×
Ad

ಮುಸ್ಲಿಂ ಮಹಿಳೆಯ ಬೆರಳು ಕತ್ತರಿಸಿದ ಬಜರಂಗದಳ ಕಾರ್ಯಕರ್ತರು: ಆರೋಪ

Update: 2018-03-06 16:53 IST

ಅಹ್ಮದಾಬಾದ್, ಮಾ.6: ದನಗಳನ್ನು ಮೇಯಿಸಲು ಹೊರ ಹೋಗಿದ್ದ ಮುಸ್ಲಿಂ ಮಹಿಳೆಯೊಬ್ಬರ ಬೆರಳನ್ನು ಬಜರಂಗದಳದ ಕಾರ್ಯಕರ್ತರು ಕತ್ತರಿಸಿ ದುಷ್ಕೃತ್ಯ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಗಾಂಧಿನಗರ ಜಿಲ್ಲೆಯ ಛತ್ರಲ್ ಪಟ್ಟಣದಿಂದ ವರದಿಯಾಗಿದೆ. 

ದುಷ್ಕರ್ಮಿಗಳು ಮಹಿಳೆಯ 32 ವರ್ಷದ ಪುತ್ರನ ಮೇಲೂ ದಾಳಿ ನಡೆಸಿದ್ದು, ಆತನ ಕೈಗಳಿಗೆ ಮತ್ತು ಮೆದುಳಿಗೆ ಗಂಭೀರ ಗಾಯಗಳಾಗಿವೆ. ಹಲ್ಲೆಗೊಳಗಾಗಿರುವವರನ್ನು ರೋಶನ್ ಬೀವಿ ಸೈಯದ್ (52) ಹಾಗೂ ಫರ್ಝನ್ (32) ಎಂದು ಗುರುತಿಸಲಾಗಿದೆ.

ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಬಜರಂಗದಳ ಕಾರ್ಯಕರ್ತರು ಮುಸ್ಲಿಂ ಬಾಹುಳ್ಯದ ಕಸ್ಬವಾಸ್ ಎಂಬಲ್ಲಿ ಬಾಬರಿ ಮಸೀದಿ ಧ್ವಂಸದ ದಿನದಂದು ಮೆರವಣಿಗೆ ನಡೆಸಿದಂದಿನಿಂದ ಉದ್ವಿಗ್ನತೆ ತಲೆದೋರಿತ್ತು. ರವಿವಾರ ರಾತ್ರಿ ಆ ಪ್ರದೇಶದಲ್ಲಿ ಮತ್ತೆ ಘರ್ಷಣೆಯುಂಟಾಗಿತ್ತು. ಕಾರಣವೇನೆಂದು ತಿಳಿಯದೇ ಇದ್ದರೂ ಸೋಮವಾರ ಬೆಳಗ್ಗೆ ಸೈಯದ್ ಮತ್ತವರ ತಾಯಿಗೆ ಹೊರ ಹೋಗದಂತೆ ಕೆಲವರು ಸೂಚಿಸಿದ್ದರು. ಆದರೂ ಅವರು ತಮ್ಮ ದನಗಳನ್ನು ಮೇಯಿಸಲೆಂದು ಹೊರ ಹೋಗಿದ್ದಕ್ಕೆ ಕೆಲ ಬಜರಂಗದಳ ಕಾರ್ಯಕರ್ತರು ಅವರ ಮೇಲೆ ದಾಳಿ ನಡೆಸಿದ್ದರೆಂದು ಸಂತ್ರಸ್ತೆಯ ಸೋದರಳಿಯ ಅಸ್ಲಂ ಸೈಯದ್ ಹೇಳಿದ್ದಾನೆ.

ಸ್ಥಳೀಯ ಹಾಲು ಮಾರಾಟಗಾರ ಅವರಿಬ್ಬರನ್ನು ನೋಡಿ ಅವರ ಕುಟುಂಬಕ್ಕೆ ತಿಳಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಶನ್ ಬೀವಿಗೆ ವೈದ್ಯರು ಶಸ್ತ್ರಕ್ರಿಯೆ ನಡೆಸಿದ್ದಾರೆ. ಇಬ್ಬರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಘಟನೆಗೆ ಬಜರಂಗದಳ ಕಾರಣವೆಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಶರೀಫ್ ಮಲಿಕ್ ದೂರಿದ್ದಾರೆ. ಇದೊಂದು ಕೋಮುದ್ವೇಷದ ಕೃತ್ಯವೇ ಇಲ್ಲವೇ ದ್ವೇಷದಿಂದಾಗಿ ನಡೆಸಿದ ಕೃತ್ಯವೇ ಎಂದು ತನಿಖೆಯಿಂದ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News