×
Ad

ಅನಾರೋಗ್ಯ ಪೀಡಿತ ಪುತ್ರಿಯನ್ನು ಬೈಕ್‌ನಲ್ಲಿ ಸಾಗಿಸಿದ ತಂದೆ

Update: 2018-03-01 22:18 IST

ರತ್ಲಂ (ಮ.ಪ್ರ), ಮಾ.1: ಆ್ಯಂಬುಲೆನ್ಸ್ ಸೇವೆ ಒದಗಿಸಲು ನಿರಾಕರಿಸಿದ ಕಾರಣ ತನ್ನ ಅನಾರೋಗ್ಯ ಪೀಡಿತ ಮಗಳನ್ನು ತಂದೆಯೊಬ್ಬರು ಬೈಕ್‌ನಲ್ಲಿ ಮೂವತ್ತು ಕಿ.ಮೀ ದೂರವಿರುವ ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯದಲ್ಲಿ ಆಕೆ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ನಡೆದಿದೆ.

ಮಾಧ್ಯಮಗಳು ವರದಿ ಮಾಡಿರುವಂತೆ, ಮಧ್ಯಪ್ರದೇಶದ ನಂದ್ಲೇತ ಗ್ರಾಮದ ನಿವಾಸಿಯಾಗಿರುವ ದಿನಗೂಲಿ ನೌಕರ ಘನಶ್ಯಾಮ ತೀವ್ರ ಜ್ವರದಿಂದ ಬಳಲುತ್ತಿದ್ದ ತನ್ನ ಮಗಳು ನಾಲ್ಕರ ಹರೆಯದ ಜೀಜಾಳನ್ನು ಹತ್ತಿರದ ಆರೋಗ್ಯ ಕೇಂದ್ರ ಕೊಂಡೊಯ್ದಿದ್ದರು. ಅಲ್ಲಿ ಜೀಜಾಳನ್ನು ಪರೀಕ್ಷಿಸಿದ ವೈದ್ಯರು ಆಕೆಗೆ ದೊಡ್ಡಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ತಿಳಿಸಿದ್ದರು. ತನ್ನ ಮಗಳನ್ನು ಸಾಗಿಸಲು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಮಾಡುವಂತೆ ಆರೋಗ್ಯ ಕೇಂದ್ರದ ಸಿಬ್ಬಂದಿಯಲ್ಲಿ ಮನವಿ ಮಾಡಿದರೂ ಅವರು ನಿರಾಕರಿಸಿದ್ದರು. ಕೂಡಲೇ ತನ್ನ ಗೆಳೆಯನಿಗೆ ಕರೆ ಮಾಡಿದ ಘನಶ್ಯಾಮ ಆತನ ಬೈಕ್‌ನಲ್ಲೇ ಮೂವತ್ತು ಕಿ.ಮೀ ದೂರವಿರುವ ಆಸ್ಪತ್ರೆಗೆ ಮಗಳನ್ನು ಸಾಗಿಸಲು ನಿರ್ಧರಿಸಿದರು. ಗೆಳೆಯ ಬೈಕ್ ಚಲಾಯಿಸಿದರೆ ಘನಶ್ಯಾಮ ಕೈಗೆ ಸೂಚಿ ಚುಚ್ಚಿದ್ದ ಮಗಳನ್ನು ಹಿಡಿದು ಕುಳಿತಿದ್ದರು. ಅವರ ಹಿಂದೆ ಪತ್ನಿ ಗ್ಲೂಕೋಸ್ ಬಾಟಲಿಯನ್ನು ಹಿಡಿದು ಕುಳಿತಿದ್ದರು. ಆದರೆ ಆಸ್ಪತ್ರೆ ತಲುಪಿ ಅಲ್ಲಿನ ವೈದ್ಯರು ಜೀಜಾಳನ್ನು ಪರೀಕ್ಷಿಸಿದಾಗ ಆಕೆ ಅದಾಗಲೇ ಮೃತಪಟ್ಟಿರುವುದು ತಿಳಿಯಿತು. ಘಟನೆಯ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ರತ್ಲಂನ ಪ್ರಭಾರ ಕಲೆಕ್ಟರ್ ಸೋಮೇಶ್ ಮಿಶ್ರಾ ತನಿಖೆಗೆ ಆಗ್ರಹಿಸಿದ್ದಾರೆ. ಸೈಲಾನಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇವಲ ಒಂದು ಆ್ಯಂಬುಲೆನ್ಸ್ ಇದ್ದು ಅದು ಕೂಡಾ ಮೂರು ತಿಂಗಳಿಂದ ಹಾಳಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ವಾಹನವನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರೂ ಅವರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಗ್ಯ ಕೇಂದ್ರದ ಸಿಬ್ಬಂದಿ ದೂರಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಆ್ಯಂಬುಲೆನ್ಸ್ ಸೇವೆಯ ಕೊರತೆ ಮತ್ತು ಸೂಕ್ತ ಸೌಲಭ್ಯಗಳಿಲ್ಲದ ಕಾರಣ ಅನೇಕ ಸಾವುಗಳು ಸಂಭವಿಸುತ್ತಿದ್ದು ಸ್ಥಳೀಯಾಡಳಿತಗಳು ಈ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News