ಪೂರ್ವ ಘೌಟ ಪ್ರವೇಶಿಸಿದ ಪರಿಹಾರ ಸಾಮಗ್ರಿಗಳ ಟ್ರಕ್
ಬೈರೂತ್ (ಲೆಬನಾನ್), ಮಾ. 6: ಮಾನವೀಯ ನೆರವು ಸಾಮಗ್ರಿಗಳನ್ನು ಹೊತ್ತ 46 ಟ್ರಕ್‌ಗಳು ಸರಕಾರಿ ನಿಯಂತ್ರಣದ ತಪಾಸಣಾ ಠಾಣೆ ಮೂಲಕ ಒಂದು ತಿಂಗಳಲ್ಲಿ ಮೊದಲ ಬಾರಿಗೆ ಸೋಮವಾರ ಸಿರಿಯದ ಯುದ್ಧಪೀಡಿತ ಪಟ್ಟಣ ಪೂರ್ವ ಘೌಟವನ್ನು ಪ್ರವೇಶಿಸಿದವು. ಆದರೆ, ಮಹತ್ವದ ವೈದ್ಯಕೀಯ ಸಾಮಗ್ರಿಗಳನ್ನು ಸಿರಿಯ ಸೇನೆ ಮುಟ್ಟುಗೋಲು ಹಾಕಿಕೊಂಡಿದೆ.
ಸಾವಿರಾರು ಮಂದಿ ಹತಾಶೆಯಿಂದ ಎದುರು ನೋಡುತ್ತಿರುವ ನೆರವನ್ನು ಹೊತ್ತ ಟ್ರಕ್‌ಗಳು ಪೂರ್ವ ಘೌಟಕ್ಕೆ ತೆರಳುತ್ತಿವೆ ಎಂಬುದಾಗಿ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ ಮಧ್ಯಪ್ರಾಚ್ಯ ಕಾರ್ಯಾಚರಣೆಗಳ ಮುಖ್ಯಸ್ಥ ರಾಬರ್ಟ್ ಮಾರ್ಡಿನಿ ಸೋಮವಾರ ಟ್ವೀಟ್ ಮಾಡಿದ್ದಾರೆ.
ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಪರಿಕರಗಳು ಮತ್ತು ಔಷಧಿಗಳು ಹಾಗೂ 27,500 ಜನರಿಗೆ ಸಾಲುವ 5,500 ಆಹಾರ ಮತ್ತು ಹಿಟ್ಟು ಚೀಲಗಳನ್ನು ಟ್ರಕ್‌ಗಳು ಹೊತ್ತೊಯ್ದಿವೆ.
ಟ್ರಕ್‌ಗಳಲ್ಲಿರುವ 70 ಶೇಕಡ ವೈದ್ಯಕೀಯ ಪರಿಕರಗಳನ್ನು ವಶಪಡಿಸಿಕೊಳ್ಳುವಂತೆ ಸಿರಿಯ ಸರಕಾರ ಆದೇಶ ಹೊರಡಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು. ಹಾಗಾಗಿ, ಆಘಾತ ಚಿಕಿತ್ಸಾ ಕಿಟ್‌ಗಳು, ಶಸ್ತ್ರಚಿಕಿತ್ಸೆ ಕಿಟ್‌ಗಳು, ಇನ್ಸುಲಿನ್ ಮತ್ತು ಇತರ ಮಹತ್ವದ ಸಾಮಗ್ರಿಗಳು ಪೂರ್ವ ಘೌಟವನ್ನು ತಲುಪಿಲ್ಲ.
ಫೆಬ್ರವರಿ 18ರಿಂದ ಪೂರ್ವ ಘೌಟದಲ್ಲಿ ಸರಕಾರಿ ಪಡೆಗಳು ನಡೆಸುತ್ತಿರುವ ವಾಯು ದಾಳಿಗಳಲ್ಲಿ ಈವರೆಗೆ 700ಕ್ಕೂ ಅಧಿಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ 100ಕ್ಕೂ ಅಧಿಕ ಮಂದಿ ಮಕ್ಕಳು.