ಟಾಪ್ ಯೋಜನೆಯಿಂದ ಕೈಬಿಟ್ಟ ಕೇಂದ್ರ ವಿರುದ್ಧ ಸೀಮಾ ಕಿಡಿ
ಪಟಿಯಾಲ, ಮಾ.6: ಫೆಡರೇಶನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಡಿಸ್ಕಸ್ ಎಸೆತದಲ್ಲಿ ಚಿನ್ನ ಜಯಿಸಿರುವ ಸೀಮಾ ಪೂನಿಯಾ ಗೋಲ್ಡ್‌ಕೋಸ್ಟ್ ಕಾಮನ್ ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಚಿನ್ನ ಜಯಿಸಿದ ಬೆನ್ನಿಗೇ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ(ಟಾಪ್)ಯೋಜನೆಗೆ ತನ್ನ ಹೆಸರನ್ನು ಪರಿಗಣಿಸದ ಕೇಂದ್ರ ಕ್ರೀಡಾ ಸಚಿವಾಲಯದ ವಿರುದ್ಧ ಕಿಡಿಕಾರಿದ್ದಾರೆ.
ಟಾಪ್ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರಕಾರ ಪ್ರಮುಖ ಕ್ರೀಡಾ ಟೂರ್ನಿಗಳಿಗೆ ತಯಾರಿ ನಡೆಸಲು ಪ್ರತಿ ತಿಂಗಳು 50,000 ರೂ.ಆರ್ಥಿಕ ನೆರವು ನೀಡುತ್ತದೆ. 2001ರಲ್ಲಿ ಸ್ಯಾಂಟಿಯಾಗೊ ಡಿ’ ಚಿಲಿಯಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ವೇಳೆ ಡೋಪಿಂಗ್ ಪರೀಕ್ಷೆಯಲ್ಲಿ ಸೀಮಾ ಅನುತ್ತೀರ್ಣರಾಗಿರುವ ಕಾರಣ ಕ್ರೀಡಾಧಿಕಾರಿಗಳು ಸೀಮಾರನ್ನು ಟಾಪ್ ಯೋಜನೆಯಿಂದ ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಡೋಪಿಂಗ್ ಪ್ರಕರಣದಲ್ಲಿ ಸೀಮಾಗೆ ಎಚ್ಚರಿಕೆ ನೀಡಲಾಗಿತ್ತೇ ಹೊರತು ಅಮಾನತುಗೊಳಿಸಲಾಗಿಲ್ಲ.
ಸೋಮವಾರ ಚಿನ್ನ ಜಯಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಸೀಮಾ ಕ್ರೀಡಾ ಸಚಿವಾಲಯ, ಭಾರತದ ಅಥ್ಲೆಟಿಕ್ಸ್ ಒಕ್ಕೂಟ (ಎಎಫ್‌ಐ) ವಿರುದ್ಧ ಹರಿಹಾಯ್ದಿದ್ದಾರೆ.
ನಾನು ಯಾವ ವರ್ಷ ಡೋಪಿಂಗ್ ಪ್ರಕರಣದಲ್ಲಿ ಸಿಲುಕಿ ನಿಷೇಧಕ್ಕೆ ಗುರಿಯಾಗಿದ್ದೇನೆಂದು ತಿಳಿಸಿ ಎಂದು ಕ್ರೀಡಾ ಸಚಿವಾಲಯ ಹಾಗೂ ಫೆಡರೇಶನ್‌ಗೆ ಸೀಮಾ ಸವಾಲು ಎಸೆದಿದ್ದಾರೆ. ‘‘ಡೋಪಿಂಗ್ ಪ್ರಕರಣವನ್ನು ಮುಂದಿಟ್ಟುಕೊಂಡು ತನಗೆ ಯಾವಾಗಲೂ ಆರ್ಥಿಕ ನೆರವು ಹಾಗೂ ಸರಕಾರಿ ಪ್ರಶಸ್ತಿಯನ್ನು ನಿರಾಕರಿಸಲಾಗುತ್ತಿದೆ. ಅರ್ಜುನ ಪ್ರಶಸ್ತಿಗಾಗಿ ತಾನು ಹಲವು ಬಾರಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಲಾಗಿದೆ. ತಾನು ಯಾವಾಗ ನಿಷೇಧಕ್ಕೆ ಒಳಗಾಗಿದ್ದೇನೆಂದು ಫೆಡರೇಶನ್ ತನಗೆ ತಿಳಿಸಬೇಕು. ಇದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಈ ವಿಷಯದ ಬಗ್ಗೆ ತಾನು ಈಗಾಗಲೇ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದೇನೆ’’ ಎಂದರು.
‘‘2017ರಲ್ಲಿ ಮಂಡಿನೋವಿನಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಎಎಫ್‌ಐ ನನ್ನ ಹೆಸರನ್ನು ಟಾಪ್ ಯೋಜನೆಗೆ ಶಿಫಾರಸು ಮಾಡಿಲ್ಲ. ಅಥ್ಲೀಟ್‌ಗಳು ಪ್ರತಿ ತಿಂಗಳು ಪಡೆಯುವ ಭತ್ತೆಯ ಪಟ್ಟಿಗೆ ಸಚಿವಾಲಯ ನನ್ನ ಹೆಸರು ಸೇರಿಸಿಲ್ಲ. ನಾನು ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ಜಯಿಸಿರುವ ಪದಕಕ್ಕೆ ಬೆಲೆ ಇಲ್ಲವೇ?’’ ಎಂದು ಪೂನಿಯಾ ಪ್ರಶ್ನಿಸಿದ್ದಾರೆ.