ಪುಣೆ ಪಿಚ್ ಕ್ಯುರೇಟರ್ ಆರು ತಿಂಗಳು ಅಮಾನತು

Update: 2018-03-06 18:22 GMT

ಪುಣೆ,ಮಾ.6: ಐಸಿಸಿ ಭ್ರಷ್ಟಾಚಾರ ನಿಗ್ರಹ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಪುಣೆ ಪಿಚ್ ಕ್ಯುರೇಟರ್ ಪಾಂಡುರಂಗ ಸಲ್ಗಾಂವ್ಕರ್‌ಗೆ ಐಸಿಸಿ ಆರು ತಿಂಗಳ ಕಾಲ ಅಮಾನತುಗೊಳಿಸಿದೆ.

ಸಲ್ಗಾಂವ್ಕರ್ ವಿರುದ್ಧ ಅಪರಿಚಿತ ವ್ಯಕ್ತಿಯೊಬ್ಬನಿಗೆ ಪಿಚ್ ರಹಸ್ಯ ಬಿಚ್ಚಿಟ್ಟ ಆರೋಪ ಕೇಳಿ ಬಂದ ತಕ್ಷಣ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ(ಎಂಸಿಎ) ಸಲ್ಗಾಂವ್ಕರ್‌ರನ್ನು ಕ್ಯುರೇಟರ್ ಹುದ್ದೆಯಿಂದ ಅಮಾನತುಗೊಳಿಸಿತ್ತು.

ಅಕ್ಟೋಬರ್ 25 ರಂದು ಭಾರತ ಹಾಗೂ ನ್ಯೂಝಿಲೆಂಡ್ ನಡುವೆ ಎರಡನೇ ಏಕದಿನ ಪಂದ್ಯಕ್ಕಿಂತ ಮೊದಲು ‘ಇಂಡಿಯಾ ಟುಡೆ ಟಿವಿ’ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಲ್ಗಾಂವ್ಕರ್ ಅವರು ಪಿಚ್ ರಹಸ್ಯವನ್ನು ಬಿಟ್ಟುಕೊಟ್ಟಿದ್ದರು. ಮಂದ ಗತಿಯ ಪಿಚ್‌ನಲ್ಲಿ 337 ರನ್ ಗಳಿಸಬಹುದು ಎಂದು ಹೇಳಿದ್ದರು. ಆದರೆ, ಆ ಪಂದ್ಯದಲ್ಲಿ ನ್ಯೂಝಿಲೆಂಡ್ 230 ರನ್ ಗಳಿಸಿದ್ದು ಇನ್ನೂ 4 ಓವರ್ ಬಾಕಿ ಇರುವಾಗಲೇ ಭಾರತ ಜಯ ಸಾಧಿಸಿತ್ತು.

 ‘‘ಸಲ್ಗಾಂವ್ಕರ್ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂಬ ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ. ‘ಇಂಡಿಯಾ ಟುಡೇ’ ಮಾಡಿರುವ ಆರೋಪ ಹಾಗೂ ಹಂಚಿಕೊಂಡಿರುವ ಮಾಹಿತಿಯ ಆಧಾರದಲ್ಲಿ ನಾವು ಸಮಗ್ರ ತನಿಖೆ ನಡೆಸಿದ್ದೇವೆ. ಮಾಧ್ಯಮ ಆರೋಪಿಸಿರುವಂತೆ ಅವರ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ’’ಎಂದು ಐಸಿಸಿ ಪ್ರಧಾನ ಪ್ರಬಂಧಕ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ. ಸಲ್ಗಾಂವ್ಕರ್‌ತಪ್ಪೊಪ್ಪಿಕೊಂಡಿದ್ದಾರೆ. ಐಸಿಸಿ ಭ್ರಷ್ಟಾಚಾರ ನಿಗ್ರಹ ನೀತಿ ಸಂಹಿತೆ 2.4.4ನ್ನು ಉಲ್ಲಂಘಿಸಿರುವ ಕಾರಣ 6 ತಿಂಗಳು ಅಮಾನತುಗೊಳಿಸಲಾಗಿದೆ. ಅವರ ಅಮಾನತು ಅವಧಿ 2017ರ ಅ.25 ರಿಂದ ಅನ್ವಯವಾಗಲಿದ್ದು, ಎಪ್ರಿಲ್ 24,2018ರಲ್ಲಿ ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News