ದಕ್ಷಿಣ ಕೊರಿಯಾ ವಿರುದ್ಧ ಭಾರತಕ್ಕೆ ಸತತ ಜಯ

Update: 2018-03-06 18:09 GMT

ಇಂಚೋನ್(ದ.ಕೊರಿಯಾ), ಮಾ.6: ಭಾರತದ ಮಹಿಳಾ ಹಾಕಿ ತಂಡ ದಕ್ಷಿಣ ಕೊರಿಯಾ ಪ್ರವಾಸದಲ್ಲಿ ಸತತ ಎರಡನೇ ಜಯ ದಾಖಲಿಸಿದೆ.

 ಭಾರತ ಮಂಗಳವಾರ ಜಿನ್‌ಚುನ್ ನ್ಯಾಶನಲ್ ಅಥ್ಲೆಟಿಕ್ ಸೆಂಟರ್‌ನಲ್ಲಿ ನಡೆದ ದಕ್ಷಿಣ ಕೊರಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ 3-2 ಗೋಲುಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ.

ಭಾರತದ ಪರ ಪೂನಂ ರಾಣಿ(6ನೇ ನಿಮಿಷ), ನಾಯಕಿ ರಾಣಿ(27ನೇ ನಿಮಿಷ)ಹಾಗೂ ಗುರ್ಜಿತ್ ಕೌರ್(32ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದರು. ದ.ಕೊರಿಯಾದ ಪರ ಯುರಿಮ್ ಲೀ(10ನೇ ನಿಮಿಷ) ಹಾಗೂ ಜುಂಗ್‌ಯೆಯುನ್ ಸಿಯೊ(31ನೇ ನಿಮಿಷ)ತಲಾ ಒಂದು ಗೋಲು ಬಾರಿಸಿದ್ದಾರೆ.

 ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದ ಭಾರತದ ಮಹಿಳಾ ತಂಡ ಮೊದಲ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಆರಂಭ ಪಡೆದಿತ್ತು. ಪೂನಂ ರಾಣಿ ಆರನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

ದಕ್ಷಿಣ ಕೊರಿಯಾ ಮೊದಲ ಕ್ವಾರ್ಟರ್‌ನಲ್ಲಿ ಎರಡು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದರೂ ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. 10ನೇ ನಿಮಿಷದಲ್ಲಿ ಲೀ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು.

2ನೇ ಕ್ವಾರ್ಟರ್‌ನಲ್ಲಿ ಸತತ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ದಕ್ಷಿಣ ಕೊರಿಯಾ ತಂಡ ಭಾರತಕ್ಕೆ ಒತ್ತಡ ಹೇರಿತು. ಆದರೆ ಪ್ರವಾಸಿ ತಂಡ ಒತ್ತಡವನ್ನು ಚೆನ್ನಾಗಿ ನಿಭಾಯಿಸಿತು. ಯುವ ಗೋಲ್‌ಕೀಪರ್ ಸ್ವಾತಿ ಆತಿಥೇಯರಿಗೆ ಗೋಲು ಬಾರಿಸದಂತೆ ತಡೆಯಾದರು.

27ನೇ ನಿಮಿಷದಲ್ಲಿ ಗೋಲು ಬಾರಿಸಿದ ನಾಯಕಿ ರಾಣಿ ಭಾರತಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. ಮೊದಲಾರ್ಧದ ಅಂತ್ಯಕ್ಕೆ ಭಾರತ ಒಂದು ಗೋಲಿನ ಮುನ್ನಡೆಯಲ್ಲಿತ್ತು.

 ಮೂರನೇ ಕ್ವಾರ್ಟರ್‌ನ ಆರಂಭದಲ್ಲಿ ಭಾರತ ಗೋಲು ಬಿಟ್ಟುಕೊಟ್ಟಿತು. 31ನೇ ನಿಮಿಷದಲ್ಲಿ ದಕ್ಷಿಣ ಕೊರಿಯಾದ ಸಿಯೋ ಅವರು ಫೀಲ್ಡ್ ಗೋಲು ದಾಖಲಿಸಿ ಸ್ಕೋರನ್ನು 2-2 ರಿಂದ ಸಮಬಲಗೊಳಿಸಿದರು.

ಭಾರತದ ಫಾರ್ವರ್ಡ್‌ಗಳು ಉತ್ತಮವಾದ ಪಾಸ್ ನೆರವಿನಿಂದ 32ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದರು. ಗುರ್ಜಿತ್ ಕೌರ್ ಇದನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 3-2 ಮುನ್ನಡೆ ಒದಗಿಸಿಕೊಟ್ಟರು. ಆತಿಥೇಯ ತಂಡ 34ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಗೋಲ್‌ಕೀಪರ್ ಸ್ವಾತಿ ಎದುರಾಳಿ ತಂಡಕ್ಕೆ ಗೋಲು ನಿರಾಕರಿಸಿದರು.

ಕೊನೆಯ ಅವಧಿಯ ಪಂದ್ಯದಲ್ಲಿ ದಕ್ಷಿಣ ಕೊರಿಯ ಸಮಬಲದ ಗೋಲು ದಾಖಲಿಸಿ ತೀವ್ರ ಪ್ರಯತ್ನ ನಡೆಸಿತು. ಪ್ರವಾಸಿ ಭಾರತ ಕೊನೆಯ ತನಕ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾಯಿತು. ಅಂತಿಮ ಕೆಲವು ನಿಮಿಷ ಆತಿಥೇಯರು 11 ಔಟ್ ಫೀಲ್ಡ್ ಆಟಗಾರ್ತಿಯರೊಂದಿಗೆ ಆಡಿದರು. ಆದರೆ, ಭಾರತ ಸತತ ಎರಡನೇ ಜಯ ಸಾಧಿಸಲು ಯಶಸ್ವಿಯಾಯಿತು. ಈ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News