ಪಾಣೆಮಂಗಳೂರು: ದಾರುಲ್ ಇಸ್ಲಾಂ ಅನುದಾನಿತ ಶಾಲೆಯಲ್ಲಿ ಅಧ್ಯಾಪಕರೇ ವಾಹನ ಚಾಲಕರು!

Update: 2018-03-08 11:36 GMT

ಸರಕಾರಿ ಕನ್ನಡ ಶಾಲೆಯ ಉಳಿವಿಗೆ 9 ವರ್ಷಗಳಿಂದ ಶ್ರಮ!

ಬಂಟ್ವಾಳ, ಮಾ.8: ರಾಜ್ಯದಲ್ಲಿ ಖಾಸಗಿ ಶಾಲೆಗಳ ಪ್ರಭಾವದಿಂದ ಕನ್ನಡ ಶಾಲೆಗಳು ನಿರಂತರ ವಾಗಿ ಮುಚ್ಚುತ್ತಿರುವ ಈ ಕಾಲದಲ್ಲಿಯೂ ಸರ ಕಾರಿ ಶಾಲೆಯನ್ನು ಉಳಿಸುವ ಸಲುವಾಗಿ ಪಾಣೆ ಮಂಗಳೂರಿನ ಅನುದಾನಿತ ಹಿ.ಪ್ರಾ. ಶಾಲೆಯ ಅಧ್ಯಾಪಕರು ವಿನೂತನವಾಗಿ ಪಣತೊಟ್ಟಿದ್ದಾರೆ.

ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹೋಬಳಿಯ ಅಕ್ಕರಂಗಡಿ ದಾರುಲ್ ಇಸ್ಲಾಂ ಅನುದಾನಿತ ಹಿ.ಪ್ರಾ. ಶಾಲೆಯ ಇಬ್ಬರು ಅಧ್ಯಾ ಪಕರು ಪಾಠದ ಜೊತೆಗೆ ಶಾಲಾ ವಾಹನದ ಮೂಲಕ ಮಕ್ಕಳನ್ನು ಶಾಲೆಗೆ ಕರೆತರುವ ಹಾಗೂ ಸಂಜೆ ಮನೆಗೆ ಬಿಡುವ ಕೆಲಸ ಮಾಡುತ್ತಿದ್ದಾರೆ. ಈ ವ್ಯವಸ್ಥೆಯು ಕಳೆದ 9ವರ್ಷಗಳಿಂದ ನಡೆದುಕೊಂಡು ಬಂದಿದೆ.

ಈ ಶಾಲೆಯ ಸಹಶಿಕ್ಷಕ ನೂರುದ್ದೀನ್ ಹಾಗೂ ದೈಹಿಕ ಶಿಕ್ಷಕ ರಾಧಾಕೃಷ್ಣರವರು ಬೆಳಗ್ಗೆ ಕಾರಿನಲ್ಲಿ ಮನೆ, ಮನೆಗೆ ಹೋಗಿ ಮಕ್ಕಳನ್ನು ಕರೆತರುವ ಹಾಗೂ ಸಂಜೆ ಮನೆಗೆ ಬಿಡುವ ಮೂಲಕ ವಿಶೇಷ ಮುತುವರ್ಜಿಯನ್ನು ವಹಿಸಿಕೊಂಡಿದ್ದಾರೆ. ಮೊದಲು ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದರು. ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ವಿದ್ಯಾರ್ಥಿಗಳ ಸಂಖ್ಯೆ ಕುಂಟುತ್ತಾ ಬಂದಿದೆ. ಅಲ್ಲದೆ, ಇಲ್ಲಿ ಶಾಲಾ ವಾಹನದ ವ್ಯವಸ್ಥೆಯಿಲ್ಲದೆ ಹಾಗೂ ಇನ್ನಿತರ ಕಾರಣಗಳಿಂದ ಕೆಲ ವಿದ್ಯಾರ್ಥಿಗಳು ಅರ್ಧದಲ್ಲಿಯೇ ಮೊಕಟುಗೊಳಿಸಿ ಬೇರೆ ಶಾಲೆಗಳಿಗೆ ಸೇರಿದ್ದು, ಇನ್ನು ಕೆಲವರು ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.

