×
Ad

ಆಧಾರ್ ಸಂಪರ್ಕ: ಮಾರ್ಚ್ 31ರ ಗಡು ವಿಸ್ತರಿಸಬಹುದು; ಸರಕಾರದ ಹೇಳಿಕೆ

Update: 2018-03-06 23:11 IST

ಹೊಸದಿಲ್ಲಿ, ಮಾ.6: ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್ ಹಾಗೂ ಇತರ ಸೇವೆಗಳಿಗೆ ಆಧಾರ್ ಸಂಖ್ಯೆಯನ್ನು ಸಂಪರ್ಕಿಸಲು ನಿಗದಿಯಾಗಿರುವ ಮಾರ್ಚ್ 31ರ ಗಡುವನ್ನು ವಿಸ್ತರಿಸಬಹುದು ಎಂದು ಸುಪ್ರೀಂಕೋರ್ಟ್‌ಗೆ ಸರಕಾರ ತಿಳಿಸಿದೆ.

 ಈ ಹಿಂದೆಯೂ ಗಡುವನ್ನು ವಿಸ್ತರಿಸಿದ್ದೆವು. ಈಗಲೂ ಹೀಗೆ ಮಾಡಬಹುದು. ಅಗತ್ಯವಿದ್ದರೆ ನಾವದನ್ನು ಮತ್ತೆ ವಿಸ್ತರಿಸುತ್ತೇವೆ ಎಂದು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ನೇತೃತ್ವದ ಸಾಂವಿಧಾನಿಕ ಪೀಠದೆದುರು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹೇಳಿಕೆ ನೀಡಿದರು. ಆಧಾರ್ ನಿಯಮದ ಕುರಿತು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಈ ಪೀಠ ನಿರ್ವಹಿಸುತ್ತಿದೆ.

 ಬ್ಯಾಂಕ್ ಖಾತೆ ಹಾಗೂ ಇತರ ಸೇವೆಗಳಿಗೆ ಆಧಾರ್ ಸಂಖ್ಯೆಯನ್ನು ಸಂಪರ್ಕಿಸಲು ಸರಕಾರ ನೀಡಿರುವ ಗಡುವಾದ ಮಾರ್ಚ್ 31 ಸಮೀಪಿಸುತ್ತಿರುವ ಕಾರಣ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಅರ್ಜಿದಾರರ ಪರ ವಕೀಲರು ಒತ್ತಾಯಿಸಿದರು. ಆಗ ಪ್ರತಿಕ್ರಿಯೆ ನೀಡಿದ ಅಟಾರ್ನಿ ಜನರಲ್, ಈ ಹಿಂದೆಯೂ ಗಡುವನ್ನು ವಿಸ್ತರಿಸಲಾಗಿದೆ. ಈಗಲೂ ವಿಸ್ತರಿಸಬಹುದು . ಆದರೆ ಈ ಕ್ಷಣವಲ್ಲ, ಅಂತಿಮ ಹಂತದವರೆಗೆ ಕಾದು ಬಳಿಕ ಅಗತ್ಯಬಿದ್ದರೆ ವಿಸ್ತರಿಸುತ್ತೇವೆ ಎಂದುತ್ತರಿಸಿದರು.

ಅರ್ಜಿದಾರರ ಪರ ಇದುವರೆಗೆ ಮೂವರು ವಕೀಲರು ತಮ್ಮ ವಾದ ಮಂಡಿಸಿದ್ದಾರೆ. ಇನ್ನೂ ಐವರು ವಕೀಲರು ವಾದ ಮಂಡಿಸಬೇಕಿದೆ. ಆ ಬಳಿಕ ಕೇಂದ್ರ ಸರಕಾರ, ಯುಐಡಿಎಐ(ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ), ಮಹಾರಾಷ್ಟ್ರ ಮತ್ತು ಗುಜರಾತ್ ಸರಕಾರ ಪ್ರತಿಕ್ರಿಯೆ ನೀಡಬೇಕಿದೆ. ಈ ಎಲ್ಲಾ ಪ್ರಕ್ರಿಯೆಗಳು ಮಾರ್ಚ್ 31ರ ಒಳಗೆ ಮುಗಿಯುವುದು ಕಷ್ಟಸಾಧ್ಯ. ಅಲ್ಲದೆ ನ್ಯಾಯಾಧೀಶರು ತೀರ್ಪು ಪ್ರಕಟಿಸಲೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ವಕೀಲ ಪಿ.ಚಿದಂಬರಂ ಆಧಾರ್ ಕಾನೂನಿನ ವಿರುದ್ಧ ವಾದ ಮಂಡಿಸುವ ನಿರೀಕ್ಷೆಯಿದ್ದು ಬುಧವಾರ (ಮಾ.7ರಂದು) ವಾದ ಆರಂಭಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News