ಕಡಬ: ರಾತ್ರಿ ಮಲಗಿದ್ದವರ ಮೇಲೆ ಕಾಡಾನೆ ದಾಳಿ; ಓರ್ವ ಮೃತ್ಯು

Update: 2018-03-07 05:30 GMT
ಸಾಂದರ್ಭಿಕ ಚಿತ್ರ

ಕಡಬ, ಮಾ.7: ಕಾರ್ಮಿಕರ ಶೆಡ್ ಹೊರಗಡೆ ನಿದ್ರಿಸಿದ್ದ ಮೂವರು ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಂಬಾರು ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. 

ಮೃತನನ್ನು ರೈಲ್ವೇ ಕಾರ್ಮಿಕ ಮಧುರೈ ನಿವಾಸಿ ರಂಜಿತ್ (52) ಹಾಗೂ ಗಾಯಾಳುವನ್ನು ಲಕ್ಷ್ಮಣ್ ಎಂದು ಗುರುತಿಸಲಾಗಿದೆ. ಇವರು ಕೊಂಬಾರು ಗ್ರಾಮದ ಆನೇಕಲ್ ರೈಲ್ವೆ ಸೇತುವೆಯ ಬಳಿ ಸೇತುವೆ ಕಾಮಗಾರಿಗೆಂದು ಆಗಮಿಸಿದ ಕಾರ್ಮಿಕರಾಗಿದ್ದಾರೆ. ಷಣ್ಮುಗಂ ಎಂಬವರು ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.

ವಿಪರೀತ ಸೆಖೆ ಇರುವ ಕಾರಣ ರಂಜಿತ್, ಲಕ್ಷ್ಮಣ್ ಹಾಗೂ ಷಣ್ಮುಗಂ ಮಂಗಳವಾರ ರಾತ್ರಿ ಶೆಡ್ ನಿಂದ ಹೊರಬಂದು ಮಲಗಿದ್ದರೆನ್ನಲಾಗಿದೆ. ನಿದ್ದೆಯಲ್ಲಿದ್ದ ಇವರಿಬ್ಬರ  ತಡರಾತ್ರಿ ಕಾಡಾನೆ ದಾಳಿ ನಡೆಸಿದೆ. ಈ ವೇಳೆ ಆನೆಯು ರಂಜಿತ್ ನನ್ನು ತಿವಿದು ಓರ್ವನನ್ನು ಕೊಂದು ಹಾಕಿದೆಯೆನ್ನಲಾಗಿದೆ. ಲಕ್ಷ್ಮಣ್ ನನ್ನು ಗಾಯಗೊಳಿಸಿದೆ. ಅಪಾಯವನ್ನರಿತ ಷಣ್ಮುಗಂ ಓಡಿ ಪಾರಾಗಿದ್ದಾರೆ.

ಗಾಯಾಳುವನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News