ಭಾರತ-ಚೀನಾ ಗಡಿ ಪರಿಸ್ಥಿತಿ ಉಲ್ಬಣಿಸುವ ಸಾಧ್ಯತೆಯಿದೆ: ಸುಭಾಷ್ ಭಾಮ್ರೆ
ಹೊಸದಿಲ್ಲಿ, ಮಾ.1: ಭಾರತ ಮತ್ತು ಚೀನಾ ಗಡಿಭಾಗದಲ್ಲಿ ಪರಿಸ್ಥಿತಿಯು ಅತ್ಯಂತ ಸೂಕ್ಷ್ಮವಾಗಿದೆ ಮತ್ತು ಯಾವಾಗ ಬೇಕಾದರೂ ಉಲ್ಬಣಿಸುವ ಸಾಧ್ಯತೆಯಿದೆ ಎಂದು ಕೇಂದ್ರ ರಕ್ಷಣಾ ರಾಜ್ಯ ಸಚಿವ ಸುಭಾಷ್ ಭಾಮ್ರೆ ಗುರುವಾರ ತಿಳಿಸಿದ್ದಾರೆ. ನೈಜ ನಿಯಂತ್ರಣ ರೇಖೆಯಲ್ಲಿ ಸೇನೆಯ ಗಸ್ತು ತಿರುಗುವಿಕೆ ಮತ್ತು ಘರ್ಷಣೆಗಳ ಪರಿಣಾಮವಾಗಿ ಪರಿಸ್ಥಿತಿಯು ವಿಕೋಪಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಸಚಿವರು ತಿಳಿಸಿದ್ದಾರೆ. ಭಾರತ ಮತ್ತು ಚೀನಾದ ಮಧ್ಯೆಯಿರುವ ನಾಲ್ಕು ಸಾವಿರ ಕಿ.ಮೀ ಉದ್ದದ ಗಡಿಯನ್ನು ನೈಜ ನಿಯಂತ್ರಣ ರೇಖೆ ಎಂದು ಕರೆಯಲಾಗುತ್ತದೆ. ಆತ್ಮವಿಶ್ವಾಸವನ್ನು ಹೆಚ್ಚಿಸುವ ಕ್ರಮಗಳನ್ನು ಅಧಿಕಗೊಳಿಸಲಾಗಿದ್ದು ಅದರ ಜೊತೆಗೆ ನೈಜ ನಿಯಂತ್ರಣ ರೇಖೆಯಲ್ಲಿ ಶಾಂತಿಯನ್ನು ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗುವುದು ಎಂದು ರಾಷ್ಟ್ರ ನಿರ್ಮಾಣದಲ್ಲಿ ಸೇನೆಯ ಪಾತ್ರ ಕಾರ್ಯಾಗಾರದಲ್ಲಿ ಮಾತನಾಡುವ ವೇಳೆ ಸಚಿವರು ತಿಳಿಸಿದ್ದಾರೆ.
ಕಳೆದ ವರ್ಷ ಜೂನ್ 16ರಂದು ಭಾರತೀಯ ಸೇನೆಯು ವಿವಾದಿತ ಪ್ರದೇಶದಲ್ಲಿ ಚೀನಾ ನಿರ್ಮಿಸುತ್ತಿದ್ದ ರಸ್ತೆಯ ಕಾಮಗಾರಿಯನ್ನು ತಡೆದ ಪರಿಣಾಮವಾಗಿ ಡೋಕ್ಲಾದಲ್ಲಿ ಎರಡು ದೇಶಗಳ ಸೇನೆಯ ಮಧ್ಯೆ ಘರ್ಷಣೆ ನಡೆದಿತ್ತು. ನಿರಂತರ 73 ದಿನಗಳ ಕಾಲ ನಡೆದ ಈ ಮುಖಾಮುಖಿ ಆಗಸ್ಟ್ 28ರಂದು ಕೊನೆಯಾಗಿತ್ತು. ಚೀನಾವು ಉತ್ತರ ಡೋಕ್ಲಾದಲ್ಲಿ ತನ್ನ ಸೇನೆಯನ್ನು ಜಮಾಯಿಸುತ್ತಿದ್ದು ವಿವಾದಿತ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ವೇಗವಾಗಿ ಅಭಿವೃದ್ಧಿಗೊಳಿಸುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ನೆರೆಯ ದೇಶದಲ್ಲಿ ಹೆಚ್ಚುತ್ತಿರುವ ಅಸ್ಥಿರತೆಯಿಂದಾಗಿ ಸಮೂಹ ವಿಧ್ವಂಸಕ ಆಯುಧಗಳು ಉಗ್ರರ ಕೈಸೇರುವ ಭೀತಿಯಿದೆ ಎಂದು ಪಾಕಿಸ್ತಾನದತ್ತ ಬೆಟ್ಟು ಮಾಡಿ ಸಚಿವರು ತಿಳಿಸಿದ್ದಾರೆ. ನೆರೆದೇಶವು ಉದ್ದೇಶಪೂರ್ವಕವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘಿಸಿ ಸೇನೆ ಮತ್ತು ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ. ಇದರ ವಿರುದ್ಧ ಕಠಿಣ ಕ್ರಮವನ್ನು ಸರಕಾರ ತೆಗೆದುಕೊಂಡಿದೆ ಎಂದು ಭಾಮ್ರೆ ತಿಳಿಸಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಮೂಲಭುತವಾದವನ್ನು ಪರಿಣಾಮಕಾರಿಯಾಗಿ ಎದುರಿಸಬೇಕಾಗಿದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇಂಥವುಗಳು ಸಮಾಜದಲ್ಲಿ ವೇಗವಾಗಿ ಹರಡುತ್ತಿರುವುದು ಆತಂಕದ ವಿಷಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.