ಗಂಭೀರವಾದ ವಿಷಯನ್ನು ಮನಗಂಡ ಇಲ್ಲಿನ ಅಧ್ಯಾಪಕರು, ತಮ್ಮ ಕೈಯಿಂದ ವೆಚ್ಚ ಭರಿಸಿ ಒಂದು ಓಮ್ನಿ ಕಾರು ಹಾಗೂ ಅಂಬಾಸೆಡರ್ ಕಾರನ್ನು ಕೊಂಡುಕೊಳ್ಳುವ ಮೂಲಕ ಕಳೆದ 9 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಂಡು ಬಂದಿದ್ದಾರೆ.

ಅಧ್ಯಾಪಕರ ತಿಂಗಳ ವೇತನ ಹಾಗೂ ಸೋಡ್ತಿಯ ಮೂಲಕ ಹಣವನ್ನು ಸಂಗ್ರಹಿಸಿ 2 ವಾಹನಗಳನ್ನು ಖರೀದಿಸಿದ್ದೇವೆ. ಈ ಶಾಲೆಗೆ ಬರುವ ವಿದ್ಯಾರ್ಥಿಗಳು ಆರ್ಥಿಕವಾಗಿ ಕಡು ಬಡವರಾದ ಕಾರಣ ಮಕ್ಕಳಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ. ಈ ವಾಹನಗಳ ಡಿಸೇಲ್ ಹಾಗೂ ದುರಸ್ತಿ ಖರ್ಚಿಗೆ ವಾರ್ಷಿಕ 2.5 ಲಕ್ಷ ರೂ. ಬೇಕಾಗುತ್ತಿದ್ದು, ಅಧ್ಯಾಪಕರ ತಿಂಗಳ ವೇತನವನ್ನು ಉಳಿತಾಯ ಮಾಡುವ ಮೂಲಕ ಭರಿಸುತ್ತಿದ್ದೇವೆ. ವಾಹನಗಳಲ್ಲಿ ತಾಂತ್ರಿಕ ದೋಷ ಗಳು ಕಂಡುಬಂದರೆ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿ ಯಿಂದ ವಾಹನಗಳನ್ನು ಬದಲಾಯಿಸಿದ್ದೂ ಉಂಟು ಎಂದು ಶಾಲಾ ಮುಖ್ಯ ಶಿಕ್ಷಕ ಫಕ್ರುದ್ದೀನ್ ಹೇಳಿದರು.

ಇದೀಗ 1ರಿಂದ 7ನೆ ತರಗತಿಯಿದ್ದು, 180ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 7ಅಧ್ಯಾಪಕರು ತಮ್ಮ ಸೇವೆಯಲ್ಲಿ ತೊಡಗಿಕೊಂಡಿದ್ದು, ವರ್ಷದ ಹಿಂದೆ ಯಷ್ಟೇ ಅಧ್ಯಾಪಕರೊಬ್ಬರು ನಿವೃತ್ತಿಯಾಗಿದ್ದಾರೆ. ನಂತರ ಇಬ್ಬರು ಅಧ್ಯಾಪಕರನ್ನು ನೇಮಿಸಲಾಗಿದೆ. ಇವರಿಗೂ ನಮ್ಮ ಕೈಯಿಂದ ತಿಂಗಳ ವೇತನವನ್ನು ನೀಡುತ್ತಿದ್ದೇವೆ ಎಂದು ಹೇಳುತ್ತಾರೆ ಫಕ್ರುದ್ದೀನ್.

