ಎಂಆರ್‌ಪಿಎಲ್‌ಗೆ ಬೀಗ ಜಡಿಯಲು ಆಗ್ರಹ: ಜೋಕಟ್ಟೆ ಗ್ರಾಮಸ್ಥರಿಂದ ಪೊರಕೆ ಹಿಡಿದು ಧರಣಿ

Update: 2018-03-07 08:27 GMT

ಮಂಗಳೂರು, ಮಾ.7: ಸರಕಾರಿ ಆದೇಶವನ್ನು ಉಲ್ಲಂಘಿಸುತ್ತಿರುವ ಎಂಆರ್‌ಪಿಎಲ್ ಕಂಪೆನಿಗೆ ಬೀಗ ಜಡಿಯಲು ಆಗ್ರಹಿಸಿ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಜೋಕಟ್ಟೆಯ ಗ್ರಾಮಸ್ಥರು ಬುಧವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಪೊರಕೆ ಹಿಡಿದು ಧರಣಿ ನಡೆಸಿದರು.

ಎಂಆರ್‌ಪಿಎಲ್ ಕಂಪೆನಿಯ ಸರ್ವಾಧಿಕಾರಿ ಧೋರಣೆಯಿಂದ ಸುತ್ತಲ ಗ್ರಾಮಗಳ ಪರಿಸರ ಅಪಾರವಾದ ಹಾನಿಗೊಳಗಾಗಿದೆ. ಮುಖ್ಯವಾಗಿ ಕಂಪೆನಿಯ ಮೂರನೇ ಹಂತದ ಕೋಕ್- ಸಲ್ಫರ್ ಘಟಕದ ನಿಯಮಬಾಹಿರ ನಿರ್ಮಾಣದಿಂದ ಜೋಕಟ್ಟೆ, ಕಳವಾರು ಪ್ರದೇಶಗಳಲ್ಲಿ ಗ್ರಾಮಸ್ಥರ ಬದುಕು ನರಕಸದೃಶವಾಗಿದೆ. ಕೋಕ್ ಹಾರುಬೂದಿ ಹಾಗೂ ಗಾಳಿ, ನೀರು ಮಾಲಿನ್ಯದಿಂದ ತತ್ತರಿಸಿದ ಗ್ರಾಮಸ್ಥರ ನಿರಂತರ ಹೋರಾಟದಿಂದ ಸರಕಾರ ಹಸಿರು ವಲಯ ನಿರ್ಮಾಣ, ಶಬ್ದ, ವಾಯು ಮಾಲಿನ್ಯಕ್ಕೆ ತಡೆ, ಹಾರುಬೂದಿಯಿಂದ ಸಂರಕ್ಷಣೆಗೆ ನಿಗದಿತ ಕಾಲಮಿತಿಯೊಳಗೆ ಸೂಕ್ತ ಕ್ರಮ ಕೈಗೊಳ್ಳಲು 2016ರ ಎಪ್ರಿಲ್‌ನಲ್ಲಿ ಸರಕಾರ ಆದೇಶಿಸಿದೆ. ಆದರೆ ಕಂಪೆನಿ ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಧರಣಿನಿರತು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಕಂಪೆನಿ ಸುತ್ತಮುತ್ತಲಿನ ಗ್ರಾಮಸ್ಥರ ಬದುಕು ದುಸ್ತರವಾಗಿದೆ. ಈ ನಡುವೆ ಕಂಪೆನಿ ಮತ್ತೆ ಒಂದು ಸಾವಿರ ಕೃಷಿ ಭೂಮಿ ಸ್ವಾಧೀನಪಡಿಸಿ ನಾಲ್ಕನೇ ಹಂತದ ಘಟಕ ಸ್ಥಾಪಿಸಲು ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ. ಆದ್ದರಿಂದ ಸರಕಾರದ ಆದೇಶವನ್ನು ಧಿಕ್ಕರಿಸಿ, ನಿಯಮಬಾಹಿರವಾಗಿ ಕಾರ್ಯಾಚರಿಸುತ್ತಿರುವ ಎಂಆರ್‌ಪಿಎಲ್ ಕಂಪೆನಿಯ ಪೆಟ್ ಕೋಕ್, ಸಲ್ಫರ್ ಘಟಕಕ್ಕೆ ಸರಕಾರ ಕೂಡಲೇ ಬೀಗ ಜಡಿಯಬೇಕು, ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕಂಪೆನಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು, ಜೋಕಟ್ಟೆ ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸಬೇಕು ಹಾಗೂ ಎಂಆರ್‌ಪಿಎಲ್ ನಾಲ್ಕನೇ ಹಂತದ ವಿಸ್ತರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಧರಣಿನಿರತರು ಒಕ್ಕೊರಲಿನಿಂದ ಒತ್ತಾಯಿಸಿದರು.

 ಇದಕ್ಕೂ ಮೊದಲು ಜೋಕಟ್ಟೆ ಗ್ರಾಮಸ್ಥರು ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗದಿಂದ ದ.ಕ. ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ಪೊರಕೆಗಳನ್ನು ಹಿಡಿದು ಧರಣಿ ನಡೆಸಿದರು.

ಧರಣಿಯ ನೇತೃತ್ವವನ್ನು ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಬಿ.ಎಸ್.ಹುಸೈನ್, ಜೋಕಟ್ಟೆ ಗ್ರಾಪಂ ಉಪಾಧ್ಯಕ್ಷ ಸಂಶುದ್ದೀನ್, ಸದಸ್ಯರಾದ ಅಬೂಬಕರ್ ಬಾವ, ಶರೀಫ್ ಜೋಕಟ್ಟೆ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಎಸ್‌ಎಫ್‌ಐ ಮುಖಂಡ, ನಿತಿನ್ ಕುತ್ತಾರ್, ಸ್ಥಳೀಯರಾದ ಪೊಡಿಂಞಿ ಮೋನು, ಶೇಖರ್, ಭವಾನಿ, ಯಮುನಕ್ಕ ಮೊದಲಾದವರು ಭಾಗವಹಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News