×
Ad

ಅಬಾಟ್‌ ಬೌನ್ಸರ್ ಗೆ ಕುಸಿದು ಬಿದ್ದ ಮತ್ತೊಬ್ಬ ಬ್ಯಾಟ್ಸ್‌ಮನ್‌!

Update: 2018-03-04 14:00 IST

ಮೆಲ್ಬೋರ್ನ್, ಮಾ.4: ಆಸ್ಟ್ರೇಲಿಯದ ವೇಗದ ಬೌಲರ್ ಸೀನ್ ಅಬಾಟ್ 2014ರ ನವೆಂಬರ್‌ನಲ್ಲಿ ಆಸ್ಟ್ರೇಲಿಯದ ದೇಶೀಯ ಕ್ರಿಕೆಟ್‌ನಲ್ಲಿ ನಡೆದ ಅಹಿತಕರ ಘಟನೆಯನ್ನು ಮತ್ತೊಮ್ಮೆ ನೆನಪಿಸಿದ್ದಾರೆ.

ರವಿವಾರ ನಡೆದ ಶೀಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ನ್ಯೂ ಸೌತ್ ವೇಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಅಬಾಟ್ ಎಸೆದ ಬೌನ್ಸರ್ ಎಸೆತ ವೊಂದು ವಿಕ್ಟೋರಿಯ ತಂಡದ ಬ್ಯಾಟ್ಸ್‌ಮನ್ ವಿಲ್ ಪುಕೋಸ್ಕಿ ಹೆಲ್ಮೆಟ್‌ಗೆ ಬಲವಾಗಿ ಅಪ್ಪಳಿಸಿತು. ಇದರಿಂದ ನೆಲಕ್ಕುರುಳಿದ ವಿಲ್ ಗಾಯಗೊಂಡು ನಿವೃತ್ತಿಯಾದರು. ಚೆಂಡು ಬಡಿದ ಬಳಿಕ ಮೈದಾನದಲ್ಲೇ ಚಿಕಿತ್ಸೆ ಪಡೆದ ವಿಲ್ ಕೆಲವು ನಿಮಿಷದ ಬಳಿಕ ಚೇತರಿಸಿಕೊಂಡರು. ವೈದ್ಯರ ಹಾಗೂ ಫಿಜಿಯೋ ನೆರವಿನಿಂದ ಮೈದಾನದಿಂದ ಹೊರ ನಡೆದಿದ್ದಾರೆ. ಆದರೆ, ವಿಲ್ ಸರಿಯಾಗಿ ನಿಲ್ಲಲು ಪರದಾಡುತ್ತಿರುವಂತೆ ಕಂಡುಬಂದರು ಎಂದು ವರದಿಯಾಗಿದೆ.

ಬ್ಯಾಟ್ಸ್‌ಮನ್ ಹೆಲ್ಮೆಟ್‌ಗೆ ಅಬಾಟ್ ಬೌನ್ಸರ್ ಎಸೆತ ಅಪ್ಪಳಿಸಿದ ಘಟನೆ 2014ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ದಾರುಣ ಸಾವಿನ ಘಟನೆಯನ್ನು ನೆನಪಿಸಿತು.

ಸಿಡ್ನಿಯಲ್ಲಿ ನಡೆದ ಶೀಫೀಲ್ಡ್ ಶೀಲ್ಡ್ ದೇಶೀಯ ಟೂರ್ನಿಯಲ್ಲಿ ಅಬಾಟ್ ಎಸೆದ ಬೌನ್ಸರ್‌ವೊಂದು ಆಸ್ಟ್ರೇಲಿಯದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ಹೆಲ್ಮೆಟ್‌ಗೆ ಅಪ್ಪಳಿಸಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹ್ಯೂಸ್ ದುರಂತ ಸಾವು ಆಸ್ಟ್ರೇಲಿಯ ಹಾಗೂ ವಿಶ್ವ ಕ್ರಿಕೆಟ್‌ಗೆ ದೊಡ್ಡ ಆಘಾತ ಉಂಟು ಮಾಡಿತ್ತು.

ಇದೀಗ ಅಬಾಟ್ ಬೌಲಿಂಗ್‌ಗೆ ಗಾಯಗೊಂಡಿರುವ 20ರ ಹರೆಯದ ಪುಕೊಸ್ಕಿ ಹಲವು ಬಾರಿ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದಾರೆ. ಕಳೆದ ಋತುವಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲಿ ಚೆಂಡು ತಲೆಗೆ ಬಡಿದು ಗಾಯಗೊಂಡಿದ್ದರು. ಮೂರು ತಿಂಗಳ ಬಳಿಕ ಚೇತರಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News