ಮುಸ್ಲಿಮ್ ಯುವ ವೇದಿಕೆ ಹಾಗೂ ಹಳೆಯ ವಿದ್ಯಾರ್ಥಿ ಸಂಘವು ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕಗಳನ್ನು ನೀಡುವ ಮೂಲಕ ಶಾಲೆಗೆ ಇನ್ನೊಂದು ಭುಜವಾಗಿ ನಿಂತಿದೆ. ಶಾಲಾ ಬಸ್ ಖರೀದಿಸುವ ಯೋಜನೆ ನಮ್ಮ ಮುಂದೆಯಿದ್ದು. ಹಣದ ಕೊರತೆಯಿದೆ. ದಾನಿ ಗಳ ನಿರೀಕ್ಷೆಯನ್ನು ಬಯಸುತ್ತಿದ್ದೇವೆ. ಸಹಾಯ ಮಾಡಲು ಬಯಸುವವರು ಅಕ್ಕರಂಗಡಿ ದಾರುಲ್ ಇಸ್ಲಾಂ ಅನುದಾನಿತ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಫಕ್ರುದ್ದೀನ್ (ಮೊ.ಸಂ.-9743902889) ರನ್ನು ಸಂಪರ್ಕಿಸಬಹುದು.

ಈ ಸೇವೆ ನಮಗೆ ಖುಷಿ ತಂದಿದೆ. ಸುಮಾರು 9 ವರ್ಷಗಳಿಂದ ಈ ಸೇವೆ ಯನ್ನು ಮಾಡುತ್ತಾ ಬಂದಿದ್ದೇನೆ. ಮಕ್ಕ ಳನ್ನು ಕರೆದು ತರಲು ಶಾಲಾ ಆಡಳಿತ ದಿಂದ ಯಾವುದೇ ಹೆಚ್ಚಿನ ಸಂಭಾವನೆ ತೆಗೆದು ಕೊಳ್ಳುವುದಿಲ್ಲ. ಬೆಳಗ್ಗೆ 8ಕ್ಕೆ ಹೊರಟು ಮಕ್ಕಳನ್ನು ಕರೆತರುವ ಕೆಲಸ ಮಾಡುತ್ತಿದ್ದೇನೆ. ಸಂಜೆ ಮತ್ತೆ ಮಕ್ಕಳನ್ನು ಮನೆಗೆ ಬಿಟ್ಟು ನಾನು ಮನೆಗೆ ಹೋಗುವಾಗ 7ಗಂಟೆಯಾಗುತ್ತದೆ. ನಾನು ರಜೆಯಿದ್ದ ಸಂದರ್ಭ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟು ಹೋಗುತ್ತೇನೆ. ಸಂಜೆ ಶಾಲೆ ಬಿಡುವ ಹೊತ್ತಿಗೆ ಬಂದು ಕರೆದುಕೊಂಡು ಹೋಗುತ್ತೇನೆ. ಅನಿವಾರ್ಯ ಕಾರಣಗಳಿಂದ ರಜೆಯಿದ್ದ ಸಂದಭರ್ ಸ್ನೇಹಿತ ನೂರುದ್ದೀನ್ ಎಲ್ಲಾ ಮಕ್ಕಳನ್ನು ಬಿಡುವ ಕೆಲಸ ಮಾಡುತ್ತಾರೆ. ಮಕ್ಕಳ ಜವಾಬ್ದಾರಿಯನ್ನು ವಹಿಸಿದ ನಾವು ಪರ್ಯಾಯ ಚಾಲಕರನ್ನು ನೇಮಿಸಿಲ್ಲ.

