾದರೂ ಫಾರ್ಮ್‌ಗೆ ಮೀಸಲಿಡಲಾಗಿದ್ದ 220 ಮಿಲಿಯ ರ್ಯಾಂಡ್‌ಗೂ ಅಧಿಕ ಮೊತ್ತವನ್ನು ಮೂವರು ಗುಪ್ತಾ ಸೋದರರಲ್ಲಿ ಓರ್ವರಾದ ಅತುಲ ಗುಪ್ತಾ ಮತ್ತು ಹಲವಾರು ಕಂಪನಿಗಳು ಹಾಗೂ ಸಹವರ್ತಿಗಳಿಗೆ ವರ್ಗಾವಣೆ ಗೊಳಿಸಲಾಗಿದೆ ಎಂಬ ಆರೋಪಗಳ ಬಳಿಕ ಫ್ರೀ ಸ್ಟೇಟ್ ಪ್ರಾಂತ್ಯದ ಉಚ್ಚ ನ್ಯಾಯಾಲಯವು ಯೋಜನೆಗೆ ಸಂಬಂಧಿಸಿದ ಆಸ್ತಿಗಳನ್ನು ಸ್ತಂಭನಗೊಳಿಸಲು ಜ.19ರಂದು ನ್ಯಾಷನಲ್ ಪ್ರಾಸಿಕ್ಯೂಟಿಂಗ್ ಅಥಾರಿಟಿಗೆ ಅನುಮತಿ ನೀಡಿತ್ತು.

ಗ್ರಾಹಕರು ತಮಗೆ ಸೇರಿದ್ದ ಹಣವನ್ನು ಈಗಾಗಲೇ ಹಿಂದೆಗೆದುಕೊಂಡಿರುವುದರಿಂದ ಮತ್ತು ಅಷ್ಟು ಮೊತ್ತಕ್ಕೆ ಸಮನಾದ ಬಿಒಬಿಯ ಸ್ವಂತ ಹಣವನ್ನು ಜಪ್ತಿ ಮಾಡಿರುವುದು ಸಮರ್ಥನೀಯವಲ್ಲವಾದ್ದರಿಂದ 30 ಮಿಲಿಯನ್ ರ್ಯಾಂಡ್(2.5 ಮಿ.ಡಾ.) ಮೊತ್ತದ ಸ್ತಂಭನ ಆದೇಶವು ತಪ್ಪಿನಿಂದ ಕೂಡಿದೆ ಎಂದು ಬ್ಯಾಂಕಿನ ಕಾನೂನು ಪ್ರತಿನಿಧಿ ಲೂಕ್ ಸ್ಪಿಲರ್ ಅವರು ಉಚ್ಚ ನ್ಯಾಯಾಲಯದಲ್ಲಿ ಹೇಳಿದರು.

ಇತರ ಬ್ಯಾಂಕುಗಳೂ ಇದೇ ಡೇರಿ ಫಾರ್ಮ್‌ಗೆ ಹಣವನ್ನು ವರ್ಗಾಯಿಸಿರುವುದನ್ನು ನ್ಯಾಯಾಲಯದ ದಾಲೆಗಳು ತೋರಿಸುತ್ತಿವೆ, ಆದರೆ ಅವುಗಳ ಹಣವನ್ನು ಸ್ತಂಭನಗೊಳಿ ಸಲಾಗಿಲ್ಲ. ಹೀಗಾಗಿ ಬಿಒಬಿ ವಿರುದ್ಧದ ಆದೇಶವು ನ್ಯಾಯಸಮ್ಮತವಾಗಿಲ್ಲ ಎಂದು ಸ್ಪಿಲರ್ ತಿಳಿಸಿದರು.

 ಆಸ್ತಿಗಳನ್ನು ಜಪ್ತಿ ಮಾಡಿರುವುದನ್ನು ಪುನರ್‌ಪರಿಶೀಲಿಸುವಂತೆ ಕೋರಿ ಅತುಲ ಗುಪ್ತಾ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಉದ್ಯಮಗಳು ಇದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿವೆ. ಗುಪ್ತಾ ಕುಟುಂಬವು ಮಾಜಿ ಅಧ್ಯಕ್ಷ ಜಾಕೋಬ್ ಝುಮಾ ಅವರೊಡನೆ ನಿಕಟ ಸಂಬಂಧಗಳನ್ನು ಹೊಂದಿದ್ದು, ಇದನ್ನು ಸರಕಾರದ ಗುತ್ತಿಗೆಗಳನ್ನು ಪಡೆದುಕೊಳ್ಳಲು ಮತ್ತು ಸರಕಾರಿ ನೇಮಕಗಳ ಮೇಲೆ ಪ್ರಭಾವ ಬೀರಲು ಬಳಸಿಕೊಳ್ಳುತ್ತಿತ್ತು ಎಂದು ಆರೋಪಿಸಲಾಗಿದೆ. ಆದರೆ ತಾವು ಯಾವುದೇ ತಪ್ಪುಗಳನ್ನು ಮಾಡಿಲ್ಲ ಎಂದು ಝುಮಾ ಮತ್ತು ಗುಪ್ತಾ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News