ಮುಸ್ಲಿಮರಿಗೆ ಮೇಯರ್ ಸ್ಥಾನ ನೀಡಲು ಒತ್ತಾಯ: ಸಚಿವ ರೈಯನ್ನು ಭೇಟಿಯಾದ ನಿಯೋಗ

Update: 2018-03-05 13:53 GMT

ಮಂಗಳೂರು, ಮಾ.5: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಮುಸ್ಲಿಮರಿಗೆ ನೀಡಬೇಕೆಂದು ಕಾಂಗ್ರೆಸ್ ಅಲ್ಪಸಂಖ್ಯಾತರ ನಿಯೋಗವೊಂದು ಸಚಿವ ರಮಾನಾಥ ರೈಯವರನ್ನು ಅವರ ನಿವಾಸದಲ್ಲಿ ಭೇಟಿಯಾಯಿತು.

ನಿಯೋಗದಲ್ಲಿ ಕಾಂಗ್ರೆಸ್ ಸದಸ್ಯರಿಗಿಂತೂ ಹೆಚ್ಚಿನ ಸಂಖ್ಯೆಯಲ್ಲಿ ಮಂಗಳೂರಿನ ಉದ್ಯಮಿಗಳಿದ್ದರು. ಎಸ್.ಎಂ.ಆರ್. ರಶೀದ್ ಹಾಜಿ, ಕಣಚೂರು ಮೋನು, ಜಮಾಅತೆ ಇಸ್ಲಾಮಿ ಹಿಂದ್ ನ ಮುಹಮ್ಮದ್ ಕುಂಞಿ, ಉದ್ಯಮಿ ಮನ್ಸೂರ್ ಅಹ್ಮದ್ ಆಝಾದ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಜಿಪಂ ಮಾಜಿ ಸದಸ್ಯ ಫಾರೂಕ್, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಎನ್.ಕೆ. ಕರೀಂ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಕರಾವಳಿ ವಲಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯು.ಬಿ.ಸಲೀಂ, ಎನ್ ಎಸ್ ಯುಐ ಮಾಜಿ ಜಿಲ್ಲಾಧ್ಯಕ್ಷ ಮುಹಮ್ಮದ್ ಅಲ್ತಾಫ್, ಮಾಜಿ ಕಾರ್ಪೊರೇಟರ್ ಅಬೂಬಕರ್ ಕುದ್ರೋಳಿ ಮತ್ತಿತರ 100ಕ್ಕೂ ಅಧಿಕ ಮಂದಿ ನಿಯೋಗದಲ್ಲಿದ್ದರು.

ಮುಸ್ಲಿಮರಿಗೇ ಮೇಯರ್ ಸ್ಥಾನ ನೀಡಬೇಕು. ಈ ಹಿಂದೆ ನೀಡಿರುವ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಬೇಕು ಎಂದು ನಿಯೋಗವು ಒತ್ತಾಯಿಸಿತು.

ಈ ಸಂದರ್ಭ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ, ಈ ವಿಷಯದಲ್ಲಿ ನಾನು ಮಾತ್ರ ನಿರ್ಧಾರ ಕೈಗೊಳ್ಳುವಂತಿಲ್ಲ. ಶಾಸಕರಾದ ಜೆ.ಆರ್.ಲೋಬೊ ಹಾಗು ಮೊಯ್ದಿನ್ ಬಾವ ಜೊತೆಯೂ ಮಾತನಾಡಬೇಕಾಗಿದೆ. ಕೆಲ ದಿನಗಳ ಮೊದಲು ಪಕ್ಷದೊಳಗೆ ಪ್ರತ್ಯೇಕ ಸಭೆ ನಡೆಸಿಲ್ಲ. ಕಾಂಗ್ರೆಸ್ ನೊಳಗಿದ್ದು ಕಾಂಗ್ರೆಸ್ ಬಗ್ಗೆ ಮಾತನಾಡುವುದು ಮತೀಯ ವಾದಿಗಳ ಕೆಲಸ. ನಾನು ಮುಸ್ಲಿಮರಿಗೆ ಹಲವು ಸಹಾಯಗಳನ್ನು ಮಾಡಿದ್ದೇನೆ. ಕಾಂಗ್ರೆಸ್ ನೊಳಗಿದ್ದೇ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.

ಇದಕ್ಕುತ್ತರಿಸಿದ ನಿಯೋಗ, “ನಾವು ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ. ಸಾಮಾಜಿಕ ನ್ಯಾಯ ಕಾಂಗ್ರೆಸ್ ತತ್ವವಾಗಿರುವುದರಿಂದ ನಾವಿದನ್ನು ಕೇಳುತ್ತಿದ್ದೇವೆ. ನಮಗೆ ಮೇಯರ್ ಸ್ಥಾನ ನೀಡಬೇಕು” ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News