ವೈದ್ಯರಿಂದ ವೇತನ ಹೆಚ್ಚಳ ವಿರುದ್ಧ ಪ್ರತಿಭಟನೆ!
ಟೊರಾಂಟೊ, ಮಾ. 8: ತಮಗೆ ವೇತನ ಏರಿಕೆ ಮಾಡಿರುವುದನ್ನು ಪ್ರತಿಭಟಿಸಿ ಕೆನಡದ ನೂರಾರು ವೈದ್ಯರು ಮತ್ತು ವೈದ್ಯಕೀಯ ಸ್ಪೆಶಲಿಸ್ಟ್‌ಗಳು ಸರಕಾರಕ್ಕೆ ಮನವಿಯೊಂದನ್ನು ಸಲ್ಲಿಸಿದ್ದಾರೆ ಹಾಗೂ ತಮ್ಮ ಏರಿಕೆಯ ಹಣವನ್ನು ನರ್ಸ್‌ಗಳು ಮತ್ತು ಅಗತ್ಯವಿರುವ ರೋಗಿಗಳಿಗೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ನಂಬಲು ಅಸಾಧ್ಯವಾದ ಸುದ್ದಿಯಾದರೂ ನಂಬಲೇ ಬೇಕು!
‘‘ಪ್ರಬಲ ಸಾರ್ವಜನಿಕ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವ ಕ್ಯೂಬೆಕ್‌ನ ವೈದ್ಯರಾದ ನಾವು, ನಮ್ಮ ವೈದ್ಯಕೀಯ ಫೆಡರೇಶನ್‌ಗಳ ಮಧ್ಯಸ್ಥಿಕೆಯಲ್ಲಿ ನಡೆದ ಇತ್ತೀಚಿನ ವೇತನ ಏರಿಕೆಯನ್ನು ವಿರೋಧಿಸುತ್ತೇವೆ’’ ಎಂಬುದಾಗಿ ಫ್ರೆಂಚ್ ಭಾಷೆಯಲ್ಲಿರುವ ಮನವಿ ಹೇಳುತ್ತದೆ.
ಫ್ರೆಂಚ್ ಕೆನಡದ ಕ್ಯೂಬೆಕ್ ರಾಜ್ಯದ ಅಧಿಕೃತ ಭಾಷೆಯಾಗಿದೆ.
ಪ್ರತಿಭಟನಾ ಅರ್ಜಿಗೆ ಫೆಬ್ರವರಿ 25ರಂದು ಚಾಲನೆ ನೀಡಿದ ಬಳಿಕ 700ಕ್ಕೂ ಅಧಿಕ ಮಂದಿ ಅದಕ್ಕೆ ತಮ್ಮ ಹೆಸರನ್ನು ಸೇರಿಸಿ ಸಹಿ ಹಾಕಿದ್ದಾರೆ. ಮಂಗಳವಾರದ ವೇಳೆಗೆ, 213 ಜನರಲ್ ಪ್ರಾಕ್ಟೀಶನರ್‌ಗಳು, 184 ವಿಶೇಷ ಪರಿಣತರು, 149 ಸ್ಥಾನಿಕ ವೈದ್ಯರು ಮತ್ತು 162 ವೈದ್ಯಕೀಯ ವಿದ್ಯಾರ್ಥಿಗಳು ಅರ್ಜಿಗೆ ತಮ್ಮ ಹೆಸರು ಸೇರಿಸಿದ್ದಾರೆ ಎಂದು ಸಿಎನ್‌ಬಿಸಿ ತಿಳಿಸಿದೆ.
ಒಂದು ಕಡೆ ವೇತನ ಹೆಚ್ಚಳದ ವಿರುದ್ಧ ವೈದ್ಯರು ಸಿಡಿದೆದ್ದರೆ, ಸಾರ್ವಜನಿಕ ಆರೋಗ್ಯ ರಕ್ಷಣೆ ವ್ಯವಸ್ಥೆಗೆ ನಿಧಿಯನ್ನು ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ನರ್ಸ್‌ಗಳು ಮತ್ತು ಗುಮಾಸ್ತರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ ಹಾಗೂ ರೋಗಿಗಳಿಗೆ ನೀಡುತ್ತಿರುವ ಸೇವೆಯ ಗುಣಮಟ್ಟ ಕುಸಿದಿದೆ.
ಏರಿಕೆ ಆಘಾತಕಾರಿ
‘‘ಇತ್ತೀಚಿನ ವರ್ಷಗಳಲ್ಲಿ ಮಾಡಲಾಗಿರುವ ಭಾರೀ ನಿಧಿ ಕಡಿತದಿಂದಾಗಿ ನಮ್ಮ ನರ್ಸ್‌ಗಳು, ಗುಮಾಸ್ತರು ಮತ್ತು ಇತರರು ಅತ್ಯಂತ ಕಠಿಣ ಕೆಲಸದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಹಾಗೂ ರೋಗಿಗಳಿಗೆ ಅಗತ್ಯ ಸೇವೆಗಳು ಸಿಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ವೈದ್ಯರಿಗೆ ವೇತನ ಏರಿಕೆ ಮಾಡಿರುವುದು ಆಘಾತಕಾರಿಯಾಗಿದೆ’’ ಎಂದು ಅರ್ಜಿ ಹೇಳಿದೆ.