×
Ad

ಕೊಹ್ಲಿ, ಪೂಜಾರ ಸ್ಥಾನ ಭದ್ರ

Update: 2018-03-06 23:51 IST

ದುಬೈ, ಮಾ.6: ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಹಾಗೂ ಹಿರಿಯ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಕ್ರಮವಾಗಿ ಎರಡನೇ ಹಾಗೂ ಆರನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಆರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಜೀವನಶ್ರೇಷ್ಠ ಐದನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಸ್ಟಾರ್ಕ್ ಡರ್ಬನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 109 ರನ್‌ಗೆ ಒಟ್ಟು 9 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಈ ಪಂದ್ಯವನ್ನು ಆಸ್ಟ್ರೇಲಿಯ 118 ರನ್‌ಗಳಿಂದ ಗೆದ್ದುಕೊಂಡಿತ್ತು.

 ಮಾರ್ಷ್ ಸಹೋದರರಾದ ಶಾನ್ ಹಾಗೂ ಮಿಚೆಲ್ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ. ಶಾನ್ ಜೀವನಶ್ರೇಷ್ಠ 16ನೇ ಸ್ಥಾನ ಪಡೆದರೆ, ಮಿಚೆಲ್ 43ನೇ ಸ್ಥಾನದಿಂದ 56ನೇ ರ್ಯಾಂಕಿಗೆ ಭಡ್ತಿ ಪಡೆದಿದ್ದಾರೆ. ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಭಡ್ತಿ ಪಡೆದು 58ನೇ ಸ್ಥಾನ ತಲುಪಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ 32 ಹಾಗೂ 143ರನ್ ಗಳಿಸಿದ್ದ ದಕ್ಷಿಣ ಆಫ್ರಿಕದ ಅಗ್ರ ಕ್ರಮಾಂಕದ ದಾಂಡಿಗ ಏಡೆನ್ ಮರ್ಕರಮ್ 28 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 19ನೇ ಸ್ಥಾನಕ್ಕೇರಿದ್ದಾರೆ.

ಡರ್ಬನ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಔಟಾಗದೆ 71 ರನ್ ಗಳಿಸಿರುವ ಎಬಿ ಡಿವಿಲಿಯರ್ಸ್ ಒಂದು ಸ್ಥಾನ ಮೇಲಕ್ಕೇರಿ 12ನೇ ಸ್ಥಾನದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ 20 ಹಾಗೂ 83 ರನ್ ಗಳಿಸಿದ್ದ ಕ್ವಿಂಟನ್ ಡಿಕಾಕ್ 22ನೇ ರ್ಯಾಂಕಿಗೆ ತಲುಪಿದ್ದಾರೆ.

 ಮೊದಲ ಪಂದ್ಯದಲ್ಲಿ 9 ವಿಕೆಟ್‌ಗಳ ಗೊಂಚಲು ಪಡೆದಿದ್ದ ದ.ಆಫ್ರಿಕದ ಸ್ಪಿನ್ನರ್ ಕೇಶವ್ ಮಹಾರಾಜ್ 18ನೇ ರ್ಯಾಂಕಿಗೆ ಏರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News