ರವಿಶಂಕರ್ ರನ್ನು ಬಂಧಿಸಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಬಹಿರಂಗ ಪತ್ರ

Update: 2018-03-06 15:25 GMT

ಮುಂಬೈ, ಮಾ. 6: ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮುಸ್ಲಿಮರ ಪರವಾಗಿ ತೀರ್ಪು ನೀಡಿದರೆ ಬಹುಸಂಖ್ಯಾತ ಹಿಂದೂಗಳು ರೊಚ್ಚಿಗೆದ್ದು ಭಾರತ ಇನ್ನೊಂದು ಸಿರಿಯಾ ಆಗಬಹುದು ಎಂದು ಹೇಳಿಕೆ ನೀಡಿರುವ ರವಿಶಂಕರ್ ಗುರೂಜಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮುಂಬೈಯ ಸಾಮಾಜಿಕ ಕಾರ್ಯಕರ್ತ, indjournals.in ಸಂಪಾದಕ ವಿನೋದ್ ಚಂದ್ , ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. 

"ವ್ಯಕ್ತಿಯೊಬ್ಬ ನಿಮ್ಮ ಅಧೀನದ ( ಸುಪ್ರೀಂ ) ಕೋರ್ಟ್ ನಲ್ಲಿರುವ ಪ್ರಕರಣದ ಬಗ್ಗೆ ಹೀಗೆ ಹೇಳಿಕೆ ನೀಡುವುದಾದರೆ ನಿಮ್ಮ ನ್ಯಾಯಾಲಯದ ಮತ್ತು ಒಟ್ಟು ದೇಶದ ಕಾನೂನು ವ್ಯವಸ್ಥೆಯ ಪಾವಿತ್ರ್ಯತೆಯ ಗತಿ ಏನು?, ಭಾರತದ ಸಂವಿಧಾನ ನೀಡಿರುವ ಅಧಿಕಾರದಿಂದ ಸರ್ವೋಚ್ಚ ನ್ಯಾಯಾಲಯ ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ವ್ಯಕ್ತಿಯೊಬ್ಬ ಹೀಗೆ ಹೇಳಿಕೆ ನೀಡಿದರೆ ಸುಪ್ರೀಂ ಕೋರ್ಟ್ ಮತ್ತು ದೇಶದ ಕಾನೂನು ಸುವ್ಯವಸ್ಥೆಯ ಗಾಂಭೀರ್ಯ ಮತ್ತು ಅಧಿಕಾರ ಉಳಿಯುವುದು ಹೇಗೆ?, ಇಂತಹ ಬೇಜವಾಬ್ದಾರಿಯುತ ಹೇಳಿಕೆ ನೀಡಲು ಬಿಡುವ ರಾಜ್ಯ ಹಾಗು ಕೇಂದ್ರ ಸರಕಾರಗಳ ಮಾನ್ಯತೆ ಉಳಿಯುವುದು ಹೇಗೆ?, ಅವುಗಳು ತಾವು ಯಾವ ಸಂವಿಧಾನದ ಆಧಾರದಲ್ಲಿ ಆಯ್ಕೆಯಾಗಿ ಬಂದಿದ್ದೇವೆಯೋ ಆ ಸಂವಿಧಾನವನ್ನೇ ಉಲ್ಲಂಘಿಸಲು ಅವಕಾಶ ನೀಡುವುದು ಹೇಗೆ?" ಎಂದು ವಿನೋದ್ ಮುಖ್ಯ ನ್ಯಾಯಾಧೀಶರನ್ನು ಪ್ರಶ್ನಿಸಿದ್ದಾರೆ. 

"ಇಂತಹ ಪ್ರಚೋದನಕಾರಿ ಹೇಳಿಕೆ ನೀಡುವ ವ್ಯಕ್ತಿಯನ್ನು ಬಳಸಿಕೊಂಡು ಸರ್ಕಾರವೇ ಜನರಿಗೆ ಹೀಗೆ ಸಂದೇಶ ರವಾನಿಸುತ್ತಿದೆಯೇ?, ಕೋರ್ಟ್ ಯಾವ ಆದೇಶ ನೀಡಿದರೂ ಬಹುಸಂಖ್ಯಾತರಿಗೆ ಅದು ಒಪ್ಪಿಗೆಯಾಗದಿದ್ದರೆ ದೇಶದಲ್ಲಿ ಹಿಂಸಾಚಾರ ನಡೆಯಲಿದೆ ಎಂದು ಸರಕಾರವೇ ಬೆದರಿಸುತ್ತಿದೆಯೇ?, ಈ ಷಡ್ಯಂತ್ರದಲ್ಲಿ ತಾವೂ ಭಾಗಿಯಾಗಿದ್ದೀರಾ?" ಎಂದು ವಿನೋದ್  ಕಟುವಾಗಿ ಪ್ರಶ್ನಿಸಿದ್ದಾರೆ. 

"ನನ್ನ ಈ ಪತ್ರದ ಆಧಾರದಲ್ಲಿ ಸ್ವಯಂಪ್ರೇರಿತ ಕೇಸು ದಾಖಲಿಸಿ, ಕೋಮು ಪ್ರಚೋದಕ ವಾತಾವರಣ ಸೃಷ್ಟಿಸುವ ಹಾಗು ದೇಶದ ಸರ್ವೋಚ್ಛ ನ್ಯಾಯಾಲಯ ಹಾಗು ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಗ್ಗೆ ಜನರಲ್ಲಿ ಸಂಶಯ ಮೂಡಿಸುವ ಆರೋಪದಲ್ಲಿ ತನ್ನನ್ನು ತಾನು ಶ್ರೀ ಶ್ರೀ ಎಂದು ಕರೆದುಕೊಳ್ಳುವ ರವಿಶಂಕರ್ ರನ್ನು ತಕ್ಷಣ ಬಂಧಿಸಬೇಕು" ಎಂದು ವಿನೋದ್ ಚಂದ್ ಆಗ್ರಹಿಸಿದ್ದಾರೆ. 

"ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿರುವ ಈ ತೀವ್ರ ಆಕ್ಷೇಪಕಾರಿ ಹೇಳಿಕೆಯ ಬಳಿಕವೂ ಯಾವುದೇ ಕ್ರಮ ತೆಗೆದುಕೊಳ್ಳದೆ ಹೋದರೆ ಮುಂದೆ ನಡೆಯುವ ಎಲ್ಲ ಹಿಂಸಾಚಾರಗಳಿಗೆ ಹಾಗು ನಿರಪರಾಧಿಗಳ ಮೇಲಿನ ದಾಳಿಗೆ ದೇಶದ ಕಾನೂನು ವ್ಯವಸ್ಥೆ ಹಾಗು ಸರ್ವೋಚ್ಛ ನ್ಯಾಯಾಲಯವೇ ಹೊಣೆಯಾಗುತ್ತದೆ" ಎಂದು ವಿನೋದ್ ಹೇಳಿದ್ದಾರೆ. 

ಈ ಕುರಿತ ಅವರ ಫೇಸ್ ಬುಕ್ ಪೋಸ್ಟ್ ಇಲ್ಲಿದೆ: 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News