×
Ad

ಲೋಯಾ ಪ್ರಕರಣ: ಸಣ್ಣ ಸಂಶಯವಿದ್ದರೂ ಸ್ವತಂತ್ರ ತನಿಖೆಗೆ ಆದೇಶ; ಸುಪ್ರೀಂ ಕೋರ್ಟ್

Update: 2018-03-06 20:40 IST

ಹೊಸದಿಲ್ಲಿ, ಮಾ.6: ಸಿಬಿಐ ನ್ಯಾಯಾಧೀಶ ಬ್ರಿಜ್‌ಗೋಪಾಲ್ ಹರಿಕಿಶನ್ ಲೋಯಾ ಅವರ ಸಾವಿನ ತನಿಖೆಯಲ್ಲಿ ಸಣ್ಣ ಸಂಶಯ ಬಂದರೂ ಕೂಡಲೇ ಈ ಪ್ರಕರಣವನ್ನು ಸ್ವತಂತ್ರ ತನಿಖೆಗೆ ಒಪ್ಪಿಸುವುದಾಗಿ ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ನ್ಯಾಯಾಲಯವು ಈ ಹಿಂದೆ ತಿಳಿಸಿತ್ತು. ಲೋಯಾ ಸಾವಿನ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯದ ನಿಗಾವಣೆಯಲ್ಲಿ ಸ್ವತಂತ್ರ ತನಿಖೆಗೆ ಒಪ್ಪಿಸಬೇಕು ಎಂದು ಮಾಡಲಾದ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಹಾಗೂ ನ್ಯಾಯಾಧೀಶ ಎ.ಎಂ ಖನ್ವಿಲ್ಕರ್ ಮತ್ತು ಡಿ.ವೈ ಚಂದ್ರಚೂಡ್ ಅವರ ಪೀಠವು ಈ ಹೇಳಿಕೆಯನ್ನು ನೀಡಿದೆ.

ಲೋಯಾ ಸಾವಿಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ವಿವರಣೆ ನೀಡಿರುವ ಮಹಾರಾಷ್ಟ್ರ ಸರಕಾರದ ಹೇಳಿಕೆಗಳಲ್ಲಿ ವ್ಯತ್ಯಾಸವಿದೆ ಎಂದು ಬಾಂಬೆ ವಕೀಲರ ಸಂಘದ ಪರ ವಾದಿಸುತ್ತಿರುವ ಹಿರಿಯ ವಕೀಲ ದುಷ್ಯಂತ್ ದಾವೆ ಆರೋಪಿಸಿದ್ದಾರೆ. ಲೋಯಾ ಪ್ರಕರಣವನ್ನು ಸ್ವತಂತ್ರ ತನಿಖೆಗೆ ಒಪ್ಪಿಸಬೇಕೆಂದು ಬಾಂಬೆ ವಕೀಲರ ಸಂಘ ಮನವಿ ಮಾಡಿದೆ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಖ್ಯ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆಯನ್ನು ಲೋಯಾ ನಡೆಸುತ್ತಿದ್ದರು. ಆದರೆ ಕೆಲವು ಆಂಗ್ಲ ಪತ್ರಿಕೆಗಳು ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಮಾಡಿದ್ದ ವರದಿಗಳಲ್ಲಿ ಕೆಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದವು. ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ಸಾಕ್ಷಿಗಳು ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದನ್ನು ಬೆಟ್ಟು ಮಾಡಿದ ದಾವೆ, ಓರ್ವ ವ್ಯಕ್ತಿಯ ಆಜ್ಞೆಯಂತೆ ಇಡೀ ನ್ಯಾಯಾಂಗವೇ ವರ್ತಿಸುತ್ತಿರುವುದನ್ನು ಈ ಹಿಂದೆ ನಾನು ಯಾವುದೇ ಪ್ರಕರಣದಲ್ಲಿ ಕಂಡಿಲ್ಲ ಎಂದು ಆರೋಪಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ನ್ಯಾಯಾಧೀಶ ಖನ್ವಿಲ್ಕರ್, ನೀವು ಈ ಮಾತನ್ನು ಇನ್ನೊಮ್ಮೆ ಈ ನ್ಯಾಯಾಲಯದಲ್ಲಿ ಹೇಳುವಂತಿಲ್ಲ. ಈ ರೀತಿ ಕೆಲಸ ನಡೆಯಲು ಸಾಧ್ಯವಿಲ್ಲ ಎಂದು ದಾವೆಯನ್ನು ಎಚ್ಚರಿಸಿದ್ದಾರೆ. ಲೋಯಾ ಸಾವಿನ ಸಮಯದಲ್ಲಿ ಸ್ಥಳದಲ್ಲಿದ್ದ ನಾಲ್ಕು ಜಿಲ್ಲಾ ನ್ಯಾಯಾಧೀಶರಿಗೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಮಾತನಾಡುವ ಧೈರ್ಯವಿರಲಿಲ್ಲ ಎಂದು ದಾವೆ ಆರೋಪಿಸಿದ್ದಾರೆ. ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾದ ಭೂಷಣ್ ಗವೈ ಮತ್ತು ಸುನೀಲ್ ಶುಕ್ರೆ ಮಾಧ್ಯಮಗಳಿಗೆ ಸಂದರ್ಶನ ನೀಡಿರುವುದನ್ನೂ ಅವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News