ರಾಧಾಕೃಷ್ಣ , ದೈಹಿಕ ಶಿಕ್ಷಕ, (ಕಾರು ಚಾಲಕ)

ನಮ್ಮ ಶಾಲೆಯಲ್ಲಿ ಇದೀಗ 180ಕ್ಕೂ ಹೆಚ್ಚಿನ ವಿದ್ಯಾರ್ಥಿ ಗಳು ಕಲಿಯುತ್ತಿದ್ದಾರೆ. ಅದರಲ್ಲಿ 80ಕ್ಕೂ ಅಧಿಕ ವಿದ್ಯಾರ್ಥಿಗಳು ನರಿಕೊಂಬು, ಗೋಳ್ತಮಜಲು, ನಂದಾವರ, ಕಲ್ಲಡ್ಕ, ಮೊಗರ್‌ನಾಡು, ಗೂಡಿನಬಳಿ, ಆಲಡ್ಕ, ಬೊಗೋಡಿಯಂತಹ ವಿವಿಧ ದೂರದ ಗ್ರಾಮದಿಂದ ಬರುತ್ತಿದ್ದಾರೆ. ಈ ಮಕ್ಕಳು ಸರಕಾರಿ ಹಾಗೂ ಖಾಸಗಿ ಬಸ್‌ನಲ್ಲಿ ಬರುವುದು ತ್ರಾಸದಾಯಕ. ಅಲ್ಲದೆ ಹೆದರಿಕೆಯಿಂದ ಮನೆಮಂದಿ ಕಳುಹಿ ಸುವುದು ಇಲ್ಲ. ಅದಕ್ಕಾಗಿ ಅಧ್ಯಾಪಕ ರೆಲ್ಲರೂ ಸೇರಿ ಗುಣಮಟ್ಟದ ಹಳೆಯ ಎರಡು ವಾಹನಗಳನ್ನು ಖರೀದಿಸಿದ್ದೇವೆ. ಎರಡು ಕಾರಿನಲ್ಲಿ ಬೆಳಗ್ಗೆ ಮೂರು ಟ್ರಿಪ್‌ಗಳಂತೆ ಆರು ಟ್ರಿಪ್‌ಗಳನ್ನು ಮಾಡುತ್ತೇವೆ. ಅದೇ ರೀತಿ ಸಂಜೆ ಕೂಡಾ. ದಿನಾಲೂ 12 ಟ್ರಿಪ್‌ಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ.

ಫಕ್ರುದ್ದೀನ್,ಶಾಲಾ ಮುಖ್ಯ ಶಿಕ್ಷಕ 

ಜಿಲ್ಲೆಯಲ್ಲಿ ಹಲವಾರು ಶಾಲೆಗಳು ಕೆಲವೊಂದು ವಿಶೇಷತೆಗಳನ್ನು ಪಡೆದಿದ್ದರೆ, ತಾನು ಕಲಿತ ದಾರುಲ್ ಇಸ್ಲಾಂ ಶಾಲೆಯ ಅಧ್ಯಾಪಕರ ಸಮರ್ಪಣೆ ಹಾಗೂ ಸೇವಾ ಮನೋಭಾವವು ಹೃದಯಸ್ಪರ್ಶಿಯಾಗಿದೆ. ಇಂತಹ ಸೇವೆಗೂ, ಅಧ್ಯಾಪಕ ಮಿತ್ರ ರಿಗೂ ಅಭಾರಿಯಾಗಿದ್ದೇನೆ. ಸರಕಾರದ ಅನುದಾನಿತ ಶಾಲೆಯಾಗಿದ್ದರೂ ದಾನಿಗಳು, ಜನಪ್ರತಿನಿಧಿಗಳ ಕೊಡುಗೆಯ ಮೂಲಕ ಶಾಲೆಯನ್ನು ಇನ್ನಷ್ಟು ಅಭಿವದ್ಧಿಗೊಳಿಸಲು ಕೈ ಜೋಡಿಸಬೇಕಾಗಿದೆ.

ಇಮ್ರಾನ್ ಪಿ.ಜೆ., ಹಳೆಯ ವಿದ್ಯಾರ್ಥಿ

Writer - ಅಬ್ದುಲ್ ರಹ್ಮಾನ್, ತಲಪಾಡಿ

contributor

Editor - ಅಬ್ದುಲ್ ರಹ್ಮಾನ್, ತಲಪಾಡಿ

contributor

Similar News